ಸಿಂಧನೂರು: ಜೀವನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಒಂದು ಭಾಗವಾಗಿರಬೇಕೇ ವಿನಃ ಪರೀಕ್ಷೆಯೇ ಜೀವನವಲ್ಲ. ಒಂದು ವೇಳೆ ಪಾಸಾಗದೇ ಇದ್ದರೂ ಉತ್ತಮ ಬದುಕು ರೂಪಿಸಿಕೊಳ್ಳಲು ಈ ಓದು ನೆರವಾಗುತ್ತದೆ. ಉತ್ತಮ ಬದುಕು ರೂಪಿಸಿಕೊಳ್ಳಲು ಓದು ಸಹಕಾರಿ ಆಗಿದೆ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 423ನೇ ರ್‍ಯಾಂಕ್ ಪಡೆದ ಅಶ್ವಿಜಾ ಬಿ.ವಿ. ಹೇಳಿದರು
ಚೆನ್ನದಾಸರ ಸಮಾಜ ಸೇವಾ ಸಂಘ ತಾಲೂಕು ಘಟಕದಿಂದ ನಗರದ ಸರ್ಕ್ನೂಟ್ ಹೌಸ್‌ನಲ್ಲಿ ಹಮ್ಮಿಕೊಂಡಿದ್ದ ಡಾ| ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುಪಿಎಸ್‌ಸಿ ಪರೀಕ್ಷೆ ಮೂರು ಹಂತಗಳಲ್ಲಿ ನಡೆಯುತ್ತದೆ ಎಂದು ಯೋಚಿಸುವುದೇ ಬೇಡ. ಒಂದೇ ಹಂತ ಎಂದುಕೊಳ್ಳಿ. ಏಕೆಂದರೆ ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡಕ್ಕೂ ಸಿದ್ಧತೆ ಒಂದೇ ರೀತಿಯಲ್ಲಿರುತ್ತವೆ. ಇವೆರಡೂ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಹೊತ್ತಿಗಾಗಲೇ ನೀವು ಒಂದು ರೀತಿಯಲ್ಲಿ ಮೂರನೇ ಹಂತದ ಸಂದರ್ಶನಕ್ಕೆ ಸಿದ್ಧರಾಗಿರುತ್ತಿರಿ. ಮೇನ್ಸ್ ಮತ್ತು ಪ್ರಿಲಿಮ್ಸ್‌ಗೂ ಮುನ್ನ ಯಾವ ಐಚ್ಛಿಕ ವಿಷಯ ಆಯ್ದುಕೊಳ್ಳಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ನಂತರ ನೀವು ಯಾವ ವಿಷಯಗಳಲ್ಲಿ ಪರಿಣಿತರಿದ್ದೀರಿ, ಯಾವುದರಲ್ಲಿ ದುರ್ಬಲರಿದ್ದೀರಿ ಎಂಬುದನ್ನು ತಿಳಿದುಕೊಂಡು, ಆ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುವವರು ಪ್ರಚಲಿತ ವಿದ್ಯಮಾನಗಳಿಗೆ, ಸ್ಪರ್ಧಾತ್ಮಕ ನಿಯತಕಾಲಿಕೆಗಳಿಗಿಂತ ದಿನಪತ್ರಿಕೆಗಳನ್ನು ನಿತ್ಯ ಓದಿ, ನೋಟ್ಸ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಇಂಗ್ಲಿಷ್ ವಿಷಯದ ಪತ್ರಿಕೆ ಬಿಟ್ಟು ಉಳಿದ ಎಲ್ಲ ಪತ್ರಿಕೆಗಳನ್ನೂ ಕನ್ನಡದಲ್ಲಿಯೇ ಪರೀಕ್ಷೆ ಬರೆಯಬಹುದು. ಪ್ರಶ್ನೆಗಳು ಇಂಗ್ಲಿಷ್, ಹಿಂದಿ ಭಾಷೆಯಲ್ಲಿರುತ್ತವೆ. ಯಾವ ಭಾಷೆಯಲ್ಲಿ ಬರೆದರೆ ಸಮರ್ಥವಾಗಿ ಅಭಿವ್ಯಕ್ತಿಸಬಹುದೋ ಆ ಭಾಷೆಯಲ್ಲಿ ಬರೆಯಿರಿ. ಸಂದರ್ಶನವನ್ನೂ ಕನ್ನಡದಲ್ಲಿಯೇ ಎದುರಿಸಬಹುದು. ಸಂದರ್ಶನದಲ್ಲಿ ಸಾಮಾನ್ಯ ಜ್ಞಾನಕ್ಕಿಂತ ವ್ಯಕ್ತಿತ್ವ ಪರೀಕ್ಷೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ವಿವರಿಸಿದರು.
ಇಂಜಿನಿಯರಿಂಗ್ ಓದಿದವರೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಗಳಿಸುತ್ತಾರೆ ಎಂದೇನಿಲ್ಲ. ಯುಪಿಎಸ್‌ಸಿ ಪಠ್ಯಕ್ರಮದಲ್ಲಿ ಸಂವಿಧಾನ, ಭೂಗೋಳ, ಅರ್ಥಶಾಸ್ತ್ರ, ಪರಿಸರ ವಿಷಯಗಳಿರುತ್ತವೆ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ಹೆಚ್ಚಿನ ಅನುಕೂಲ ಎಂದರು.
ನಂತರ ವಿವಿಧ ಕಾಲೇಜುಗಳ ವಿದಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ತಯಾರಿ, ಪಠ್ಯಕ್ರಮ, ಅಭ್ಯಾಸದ ಶೈಲಿ, ಸಂದರ್ಶನದ ವಿಧಾನ, ಡ್ರೆಸ್ ಸೆನ್ಸ್ ಕುರಿತು ಕೇಳಿದ ಪ್ರಶ್ನೆಗಳಿಗೆ ಅಶ್ವೀಜಾ ಬಿ.ವಿ. ಉತ್ತರಿಸಿದರು.
ಸೈನಿಕರಾದ ರುದ್ರೇಶ ಹಾಗೂ ವೀರೇಶ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕ ಡಾ| ಹುಸೇನಪ್ಪ ಅಮರಾಪುರ ವಿಶೇಷ ಉಪನ್ಯಾಸ ನೀಡಿದರು. ಚೆನ್ನದಾಸರ ಸಮಾಜ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ, ಉಪಾಧ್ಯಕ್ಷ ಬಾಲಯ್ಯ ಗೊರೇಬಾಳ, ಜಿಲ್ಲಾ ಕಾರ್ಯದರ್ಶಿ ರಂಗಮುನಿದಾಸ, ನಿವೃತ್ತ ಎಎಸ್‌ಐ ವೆಂಕೋಬ ಗೊರೇಬಾಳ, ಪತ್ರಕರ್ತ ಅಶೋಕ ಬೆನ್ನೂರು, ಉಪನ್ಯಾಸಕ ಅರುಣಕುಮಾರ ಬೇರಿಗಿ, ಯಂಕಪ್ಪ ಮಧುಸೂದನ, ಶ್ರವಣಕುಮಾರ ಬೇರಿಗಿ, ಕನಕಪ್ಪ, ಡಾ.ನರಸಿಂಹಪ್ಪ ಇದ್ದರು.