ಸಿಂಧನೂರು: ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ, ಕುಡಿಯುವ ನೀರು, ಕರೆಂಟ್ ಕೈಕೊಟ್ಟರೆ ಜನರೇಟರ್, ಚಿಕಿತ್ಸೆಗೆ ಅಗತ್ಯ ಪರಿಕರ ಸೇರಿ ಹಲವು ಸೌಲಭ್ಯಗಳಿಂದ ನರಳುತ್ತಿದೆ.
ರಾಯಚೂರು ಜಿಲ್ಲೆಯಲ್ಲೇ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆ ಸಿಂಧನೂರಿಗಿದೆ. ತಾಲೂಕು ಕೇಂದ್ರದ ಆಸ್ಪತ್ರೆಗೆ ತಾಲೂಕಿನ ವಿವಿಧ ಗ್ರಾಮ ಸೇರಿ ನೆರೆ ತಾಲೂಕುಗಳ ಗ್ರಾಮೀಣ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ನಿತ್ಯ ಸಾವಿರಾರು ರೋಗಿಗಳು, ಗರ್ಭಿಣಿಯರು ಇಲ್ಲಿಗೆ ಚಿಕಿತ್ಸೆಗೆ ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಸೌಲಭ್ಯಗಳಿಲ್ಲದೇ ಪರದಾಡುವಂತಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಭರಿಸಿ ಚಿಕಿತ್ಸೆ ಪಡೆಯಲಾಗದ ನಗರ ಹಾಗೂ ಗ್ರಾಮೀಣ ಬಡ ರೋಗಿಗಳು ಇಲ್ಲಿಗೆ ಬರುತ್ತಾರೆ. ಆದರೆ ಆಸ್ಪತ್ರೆಯೊಳಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇರುವ ಜನರೇಟರ್ ದುರಸ್ತಿಗೀಡಾಗಿದ್ದು, ಕರೆಂಟ್ ಪರ್ಯಾಯ ವ್ಯವಸ್ಥೆ ಇಲ್ಲ. ಐಸಿಯು, ಶೌಚಾಲಯ, ಕುಳಿತುಕೊಳ್ಳಲು ಆಸನಗಳು ಇನ್ನಿತರ ಮೂಲ ಸೌಲಭ್ಯಗಳೇ ಇಲ್ಲ. ಇನ್ನು ರೋಗಿಗಳ ಚಿಕಿತ್ಸೆಗೆ ಸ್ಪಂದಿಸಬೇಕಾದ ಇಲ್ಲಿನ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯ ಇರುವುದಿಲ್ಲ. ಹೀಗಾಗಿ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.
ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ವೈದ್ಯಾಧಿಕಾರಿಗಳ ತಂಡದ ಎದುರು ಸಾರ್ವಜನಿಕರು ಸೇರಿ ಜಿಪಂ ಸದಸ್ಯ ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡ ಇತರರು ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಬಿಡಿಸಿಟ್ಟರು. ಆದರೆ ಈವರೆಗೆ ಯಾವುದೇ ಸಮಸ್ಯೆ ಪರಿಹಾರ ಆಗಿಲ್ಲ.
ಖುಷಿಗಾಗಿ ಹಣ ವಸೂಲಿ: ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದರೆ ಬಾಣಂತಿಯರು ಮತ್ತು ಅವರ ಸಂಬಂಧಿಕರಿಂದ ನರ್ಸ್ ಇತರೆ ಸಿಬ್ಬಂದಿ ಖುಷಿ ನೀಡುವಂತೆ ಪೀಡಿಸಿ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪ್ರತಿ ಹೆರಿಗೆಗೆ ಸಾವಿರಾರು ರೂ. ವಸೂಲಿ ಮಾಡುತ್ತಾರೆ. ಹಣ ನೀಡದಿದ್ದರೆ ತಾಯಿ ಕಾರ್ಡ್ ಕೊಡಲು ಸತಾಯಿಸುತ್ತಾರೆ ಎಂದು ಗರ್ಭಿಣಿಯರು, ಬಾಣಂತಿಯರು ದೂರಿದ್ದಾರೆ.
ಆಸ್ಪತ್ರೆ ಆವರಣದಲ್ಲಿ ಕೊಳಚೆ: ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಆವರಣದಲ್ಲೇ ವಸತಿಗೃಹಗಳಿವೆ. ವಸತಿ ಗೃಹಗಳ ಎದುರು ಸ್ವಚ್ಛತೆ ಇಲ್ಲದಾಗಿದೆ. ಮಳೆ ಬಂದರೆ ಕೊಳಚೆ ಪ್ರದೇಶದಂತಾಗಿ, ನಾಯಿ, ಹಂದಿಗಳ ಗೂಡಾಗುತ್ತದೆ. ಸೊಳ್ಳೆ ಹಾವಳಿ ಹೆಚ್ಚಿದೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು. ಹೆರಿಗೆಯಾದ ಬಾಣಂತಿಯರು ಮತ್ತು ಅವರ ಸಂಬಂಧಿಕರಿಂದ ಹಣ ವಸೂಲಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ. ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ, ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಗರ್ಭಿಣಿಯರಿಂದ ಖುಷಿಗಾಗಿ ಹಣ ಕೇಳುವ ಪ್ರವೃತ್ತಿ ಆಸ್ಪತ್ರೆ ಸಿಬ್ಬಂದಿ ರೂಢಿಸಿಕೊಂಡಿದ್ದಾರೆ.
•ನಾಗರಾಜ ಪೂಜಾರ, ಆರ್.ವೈ.ಎಸ್.ಎಫ್.ವೈ ಸಂಘಟನೆ ಮುಖಂಡ
•ಚಂದ್ರಶೇಖರ ಯರದಿಹಾಳ