ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದ ಭತ್ತದ ಕಣಜವಾದ ಸಿಂಧನೂರು ನಗರದ ಬಾಲಕ, ಬಾಲಕಿಯರ ವಸತಿ ನಿಲಯಗಳಲ್ಲಿ ಸೌಲಭ್ಯಗಳ ಕೊರತೆ ಇದ್ದು, ಅವ್ಯವಸ್ಥೆ ತಾಣಗಳಾಗಿವೆ. ನಗರದಲ್ಲಿ ವಿವಿಧ ಇಲಾಖೆಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ಸೇರಿ 6 ವಸತಿ ನಿಲಯಗಳಿವೆ. ನಗರದ ವಸತಿ ನಿಲಯಗಳಲ್ಲಿ ಸುತ್ತಮುತ್ತಲಿನ 25-30 ಕಿ.ಮೀ. ದೂರದ ಗ್ರಾಮೀಣ ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳಿದ್ದಾರೆ.
ಬಹುತೇಕ ವಸತಿ ನಿಲಯಗಳಲ್ಲಿ ಮೂಲ ಸೌಲಭ್ಯ ಕೊರತೆ ಇದೆ. ಕುಡಿಯುವ ನೀರು, ಶೌಚಾಲಯ ಸಮಸ್ಯೆ, ಶೌಚಾಲಯ ನಿರ್ವಹಣೆ ಸಮಸ್ಯೆ, ಗ್ರಂಥಾಲಯ ಸೌಲಭ್ಯಗಳಿಲ್ಲ, ಪದೇಪದೇ ವಿದ್ಯುತ್ ಕೈಕೊಡುತ್ತಿದೆ. ಕೊಠಡಿಯಲ್ಲಿನ ಬಾಗಿಲುಗಳು ಮುರಿದಿದ್ದು, ಭದ್ರತೆ ಇಲ್ಲದಂತಾಗಿದೆ. ವಸತಿ ನಿಲಯ ಸುತ್ತಮುತ್ತ ಅಸ್ವತ್ಛತೆ, ಚರಂಡಿ ದುರ್ವಾಸನೆ ಮಧ್ಯೆ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಪರಿಸ್ಥಿತಿ ಇದೆ.
ಮೆಟ್ರಿಕ್ ಪೂರ್ವ ವಸತಿ ನಿಲಯ: ನಗರದ ಕುಷ್ಟಗಿ ರಸ್ತೆಯಲ್ಲಿನ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಸತಿ ನಿಲಯವು 2000ನೇ ಸಾಲಿನಲ್ಲಿ ಆರಂಭಗೊಂಡಿದೆ. ಇಲ್ಲಿ ಸ್ನಾನಗೃಹಗಳಿಲ್ಲದ್ದರಿಂದ ವಿದ್ಯಾರ್ಥಿಗಳು ವಸತಿ ನಿಲಯ ಆವರಣದಲ್ಲೇ ಸ್ನಾನ ಮಾಡಬೇಕಿದೆ. ಅಕ್ಕಪಕ್ಕದ ಚರಂಡಿಗಳ ದುರ್ವಾಸನೆ ಮಧ್ಯೆ ವಿದ್ಯಾರ್ಥಿಗಳು ಆಹಾರ ಸೇವಿಸಬೇಕಿದೆ. ಇನ್ನು ಸುಕಾಲಪೇಟೆಯ ರಸ್ತೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿದೆ. ಮುಖ್ಯ ರಸ್ತೆಯಲ್ಲಿ ವಸತಿ ನಿಲಯ ಇದ್ದು ವಾಹನಗಳ ಓಡಾಟದಿಂದ ಓದಲು ತೊಂದರೆ ಆಗುತ್ತಿದೆ ಎಂಬುದು ವಿದ್ಯಾರ್ಥಿನಿಯರ ಅಳಲಾಗಿದೆ.
ಮೆಟ್ರಿಕ್ ನಂತರ ವಸತಿ ನಿಲಯ: ಪಿಡಬ್ಲೂಡಿ ಕ್ಯಾಂಪ್‌ನಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕುಡಿಯುವ ನೀರು, ಶೌಚಾಲಯದಂತಹ ಮೂಲ ಸೌಲಭ್ಯಗಳ ಕೊರತೆ ಇದೆ. ಸಂಬಂಧಿಸಿದ ಇಲಾಖೆ ಅ ಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಒದಗಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ನಗರದ ಜನತಾ ಕಾಲೋನಿಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಅಕ್ಕಪಕ್ಕ ಅಸ್ವಚ್ಛತೆ ಇದೆ. ಪದೇ ಪದೇ ವಿದ್ಯುತ್ ಸಮಸ್ಯೆ ಆಗುತ್ತಿದೆ. ಇದರಿಂದ ಓದಲು ತೊಂದರೆ ಆಗುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ನಗರದ ಕುಷ್ಟಗಿ ರಸ್ತೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕುಡಿಯುವ ನೀರು, ಶೌಚಾಲಯ ಇತರೆ ಸಮಸ್ಯೆ ಇದೆ ಎನ್ನುತ್ತಾರೆ ವಿದ್ಯಾರ್ಥಿನಿಯರು. ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ವಸತಿ ನಿಲಯಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ನಿತ್ಯ ಬಯಲಲ್ಲಿ ಸ್ನಾನ ಮಾಡುವುದು ನಮ್ಮ ಪಾಡಾಗಿದೆ. ಚಳಿ ಹಾಗೂ ಮಳೆಗಾಲದಲ್ಲಿ ಸ್ನಾನ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ವಸತಿ ನಿಲಯದಲ್ಲಿ ಸೌಲಭ್ಯಗಳ ಕೊರತೆ ಇದೆ.
ವಿದ್ಯಾರ್ಥಿಗಳು,
ಕುಷ್ಟಗಿ ರಸ್ತೆಯ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಸತಿ ನಿಲಯ
ಈಗಾಗಲೇ ಕೆಲ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿವೆ. ಹೊಸ
ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿವೆ. ವಸತಿ ನಿಲಯಗಳಲ್ಲಿನ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.
ಮಹ್ಮದ್ ಶಫಿ,
ಪ್ರಭಾರಿ ತಾಲೂಕು ವಸತಿ ನಿಲಯ
ವಿಸ್ತರಣಾಧಿಕಾರಿ
ಚಂದ್ರಶೇಖರ ಯರದಿಹಾಳ