Advertisement

ಶರಣರ ವಚನಗಳ ಧ್ವನಿಗೆ ರಾಜ್ಯೋತ್ಸವದ ಗರಿ

11:00 AM Oct 30, 2019 | Naveen |

ಚಂದ್ರಶೇಖರ ಯರದಿಹಾಳ
ಸಿಂಧನೂರು:
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ತಾಲೂಕಿನ ಅಲಬನೂರು ಗ್ರಾಮದ ಜನಪದ ಹಾಡುಗಾರ ಉಸ್ಮಾನಸಾಬ್‌ ಖಾದರಸಾಬ್‌ ಅಲಬನೂರು ಭಾಜನರಾಗಿದ್ದಾರೆ. ಉಸ್ಮಾನಸಾಬ್‌ ಮೂಲತಃ ಭಾವೈಕ್ಯ ಸಾರುವ ಜನಪದ ಗೀತೆಗಳನ್ನು ಹಾಡುತ್ತ ಜನಪದ ಲೋಕಕ್ಕೆ ಕಾಲಿರಿಸಿದವರು. ಡೊಳ್ಳಿನ ಹಾಡು, ಭಜನಾ ಪದ, ಶರಣರ ವಚನ, ದಾಸರ ಪದ, ತತ್ವಪದಗಳನ್ನು ಹಾಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.

Advertisement

ತಂದೆ ಖಾದರಸಾಬ್‌ ಹಾಗೂ ದೊಡ್ಡಪ್ಪ ಹುಸೇನಸಾಬ್‌ ಮೂಲತಃ ರಂಗಭೂಮಿ ಕಲಾವಿದರು. ಅವರು ನಾಟಕಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಹಾಡು ರಚಿಸಿ ಹಾಡುವ ಜತೆಗೆ ಅಭಿನಯಿಸುತ್ತಿದ್ದರು.

ಪಾಂಡುವಿಜಯ, ಕೀಚಕನ ವಧೆ, ಕೌರವರ ದರ್ಬಾರ, ಶ್ರೀಕೃಷ್ಣ ಸಂಧಾನ, ಸತ್ಯಭಾಮ ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ರಾಯಚೂರು ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದರು. ರಂಗಭೂಮಿ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಉಸ್ಮಾನ್‌ಸಾಬ್‌ ಓದಿದ್ದು ಕೇವಲ ಪಿಯುಸಿ. 1ರಿಂದ 10ನೇ ತರಗತಿವರೆಗೆ ಅಲಬನೂರಿನ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ ಇವರು, ನಂತರ ಗದಗ ತಾಲೂಕಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. 7 ಜನ ಮಕ್ಕಳಿದ್ದು, ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ ಮೂವರು ಪುತ್ರಿಯರಿದ್ದಾರೆ.

ಬೆಂಗಳೂರಿನಲ್ಲಿ ನೆಲೆ: ಉಸ್ಮಾನಸಾಬ್‌ ಹೊಟ್ಟೆಪಾಡಿಗಾಗಿ ಬೆಂಗಳೂರಿನ ಯಲಹಂಕಕ್ಕೆ ತೆರಳಿ ಅಲ್ಲಿಯೇ ಒಂದು ಡಿಟಿಪಿ ಹಾಗೂ ಝೆರಾಕ್ಸ್‌ ಸೆಂಟರ್‌ ಆರಂಭಿಸಿದ್ದಾರೆ. ಉಳಿದ ಸಮಯದಲ್ಲಿ ರಾಜ್ಯದ ಮೂಲೆ-ಮೂಲೆಗಳಲ್ಲಿ ಸಂಚರಿಸಿ ಜನಪದ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ವಿಶೇಷವಾಗಿ ಇವರು ಶರಣರ ವಚನಗಳು, ದಾಸರ ಪದಗಳು, ತತ್ವಪದಗಳು, ಶ್ರೀಕೃಷ್ಣ ಹರಿಹರನ ಪದಗಳು, ಜನಪದ ಲೋಕದ ಜೀವನ ಸೊಗಡು, ಅಣ್ಣ -ತಂಗಿ ಬಾಂಧವ್ಯ, ಅಕ್ಕ-ತಂಗಿ ಮಮತೆಯ ಪದಗಳು ರಚನೆ ಮಾಡಿ ಹಾಡುತ್ತಾರೆ. ಭಾಗ್ಯದ ಬಳೆಗಾರ, ಸೋಭಾನೆ ಪದಗಳನ್ನು ಸುಶ್ರಾವ್ಯವಾಗಿ ಹಾಡುವುದನ್ನು ರೂಢಿಸಿಕೊಂಡಿರುವ ಉಸ್ಮಾನಸಾಬ್‌ಗ ನಾಡಿನ ಖ್ಯಾತ ಮಠ-ಮಾನ್ಯಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ಕೆಂಪೇಗೌಡ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ, ಕನ್ನಡದ ಪರಿಚಾರಕ ಪ್ರಶಸ್ತಿ, ಕನ್ನಡ ಜಂಗಮ ಪ್ರಶಸ್ತಿ ಹೀಗೆ ನಾನಾ ಪ್ರಶಸ್ತಿಗಳು ಅರಸಿ ಬಂದಿವೆ.

Advertisement

ನಮ್ಮ ಅಜ್ಜಿ ಊರಾದ ಮಾನ್ವಿ ತಾಲೂಕಿನ ಮಾಡಿಗೇರಿಯಲ್ಲಿ ಅಜ್ಜಿ ಚಾಂದಬಿಯೊಂದಿಗೆ ಚಿಕ್ಕ ವಯಸ್ಸಿನಲ್ಲಿಯೇ ಜಾನಪದ ಗೀತೆಗಳಲ್ಲಿ ಆಸಕ್ತಿ ತೋರಿ ಹಾಡುತ್ತಾ ಬಂದಿದ್ದೇನೆ. ಮುಂದೆ ಅನೇಕರ ಸಹಾಯ ಸಹಕಾರದಿಂದ ಬೆಳೆಯಲು ಸಾಧ್ಯವಾಗಿದೆ. ನನಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಅತ್ಯಂತ ಸಂತಸ ತಂದಿದೆ. ಈ ಪ್ರಶಸ್ತಿಯನ್ನು ಈಚೆಗೆ ರಾಜ್ಯಾದ್ಯಂತ ನೆರೆ ಹಾಗೂ ಮಳೆಯಿಂದಾಗಿ ಜಲ ಸಂಕಷ್ಟಕ್ಕೀಡಾಗಿ ಮೃತಪಟ್ಟ ಬಂಧುಗಳಿಗೆ ಅರ್ಪಿಸುತ್ತೇನೆ.
ಉಸ್ಮಾನ್‌ಸಾಬ್‌ ಅಲಬನೂರು,
ಜನಪದ ಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next