ಸಿಂಧನೂರು: ರಾಯಚೂರಿನ ನವೋದಯ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣ ನ್ಯಾಯಾಂಗ ತನಿಖೆಗೊಳಪಡಿಸಬೇಕು ಹಾಗೂ ಸಾವಿಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಕೋಮುಸೌಹಾರ್ದ ವೇದಿಕೆ ಸಂಚಾಲಕ ಸಮ್ಮದ್ ಚೌದ್ರಿ ಮಾತನಾಡಿ, ವಿದ್ಯಾರ್ಥಿನಿ ಅನುಮಾಸ್ಪದ ಸಾವಿನ ಪ್ರಕರಣ ಇಡೀ ರಾಜ್ಯಾದ್ಯಂತ ತಲ್ಲಣ ಮೂಡಿಸಿದೆ.
ಕಾಲೇಜಿನ ಹಿಂಭಾಗದ ಪ್ರದೇಶದಲ್ಲಿಯೇ ವಿದ್ಯಾರ್ಥಿನಿ ಮೃತದೇಹ ಸುಟ್ಟು ನೇಣಿಗೇರಿಸಿದ ಸ್ಥಿತಿಯಲ್ಲಿ ದೊರಕಿದ್ದು, ವಿದ್ಯಾರ್ಥಿನಿಯರು ಹಾಗೂ ಪಾಲಕರಲ್ಲಿ ಆತಂಕ ಹೆಚ್ಚಿಸಿದೆ. ದುಷ್ಕರ್ಮಿಗಳು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಈ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ ಮಾತನಾಡಿ, ಈ ಹಿಂದೆ ಇಂತಹ ಹಲವಾರು ಘಟನೆಗಳು ನಡೆದಿದ್ದು, ಅವು ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ನಡೆದಿರುವುದು ವಿಷಾದನೀಯ ಎಂದರು.
ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣವನ್ನು ಪಾರದರ್ಶಕ ತನಿಖೆ ನಡೆಸಲು ಮುಂದಾಗಬೇಕಾದ ಪೊಲೀಸ್ ಇಲಾಖೆ ಅಧಿಕಾರಿಗಳು ನಾನಾ ಸಬೂಬು ಹೇಳುತ್ತಿರುವುದು ಸರಿಯಲ್ಲ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಶೀಘ್ರ ತನಿಖೆ ನಡೆಸಿ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
ನಿರ್ಲಕ್ಷ್ಯ ವಹಿಸಿದರೆ ಜಿಲ್ಲಾದ್ಯಂತ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಸ್‌ಐಒ ತಾಲೂಕು ಘಟಕದ ಅಧ್ಯಕ್ಷ ಇಮ್ತಿಯಾಜ್,
ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಬಸವರಾಜ ಹಸಮಕಲ್, ಶಂಕರ ಗುರಿಕಾರ, ದುರುಗೇಶ, ಯಾಖೂಕ್‌ಅಲಿ, ರಶೀದ್ ಇತರರು ಇದ್ದರು.