ಸಿಂಧನೂರು: ರೈತರ ಬೆಳೆ ಸಾಲ ನವೀಕರಣ ಮಾಡಲು ಬ್ಯಾಂಕ್‌ನವರು ಸಿದ್ಧವಾದರೂ ಜಮೀನು ಒತ್ತೆ ಪ್ರಕ್ರಿಯೆ ಮಾಡಿಸಲು ಮೂರ್‍ನಾಲ್ಕು ತಿಂಗಳು ಕಾಯಬೇಕು. ಆಸ್ತಿ ಖರೀದಿ, ಮಾರಾಟವಾಗಲಿಕ್ಕೂ ಸರತಿ ಬರುವ ತನಕ ನಿತ್ಯ ಅಲೆಯಬೇಕು..!
ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಂಡುಬರುವ ಕೆಲಸದ ವೈಖರಿಯಿದು. ಕಳೆದ ಕೆಲ ತಿಂಗಳಿಂದ ಮಧ್ಯವರ್ತಿಗಳ ಹಾವಳಿ, ದಸ್ತಾವೇಜುಗಳ ನೋಂದಣಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿನ ದಿನವೂ ಜನದಟ್ಟಣೆ ಕಂಡುಬರುತ್ತಿದ್ದು, ನಿತ್ಯ ಒಂದಿಲ್ಲೊಂದು ಜಗಳ ನಡೆಯುತ್ತದೆ. ಮಿನಿ ವಿಧಾನಸೌಧದಲ್ಲೇ ಈ ಕಚೇರಿಯಿದ್ದು, ಇತರ ಇಲಾಖೆ ಸಿಬ್ಬಂದಿ ಪಾಲಿಗೂ ಇಲ್ಲಿನ ಬೆಳವಣಿಗೆ ಮುಜುಗರಕ್ಕೆ ಕಾರಣವಾಗಿದೆ.
ಏನಿದು ಪದ್ಧತಿ?: ವಾರ್ಷಿಕ 20 ಸಾವಿರ ದಸ್ತಾವೇಜು ನೋಂದಾಯಿಸುವ ಇಲಾಖೆಯಿಂದ ಕೋಟ್ಯಂತರ ರೂ. ಆದಾಯ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆ. ಇಲ್ಲಿ ಯಾವುದೇ ದಸ್ತಾವೇಜಿಗೂ ಸುಲಭವಾಗಿ ಮೋಕ್ಷ ದೊರೆಯುವುದಿಲ್ಲ. ವಿಳಂಬ ತಪ್ಪಿಸಲು ಟೋಕನ್ ಪದ್ಧತಿ ಜಾರಿಗೆ ತರಲಾಗಿದೆ. ದಿನಕ್ಕೆ 100ರಿಂದ 130 ದಸ್ತಾವೇಜು ನೋಂದಣಿ ಮಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರಾದರೂ ವಿಳಂಬ ತಪ್ಪಿಲ್ಲ. ನಿವೇಶನ, ಭೂಮಿ ಖರೀದಿ, ಮಾರಾಟಕ್ಕಾಗಿ ತಿಂಗಳುಗಟ್ಟಲೇಕಾಯಬೇಕಿದೆ. ಇಲಾಖೆ ಅಧಿಕಾರಿಗಳು ಕರೆದಾಗಲೇ ಬಂದು ಹಾಜರಾಗಬೇಕಿದೆ. ಸದ್ಯ 500ಕ್ಕೂ ಹೆಚ್ಚು ಪ್ರಕರಣಗಳು ಬಾಕಿಯಿವೆ. ಮಹಿಳೆಯರು, ವೃದ್ಧರು ನಿತ್ಯವೂ ಬೆಳಗ್ಗೆಯಿಂದ ಸಂಜೆಯವರೆಗೆ ಕಚೇರಿ ಮುಂಭಾಗದಲ್ಲಿ ಪಡಿತರ ಆಹಾರಧಾನ್ಯಕ್ಕೆ ಮುಗಿಬಿದ್ದಂತೆ ಕಾಯ್ದು ಕುಳಿತುಕೊಳ್ಳುವಂತಾಗಿದೆ.
ಪಾರದರ್ಶಕತೆಗೆ ಬೆಲೆಯಿಲ್ಲ: ದಸ್ತಾವೇಜುಗಳ ನೋಂದಣಿಯೂ ಕ್ರಮಬದ್ಧವಾಗಿನಡೆಯುತ್ತಿಲ್ಲವೆಂದು ವಕೀಲರು, ಸಂಘ, ಸಂಸ್ಥೆ ಮುಖಂಡರು ದೂರುತ್ತಾರೆ. ಮಧ್ಯವರ್ತಿಗಳ ಮೂಲಕ ಹೋದಾಗ ಅಂತಹ ದಸ್ತಾವೇಜುಗಳಿಗೆ ಸ್ಪೇಷಲ್ ನಂಬರ್ ಕೊಟ್ಟು ಮೋಕ್ಷ ಕಾಣಿಸಲಾಗುತ್ತಿದೆ. ಹಣ ನೀಡದಿದ್ದಾಗ ಬಾಕಿ ಪಟ್ಟಿಗೆ ಸೇರಿಸಲಾಗುತ್ತಿದೆ. ಇದರಿಂದ ಬೇಸತ್ತ ವಕೀಲರು ಸಾರ್ವಜನಿಕರ ಪರವಾಗಿ ಶಾಸಕರ ಬಳಿಗೆ ನಿಯೋಗ ತೆರಳಿ ಗೋಳು ಹೇಳಿಕೊಂಡಿದ್ದಾರೆ. ಆಗಲೂ ಪರಿಹಾರವಾಗಿಲ್ಲ. ನೋಂದಣಿ ಇಲಾಖೆ ಮಹಾನಿರ್ದೇಶಕರಿಗೂ ಹತ್ತಾರು ದೂರು ಸಲ್ಲಿಸಲಾಗಿದ್ದು, ಇದೀಗ ಲೋಕಾಯುಕ್ತದ ಮೊರೆ ಹೋಗಲು ಸಿದ್ಧತೆ ನಡೆಸಲಾಗುತ್ತಿದೆ. ಪಾರದರ್ಶಕತೆಗೆ ಬೆಲೆಯಿಲ್ಲವಾಗಿದ್ದು, ಕಚೇರಿಗೆ ಅಂಟಿಕೊಂಡಿರುವ ಮಧ್ಯವರ್ತಿಗಳು ಕಚೇರಿ ಗೌರವವನ್ನೇ ಮಣ್ಣು ಪಾಲು ಮಾಡುತ್ತಿದ್ದಾರೆ ಎನ್ನುವ ಆಕ್ರೋಶ ವ್ಯಾಪಕವಾಗಿದೆ.
ದಿನವೂ ಗದ್ದಲ: ಅ.10, 2020ರಂದು ಇಲಾಖೆ ಮಹಾನಿರ್ದೇಶಕರು ಲಿಖೀತವಾಗಿ ಪತ್ರ ಬರೆದು ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸಿದ್ದಾರೆ. ಜಿಲ್ಲಾ ನೋಂದಣಾಧಿಕಾರಿಯೂ ಹಲವು ಬಾರಿ ಬಂದು ಹೋಗಿದ್ದಾರೆ. ಆದರೆ, ಈಗಲೂ ಸಾರ್ವಜನಿಕರ ಪರದಾಟ ತಪ್ಪಿಲ್ಲ. ಎಲ್ಲ ದಸ್ತಾವೇಜು ಸ್ವೀಕರಿಸಿದ ನಂತರ ಅವುಗಳಿಗೆ ನಂಬರ್ ಕೊಟ್ಟು ವಾಪಸ್ ತಿಳಿಸುವುದಾಗಿ ಹೇಳಲಾಗುತ್ತಿದೆ. ರಾಜ್ಯಮಟ್ಟದ ಅಧಿಕಾರಿಗಳೇ ಸ್ವತಃ ಇಲ್ಲಿನ ಸಿಬ್ಬಂದಿ ನಡಿವಳಿಕೆಗೆ ಬೇಸರ ವ್ಯಕ್ತಪಡಿಸುತ್ತಿದ್ದು, ಸತತ ದುಂಬಾಲು ಬಿದ್ದಾಗಲೂ ಎಚ್ಚೆತ್ತುಕೊಂಡಿಲ್ಲ. ಬದಲಾಗಿ ಯಾವುದೇ ದಸ್ತಾವೇಜುಗಳು ಬಾಕಿಯಿಲ್ಲವೆಂಬ ತಪ್ಪು ಮಾಹಿತಿ ನೀಡಿ ಕೈ ತೊಳೆದುಕೊಳ್ಳಲಾಗುತ್ತಿದೆ ಎನ್ನುತ್ತಾರೆ ಕಾರ್ಮಿಕ ಮುಖಂಡ ಬಿ.ಎನ್. ಯರದಿಹಾಳ.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನೋಡಿ ಸಾಕಾಗಿದೆ. ಕೊನೆಗೆ ಇಲಾಖೆ ಮಹಾನಿರ್ದೇಶಕರಿಗೆ ದೂರು ಸಲ್ಲಿಸಲಾಗಿತ್ತು. ಇನ್ನೂ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣಿಸಿಲ್ಲ.
-ಎಚ್.ಎನ್. ಬಡಿಗೇರ, ರೈತ ಮುಖಂಡರು, ಸಿಂಧನೂರು
ಆರು ನಿವೇಶನ ನೋಂದಣಿ ಮಾಡಿಸಲು ಕೊಡಲಾಗಿತ್ತು. ಮೂರು ತಿಂಗಳ ಬಳಿಕ ಟೋಕನ್ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಕಚೇರಿಗೆ ಬಂದಿದ್ದೇವೆ. ಗುರುವಾರ ಬಂದುವಾಪಸ್ ಹೋಗಿದ್ದು, ಶುಕ್ರವಾರ ಬೆಳಗ್ಗೆಯಿಂದ ಸರದಿಗಾಗಿ ಕಾಯುತ್ತಿದ್ದೇವೆ.
-ಕರಿಯಪ್ಪ, ಮಾಡಸಿರವಾರ, ನಿವಾಸಿ
-ಯಮನಪ್ಪ ಪವಾರ