ಸಿಂಧನೂರು: ತಾಲೂಕಿನ ಅಲಬನೂರು ಗ್ರಾಮದ ಯೋಧ ಶಿವಕುಮಾರ ಸ್ವಾಮಿ (35) ಹೃದಯಾಘಾತದಿಂದ ಗುರುವಾರ ಬೆಳಗಿನ ಜಾವ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಲಬನೂರು ಗ್ರಾಮದ ಶಿವಕುಮಾರ ಸ್ವಾಮಿ ರಾಜಸ್ಥಾನದ ಜೋಧಪುರದಲ್ಲಿ ಸೈನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಾರದ ಹಿಂದೆಯಷ್ಟೇ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಸಿಂಧನೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎರಡು ದಿನಗಳ ಹಿಂದೆ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ಕಳೆದ 15 ವರ್ಷಗಳಿಂದ ಶಿವಕುಮಾರ ಸ್ವಾಮಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಮುಂಚೆಯೂ ಅವರಿಗೆ ಎರಡು ಬಾರಿ ಹೃದಯಾಘಾತವಾಗಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತ ಯೋಧನಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಬಂಧು-ಬಳಗ ಇದೆ.
ಇಂದು ಅಂತ್ಯಸಂಸ್ಕಾರ: ಯೋಧ ಶಿವಕುಮಾರ ಸ್ವಾಮಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವ-ಗ್ರಾಮವಾದ ಅಲಬನೂರಿನಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಹಸ್ರಾರು ಜನರ ನಮನ: ಯೋಧ ಶಿವಕುಮಾರ ಸ್ವಾಮಿ ಪಾರ್ಥಿವ ಶರೀರ ಮಧ್ಯಾಹ್ನ 1:30ಕ್ಕೆ ಬಳ್ಳಾರಿಯಿಂದ ಸಿಂಧನೂರು ನಗರಕ್ಕೆ ಆಗಮಿಸುತ್ತಿದ್ದಂತೆ ನೂರಾರು ಯುವಕರು, ಸಾರ್ವಜನಿಕರು ಪಾರ್ಥಿವ ಶರೀರಕ್ಕೆ ಹಾರ ಹಾಕಿ ನಮನ ಸಲ್ಲಿಸಿದರು. ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ನಂತರ ಸ್ವಗ್ರಾಮ ಅಲಬನೂರಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ನೆರೆದ ಜನತೆ ಜೈ ಕಿಸಾನ್, ಜೈ ಜವಾನ್ ಘೋಷಣೆ ಕೂಗಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಬಸವನಗೌಡ ಬಾದರ್ಲಿ, ಬಿಜೆಪಿ ಅಧ್ಯಕ್ಷ ಅಮರೇಗೌಡ ವಿರುಪಾಪುರ, ತಹಶೀಲ್ದಾರ್ ಬಿ.ಎನ್.ಖಡಕ್‌ಬಾವಿ, ಜಿಪಂ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡ, ಸೈನಿಕರಾದ ವೀರೇಶ ಯಾದವ, ಹುಸೇನಪ್ಪ, ಮಾಜಿ ಸೈನಿಕರಾದ ಲೋಕೇಶ, ಬಸವರಾಜ, ಅಮರೇಶಪ್ಪ, ರೈತ ಮತ್ತು ಸೈನಿಕ ಅಭಿಮಾನಿ ಸಂಘದ ಮುಖಂಡರಾದ ವೀರೇಶ ನಟೇಕಲ್ ಸೇರಿ ಸಾವಿರಾರು ಜನ ಭಾಗಿಯಾಗಿದ್ದರು.