ಸಿಂಧನೂರು: ದೇಶದ ಸಂಸ್ಕೃತಿಯು ಇಂದು ನಶಿಸುವ ಹಂತದಲ್ಲಿದೆ. ದೇಶದ ಸಂಸ್ಕೃತಿಯ ಬಗ್ಗೆ ಎಚ್ಚರಗೊಳ್ಳದಿದ್ದರೆ ಮುಂದೊಂದು ದಿನ ವಿನಾಶದ ಕಡೆಗೆ ನಾವೆಲ್ಲರೂ ವಾಲಬೇಕಾಗಿದೆ ಎಂದು ಆರ್ಟ್ ಆಫ್ ಲಿವೀಂಗ್‌ನ ಸಂಸ್ಥಾಪಕ ರವಿಶಂಕರ್ ಗುರೂಜಿ ಹೇಳಿದರು.
ನಗರದ ಶ್ರೀಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವೀಂಗ್‌ನಿಂದ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣ ಕರ್ನಾಟಕ ಮಹೋತ್ಸವದ ಗುರುವಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಯಾವ ದೇಶದಲ್ಲಿ ಮಾಡದ ಹಿಂದಿನಿಂದಲೂ ಅನೇಕ ವಿಭಿನ್ನ ರೀತಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಂತಹ ದೇಶವು ನಮ್ಮದಾಗಿದೆ. ಅತಿಥಿ ದೇವೂ ಭವ, ತಂದೆ ತಾಯಿಗಳಿಗೆ ಪಾದ ಪೂಜೆ ಗುರು ಹಿರಿಯರಿಗೆ ಗುರುವಂದನಾ ಕಾರ್ಯಕ್ರಮ. ಇವೆಲ್ಲವೂ ಭಾರತದಲ್ಲಿ ಕಾಣಲು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಇವೆಲ್ಲವೂ ನಶಿಸಿ ಹೋಗುವ ಹಂತಕ್ಕೆ ಬಂದಿರುವುದು ದುರ್ದವೈದ ಸಂಗತಿ ಎಂದರು.
ವಿದ್ಯಾರ್ಥಿಗಳು ದಿನ ನಿತ್ಯ ಏಕಾಗ್ರತೆಯಿಂದ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಬೇಕು. ಯಾವುದೇ ದುರಾಲೋಚನೆ ಸೇಡು. ಮತ್ತೂಬ್ಬರಿಗೆ ಕೆಡುಕು ರೀತಿಯಲ್ಲಿ ನೋಡದೆ ಪುಸ್ತಕದ ಕಡೆ ಹೆಚ್ಚು ಗಮನ ಹರಿಸಿದಾಗ ಮಾತ್ರ ಸರಳವಾಗಿ ವಿದ್ಯೆ ಜ್ಞಾನಕ್ಕೆ ಹೋಗಲು ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಗಮನ ಹರಿಸಬೇಕು. ಪ್ರೋಟಿನ್ ಪದಾರ್ಥಗಳಿಗೆ ಹೆಚ್ಚು ಕಾಳಜಿ ವಹಿಸಬೇಕು. ಕೊಬ್ಬಿನಾಂಶದಂತಹ ಪದಾರ್ಥಗಳಿಗೆ ಒತ್ತು ನೀಡಬಾರದು. ನಾವೂ ಊಟದಲ್ಲಿ ಸ್ವಲ್ಪ ಪರಿವರ್ತನೆ ಮಾಡಿಕೊಂಡರೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಯೋಗ, ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿಕೊಳ್ಳ ಬೇಕು ಎಂದರು.
ಸಿಂಧನೂರು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಹೆಚ್ಚು ಕಾಣುತ್ತದೆ. ಇದರ ಬಗ್ಗೆ ಗಮನ ಹರಿಸುವ ಕೆಲಸವು ನಿಮ್ಮಿಂದ ಆಗಬೇಕು. ಪ್ರತಿಯೊಬ್ಬರು ವಿದೇಶಿ ಸಾಬೂನುಗಳಿಗೆ ಹಾಗೂ ಇತರ ದಿನ ನಿತ್ಯದ ಬಳಕೆಗಳಿಗೆ ಯಾರು ಮಾರು ಹೋಗಬಾರದು. ನಮ್ಮಲ್ಲಿ ಸಿಗುವ ನೈರ್ಸಗಿಕ ಸಂಪನ್ಮೂಲಗಳಿಗೆ ನಾವು ಜಾಸ್ತಿ ಒತ್ತು ಕೊಡಬೇಕು. ಜತೆಗೆ ಸಸಿಗಳನ್ನು ನೆಡುವುದು ಆದ್ಯ ಕರ್ತವ್ಯ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು. ಆಗ ಮಾತ್ರ ನೀರಿನ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಸಂಸ್ಥೆಯ ವತಿಯಿಂದ ನೀರು ಉಳಿಸುವುದರ ಬಗ್ಗೆ ಜಿಲ್ಲೆಯ ಎಲ್ಲಾ ಪದಾ ಧಿಕಾರಿಗಳೊಂದಿಗೆ ಚರ್ಚಿಸಿ ನಾವೊಂದು ಕಾರ್ಯಕ್ರಮ ಆಯೋಜಿಸುವುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ, ಶ್ರೀಕೃಷ್ಣದೇವರಾಯ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವೈ.ನರೇಂದ್ರನಾಥ, ಆರ್ಟ್ ಆಫ್ ಲಿವಿಂಗ್‌ನ ಸತ್ಯಂ ಸೇರಿದಂತೆ ಇತರರು ಭಾಗವಹಿಸಿದ್ದರು.