Advertisement

ಕನಸಾಗಿ ಉಳಿದ ಕನಕ ನಾಲಾ ಯೋಜನೆ

10:26 AM May 02, 2019 | Naveen |

ಸಿಂಧನೂರು: ಮಸ್ಕಿ ಮತ್ತು ಸಿಂಧನೂರು ತಾಲೂಕಿನ ಸಾವಿರಾರು ಎಕರೆಗೆ ನೀರು ಒದಗಿಸುವ ಕನಕ ನಾಲಾ ಯೋಜನೆ ಇನ್ನೂ ಅನುಷ್ಠಾನಗೊಳ್ಳದ್ದರಿಂದ ಈ ಭಾಗದ ರೈತರ ನೀರಾವರಿ ಕನಸು ಕನಸಾಗಿಯೇ ಉಳಿದಿದೆ.

Advertisement

ಕರ್ನಾಟಕ ನೀರಾವರಿ ನಿಗಮ ಅನುದಾನಕ್ಕೆ ಒಳಪಡುವ ಕೆರೆಗಳಿಗೆ ಕನಕ ನಾಲಾ ಯೋಜನೆಯಿಂದ ನೀರು ಹರಿಸಿದಲ್ಲಿ ಒಟ್ಟು 5100 ಎಕರೆಗಳಿಗೆ ನೀರು ಒದಗಲಿದೆ. ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಬರುವ ಈ ಯೋಜನೆ ಹಳ್ಳ ಹಿಡಿದಿದೆ. ಕನಕ ನಾಲಾ ಯೋಜನೆ ಕಾಮಗಾರಿ ಪೂರ್ಣಗೊಂಡರೆ ಆ ಭಾಗದ ಸಾವಿರಾರು ಅನ್ನದಾತರ ಬದುಕು ಸಮೃದ್ಧವಾಗಲಿದೆ. ಆದರೆ ಈವರೆಗೆ ಯಾವುದೇ ಕೆಲಸ ಆರಂಭಗೊಂಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ಇನ್ನೂ ಯೋಜನೆಗೆ ಕಾಲ ಕೂಡಿಬಂದಿಲ್ಲ.

ಭೋಗಾಪುರ ಹತ್ತಿರವಿರುವ ಕಿಲ್ಲಾರಹಟ್ಟಿ ಕೆರೆ ಎಂದೇ ಕರೆಯಲ್ಪಡುವ ಕನಕ ನಾಲಾ ಜಲಾಶಯ ನಿರ್ಮಾಣ ಕಾಮಗಾರಿಗೆ ಆರಂಭದಿಂದಲೂ ಅನೇಕ ವಿಘ್ನಗಳು ಕಾಡುತ್ತಿವೆ. ಮಳೆ ಆಶ್ರಿತ ಭೂಮಿ ಇರುವ ಪ್ರದೇಶದಲ್ಲಿ ಬೇಸಿಗೆಯಲ್ಲಿ ಹನಿ-ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಈ ಭಾಗದಲ್ಲಿ ಇದೆ. ಕನಕನಾಲಾ ಯೋಜನೆ ಪೂರ್ಣಗೊಂಡರೆ ನೀರಿನ ಸಮಸ್ಯೆ ಪರಿಹಾರ ಆಗಲಿದೆ.

ನಾಗಲಾಪುರ ಹಿರೇಹಳ್ಳದ ನಾಲೆಯಿಂದ ಹರಿದು ಬರುವ ನೀರು ಹಾಗೂ ಮಳೆ ಪ್ರಮಾಣ ಲೆಕ್ಕದ ಆಧಾರದಲ್ಲಿ ಯೋಜನೆ ರೂಪಿಸಲಾಗಿದೆ. 0.225 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಬೃಹತ್‌ ಯೋಜನೆ ಇದಾಗಿದೆ. 975.65 ಮೀಟರನಷ್ಟು ಸುತ್ತಳತೆ ಇದೆ. ಒಟ್ಟು ಈ ಯೋಜನೆ ವ್ಯಾಪ್ತಿಗೆ 12 ಗ್ರಾಮಗಳು ಒಳಪಡುತ್ತವೆ.

ಕಳೆದ 2011ರಲ್ಲಿ ಮಸ್ಕಿ ನಾಲಾದಿಂದ ಕನಕ ನಾಲಾ ಕೆರೆಗೆ ನೀರು ಸಂಗ್ರಹಣೆಗಾಗಿ ಮಾಡಿರುವ ಯೋಜನೆ ಕಾಮಗಾರಿಗೆ ಸಮೀಕ್ಷೆ ನಡೆಸಿ, ವಿನ್ಯಾಸದ ನಕ್ಷೆ ತಯಾರಿಸಿ ಅಂದಾಜು ವೆಚ್ಚ ತಯಾರಿಸಿ 8.31 ಕೋಟಿ ರೂ. ಅನುದಾನ ಒದಗಿಸುವ ಭರವಸೆ ನೀಡಲಾಗಿತ್ತು. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಸರ್ವೇ ನಡೆ‌ಸಿ 2012ರಲ್ಲಿ ಖಾಸಗಿ ಕಂಪನಿ ವರದಿ ನೀಡಿದರೂ ಈ ಯೋಜನೆ ನನೆಗುದಿಗೆ ಬಿದ್ದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

Advertisement

ಹೋರಾಟ: ಕನಕನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹಿಂದೆ ಯೋಜನೆ ವ್ಯಾಪ್ತಿಯ ರೈತರು, ರೈತ ಮುಖಂಡರು ಅನೇಕ ಹೋರಾಟ ನಡೆಸಿದ್ದರು. ಆಗಿನ ಸರ್ಕಾರ ಸಮೀಕ್ಷೆ ನಡೆಸಿ ಕೈತೊಳೆದುಕೊಂಡಿತು. ಈಗಿನ ಸರ್ಕಾರ ಸೇರಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ನಿರ್ಲಕ್ಷ್ಯ ವಹಿಸಿದ್ದು, ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರ ರೈತರಿಗಾಗಿ ನಾನಾ ಯೋಜನೆಗಳು ಜಾರಿಗೊಳಿಸಿದೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತವೆ. ಮತ್ತೂಂದು ಕಡೆ ಗುಳೆ ಹೋಗುವುದು ತಪ್ಪಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ ಈ ಭಾಗದ ಸಾವಿರಾರು ಕುಟುಂಬಗಳು ಕನಕ ನಾಲಾ ಯೋಜನೆ ನನೆಗುದಿಗೆ ಬಿದ್ದಿದ್ದರಿಂದ, ಜನಪ್ರತಿನಿಧಿಗಳ ಸುಳ್ಳು ಭರವಸೆಯಿಂದ ಗುಳೆ ಹೋಗುತ್ತಿದ್ದಾರೆ. ಸರ್ಕಾರದ ಯೋಜನೆಗಳು ಬರೀ ಪ್ರಚಾರಕ್ಕೆ ಸೀಮಿತವಾಗದೇ ಅನುಷ್ಠಾನಗೊಂಡು ರೈತರ ಹಿತ ಕಾಪಾಡುವಂತಾಗಬೇಕೆಂಬುದು ಜನರ ಆಶಯವಾಗಿದೆ.

ಕೆರೆಯಲ್ಲಿ ಹೂಳು ತೆಗೆಯುವ ಕೆಲಸವಾಗಬೇಕು. 12 ಹಳ್ಳಿಗೆ ಒಳಪಡುವ ಈ ಯೋಜನೆ ಟೆಂಡರ್‌ ಪ್ರಕ್ರಿಯೆ ಕರೆದು ನಿಂತಿರುವುದರಿಂದ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಈ ಭಾಗದಲ್ಲಿ ಕೆಲಸವಿಲ್ಲದೆ ಗುಳೆ ಹೋಗುತ್ತಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ.
••ರವಿಗೌಡ ಮಲ್ಲದಗುಡ್ಡ,
ಭಾರತೀಯ ಕಿಸಾನ್‌ ಸಂಘದ ಯುವ ಹೋರಾಟಗಾರ ಸಿಂಧನೂರು.

ಕನಕನಾಲಾ ಯೋಜನೆಗೆ ನೂರು ಕೋಟಿ ರೂ.ಹಣ ಖರ್ಚಾಗುತ್ತದೆ ಎಂಬುದು ಅಧಿಕಾರಿಗಳ ಮಾತಾಗಿದೆ. ಈ ಯೋಜನೆ ಕಾರ್ಯಗತಗೊಳಿಸಲು ನಮ್ಮ ಪ್ರಯತ್ನ ಸತತವಾಗಿದೆ.
••ಪ್ರತಾಪಗೌಡ ಪಾಟೀಲ,
ಮಸ್ಕಿ ಶಾಸಕ

ಚಂದ್ರಶೇಖರ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next