ಸಿಂಧನೂರು: ತುಂಗಭದ್ರ ಎಡದಂಡೆ ಕಾಲುವೆ ಕೊನೆ ಭಾಗದ ನಾಲೆಗಳಿಗೆ ಸಮರ್ಪಕ ನೀರು ಹರಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವೆಂಕಟರಾವ್ ನಾಡಗೌಡ ತಾಕೀತು ಮಾಡಿದರು.
ನಗರದ ಶಾಸಕರ ಕಾರ್ಯಾಲಯದಲ್ಲಿ ಶನಿವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಿಂಧನೂರು ತಾಲೂಕಿನ ರವಡಕುಂದ, ಸಾಲಗುಂದ, ವಳಬಳ್ಳಾರಿ, ದಿದ್ದಿಗಿ, ಅಂಬಾಮಠ, ಹುಡಾ ಸೇರಿದಂತೆ ಅನೇಕ ಕೊನೆ ಭಾಗದ ಹಳ್ಳಿಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದರಿಂದ ರೈತರು ಚಿಂತಿತರಾಗಿದ್ದಾರೆ ಎಂದರು.
ಇನ್ನು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ರಂಧ್ರ ಹಾಕಿ ಅಕ್ರಮವಾಗಿ ನೀರು ಪಡೆಯುತ್ತಿರುವ ಮಾಹಿತಿ ಇದೆ. ಕೂಡಲೇ ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಕಾಲುವೆಯಿಂದ ನೀರು ಹರಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ ಎಂದರು.
ಈಗಾಗಲೇ ಮೇಲ್ಭಾಗದ ರೈತರು ಬೆಳೆದ ಭತ್ತ ಕೋಯ್ಲಿಗೆ ಬಂದಿದ್ದು, ಈಗ ಅವರಿಗೆ ನೀರಿನ ಕೊರತೆ ಇಲ್ಲ. ಅಧಿಕಾರಿಗಳು ಸರಿಯಾಗಿ ಗೇಜ್ ನಿರ್ವಹಿಸಿ ಕೊನೆ ಭಾಗಕ್ಕೆ ನೀರು ಹರಿಸಬೇಕು. ಇದರಿಂದ ಭತ್ತ, ಜೋಳ ಇತರೆ ಬೆಳೆ ಬೆಳೆದ ರೈತರಿಗೆ ಅನುಕೂಲವಾಗಲಿದೆ ಎಂದರು.
ಕಾಲುವೆ ಮೇಲೆ ರಾತ್ರಿ ಹಗಲು ತಿರುಗಾಡಿ ಅಕ್ರಮವಾಗಿ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಗಮನಕ್ಕೆ ತರುವಂತೆ ಸೂಚಿಸಿದರು.
ಮುಖಂಡರಾದ ಧರ್ಮನಗೌಡ, ಪಂಪಾರೆಡ್ಡಿ, ಬಸನಗೌಡ, ಕಾರಟಗಿ, ಸಿಂಧನೂರು, ಮಸ್ಕಿ, ತುರ್ವಿಹಾಳ, ಜವಳಗೇರಾ ಭಾಗದ ಅಧಿ ಕಾರಿಗಳಾದ ಹನುಮಂತಪ್ಪ, ಈರಣ್ಣ, ಪ್ರಕಾಶ, ಸೂಗಪ್ಪ, ನಾಗಪ್ಪ, ಚಂದ್ರಶೇಖರ ಇತರರು ಇದ್ದರು.