Advertisement

ಸಿಂಧನೂರಿನಲ್ಲಿ ಮಿತಿ ಮೀರಿದ ಸೊಳ್ಳೆಗಳ ಕಾಟ!

01:38 PM Feb 07, 2020 | Naveen |

ಸಿಂಧನೂರು: ಕಳೆದ ಎರಡು ವಾರದಿಂದ ನಗರ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಸೊಳ್ಳೆಗಳ ಕಾಟ ತೀವ್ರಗೊಂಡಿದೆ. ಮನೆಯ ಒಳಗೆ, ರಸ್ತೆಯ ಇಕ್ಕೆಲಗಳಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಾಗದಷ್ಟು ಸೊಳ್ಳೆಗಳ ಕಾಟ ಮಿತಿಮೀರಿದೆ. ಹೋಟೆಲ್‌ಗ‌ಳಲ್ಲಿ ಕುಳಿತರು ಸೊಳ್ಳೆಗಳು ಕಾಟ ಎಲ್ಲೆ ಮೀರಿದೆ. ಸೊಳ್ಳೆ ಕಡಿದ ಸ್ವಲ್ಪ ನಿಮಿಷದಲ್ಲಿ ಜಾಸ್ತಿ ತುರಿಕೆಯ ಬಾವು ಬಂದು ಮೈ ಕೈ ನೋವಾಗುವಂತೆ ಯಾತನೆ ಅನುಭವಿಸುವಂತಾಗಿದೆ.

Advertisement

ನಗರದ ಕೋಟೆ, ಸುಕಾಲಪೇಟೆ, ಮಹಿಬೂಬ್‌ ಕಾಲೋನಿ, ಎ.ಕೆ ಗೋಪಾಲ ನಗರ, ಜನತಾ ಕಾಲೋನಿ, ಬಡಿಬೇಸ್‌, ಬಪ್ಪೂರು ರಸ್ತೆ, ಇಂದಿರಾ ನಗರ, ಆದರ್ಶ ಕಾಲೋನಿ, ವೆಂಕಟೇಶ್ವರ ಕಾಲೋನಿ ಸೇರಿದಂತೆ ಇತರ ವಾರ್ಡ್‌ಗಳಲ್ಲಿ ಜನ ಸಾಮಾನ್ಯರ ಸಂಕಷ್ಟ ಕೇಳದಂತಾಗಿದೆ. ಇನ್ನೂ ಕೆಲವರು ಸೊಳ್ಳೆ ಕಾಟದಿಂದ ಸಂಜೆಯಾದರೆ ಸಾಕು ಸೊಳ್ಳೆ ಬತ್ತಿ ಹಿಡಿದು ಅಕ್ಕ ಪಕ್ಕದಲ್ಲಿಟ್ಟುಕೊಳ್ಳುತ್ತಿರುವ ಪ್ರಸಂಗ ಕಾಣಬಹುದಾಗಿದೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ವಿಪರೀತ ಸೊಳ್ಳೆಗಳ ಕಾಟಕ್ಕೆ ಪ್ರತಿಯೊಬ್ಬರು ಸೊಳ್ಳೆ ಪರದೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನೂ ಹಸುಗಳಿಗೂ ಹುಲ್ಲಿನ ಹೊಗೆ ಹಾಕಿ ಸೊಳ್ಳೆ ಬರದಂತೆ ನೋಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ನಿವಾಸಿಗಳು ತಮ್ಮ ನಾಯಕರ ಹತ್ತಿರ ಹಾಗೂ ದೂರವಾಣಿಯ ಮೂಲಕ ಅಧಿಕಾರಿಗಳಿಗೂ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಿದರು. ಯಾವುದೇ ಪ್ರಯೋಜನೆ ಆಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶದ ಪಂಚಾಯ್ತಿ ವ್ಯಾಪ್ತಿಯಲ್ಲು ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಸಿಂಪಡಿಸುವುದು ಅವಶ್ಯಕ. ಇದರ ಬಗ್ಗೆ ಅಧಿಕಾರಿಗಳು ಹೆಚ್ಚಿನ ಕ್ರಮ ಕೈಗೊಳ್ಳಬೇಕು.

ವಿಪರೀತ ಸೊಳ್ಳೆಗಳಿಂದ ಸಂಜೆ ಆದರೆ ಸಾಕು ಮನೆಯೊಳಗೆ ಹೋಗಲು ಆಗುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಎಚ್ಚೆತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು. ರವಿಗೌಡ ಮಲ್ಲದಗುಡ್ಡ, ಸ್ಥಳೀಯರು.

Advertisement

ಸ್ಥಳೀಯ ಜನರು ತಮ್ಮ ಮನೆಯ ಮುಂಭಾಗದಲ್ಲಿ ಹೆಚ್ಚು ನೀರನ್ನು ನಿಲ್ಲದಂತೆ ನೋಡಿಕೊಳ್ಳಬೇಕು. ಈಗಾಗಲೇ ಸೊಳ್ಳೆಗಳ ನಿಯಂತ್ರಣಕ್ಕೆ ನಗರದ ಎಲ್ಲ ವಾರ್ಡ್‌ಗಳಲ್ಲಿ ಫಾಗಿಂಗ್‌ ಮಾಡಲಾಗುತ್ತಿದೆ. ಜನತೆ ಆತಂಕಪಡುವ ಅಗತ್ಯವಿಲ್ಲ.
ವಿರೂಪಾಕ್ಷಮೂರ್ತಿ,
ಪೌರಾಯುಕ್ತರು, ಸಿಂಧನೂರು.

„ಶೇಖರ್‌ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next