Advertisement

ಸೌಲಭ್ಯಕ್ಕೆ ಒತ್ತಾಯಿಸಿ ಎಸ್‌ಎಫ್‌ಐ ಪ್ರತಿಭಟನೆ

03:14 PM Aug 17, 2019 | Team Udayavani |

ಸಿಂಧನೂರು: ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ ಹಾಗೂ ಇನ್ನಿತರ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಎಸ್‌ಎಫ್‌ಐ ಸಂಘಟನೆ ವತಿಯಿಂದ ಶಾಸಕರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು

Advertisement

ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ವೀರಾಪುರ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲ ಹಾಸ್ಟೆಲ್ಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ ಹಾಗೂ ಸ್ವಂತ ಕಟ್ಟಡವಿಲ್ಲದೆ ವಿದ್ಯಾರ್ಥಿಗಳು ಅಲೆದಾಡುವ ಪರಿಸ್ಥಿತಿ ಉದ್ಭವಿಸಿದೆ. ಮೆಟ್ರಿಕ್‌ ನಂತರದ ಬಾಲಕಿಯರ ಪದವಿ ವಸತಿ ನಿಲಯಗಳು ಸೇರಿದಂತೆ ಬಹುತೇಕ ಹಾಸ್ಟೆಲ್ಗಳು ಗೋಲ್ಡನ್‌ ನಂತಹ ಕಟ್ಟಡದಲ್ಲಿ ನಡೆಯುತ್ತಿವೆ. ಹಾಸ್ಟೆಲ್ ಕಟ್ಟಡ ತೀರಾ ಅವೈಜ್ಞಾನಿಕವಾಗಿವೆ. ಹಾಸ್ಟೆಲ್ ನಡೆಸಲು ಯೋಗ್ಯವಾಗಿಲ್ಲ. ಬೇಡಿಕೆ ಅನುಗುಣವಾಗಿ ಕೂಡಲೇ ಹಾಸ್ಟೆಲ್ಗ ಸಂಖ್ಯೆ ಹೆಚ್ಚಿಸಬೇಕು. ಈಗಿರುವ ಅವೈಜ್ಞಾನಿಕ ಹಾಸ್ಟೆಲ್ ಕಟ್ಟಡ ಸ್ಥಳಾಂತರಿಸಬೇಕು. ಎಲ್ಲ ಹಾಸ್ಟೆಲ್ಗಳಿಗೆ ನೂತನ ಕಟ್ಟಡ ಒದಗಿಸಬೇಕು. ನಗರದಲ್ಲಿ ಕಾಮಗಾರಿ ಹಂತದಲ್ಲಿರುವ ವಿದ್ಯಾರ್ಥಿನಿಯರ ವಸತಿ ನಿಲಯದ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಕುಷ್ಟಗಿ ರಸ್ತೆಯಲ್ಲಿರುವ ಪದವಿ, ಪಿಯುಸಿ ಮತ್ತು ವೃತ್ತಿಪರ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಕೂಡಲೇ ಬೇರೆ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ವಿದ್ಯಾರ್ಥಿ ವಿರೋಧಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಯಮ್ಮ ಅವರನ್ನು ಕೂಡಲೇ ಅಮಾನತು ಮಾಡಬೇಕು. ಇತ್ತೀಚೆಗೆ ಮೃತಪಟ್ಟ ಹಾಸ್ಟೆಲ್ ವಿದ್ಯಾರ್ಥಿ ಮುರುಗೇಶ ಕುಟುಂಬಕ್ಕೆ ಹತ್ತು ಲಕ್ಷ‌ ರೂ. ಪರಿಹಾರ ನೀಡಬೇಕು. ಎಲ್ಲ ಎಸ್‌ಸಿ-ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬಾಕಿ ಇರುವ ಶಿಷ್ಯ ವೇತನ ನೀಡಬೇಕು. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸಂಬಂಧಿಸಿದ ವಾರ್ಡನ್‌ ಮತ್ತು ಇತರ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಪಾಧ್ಯಕ್ಷ‌ ಲಿಂಗರಾಜ ಕಂದಗಲ್, ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ದೀನಸಮುದ್ರ, ತಿಪ್ಪಣ್ಣ, ಕುಮಾರ, ಯಮನೂರು, ನೀಲಾ, ಶಿಲ್ಪಾ, ನಾಗರತ್ನ, ಮಾರೆಮ್ಮ, ವೆಂಕಟೇಶ, ಶರಣಪ್ಪ ಕೆಂಗಲ್, ನೀಲಾವತಿ, ನೀಲಮ್ಮ, ಸರಸ್ವತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next