Advertisement
2014-15ನೇ ಸಾಲಿನಲ್ಲಿ ಏಕಕಾಲಕ್ಕೆ ಒಳಚರಂಡಿ, 24×7 ಕುಡಿಯುವ ನೀರು ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಒಳಚರಂಡಿ ಕಾಮಗಾರಿಯನ್ನು ಯುಪಿಎಲ್ ಗುಜರಾತ್‌ನ ಎನ್ವಿರಾನ್‌ಮೆಂಟಲ್ ಇಂಜಿನೀಯರಿಂಗ್ ವಡೋದರಾ ಕಂಪನಿ ಗುತ್ತಿಗೆ ಪಡೆದಿದೆ. 24×7 ಕುಡಿಯುವ ನೀರಿನ ಕಾಮಗಾರಿಯನ್ನು ಹೊಸದೆಹಲಿಯ ಎಸ್.ಪಿ.ಎಂ. ಕಂಪನಿ ಪಡೆದಿದೆ. ಇನ್ನು ನಗರೋತ್ಥಾನ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಯನ್ನು ಕಲಬುರಗಿಯ ಗುತ್ತಿಗೆದಾರ ವಿನೋದ ಪಾಟೀಲ ನಿರ್ವಹಿಸುತ್ತಿದ್ದಾರೆ.
Related Articles
Advertisement
ಸಚಿವರ ಮೌನ: ಹಿಂದೆ ಹಂಪನಗೌಡ ಬಾದರ್ಲಿಯವರು ಶಾಸಕರಾಗಿದ್ದಾಗ ಸಚಿವ ವೆಂಕಟರಾವ್ ನಾಡಗೌಡರು ಯುಜಿಡಿ ಕಾಮಗಾರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮಗಾರಿ ನೆಪದಲ್ಲಿ ಹಂಪನಗೌಡ ಬಾದರ್ಲಿಯವರ ಬೆಂಬಲಿಗರು ಹಣ ಲೂಟಿ ಮಾಡುತ್ತಿದ್ದಾರೆ. ಹಾಗೂ ಈ ಕಾಮಗಾರಿಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಈಗ ಅವರೇ ಸಚಿವರಾಗಿದ್ದರೂ ಈ ಬಗ್ಗೆ ಮೌನ ವಹಿಸಿರುವುದು ಏಕೆ ಎಂದು ಜನ ಪ್ರಶ್ನಿಸುವಂತಾಗಿದೆ.
ನಗರೋತ್ಥಾನ ಯೋಜನೆ: 2012-13ನೇ ಸಾಲಿನಲ್ಲಿ ಶಾಸಕರಾಗಿದ್ದ ವೆಂಕಟರಾವ್ ನಾಡಗೌಡರು ನಗರೋತ್ಥಾನ ಯೋಜನೆಗೆ ಚಾಲನೆ ನೀಡಿದ್ದರು. ನಗರೋತ್ಥಾನ 2ನೇ ಹಂತದ ಕಾಮಗಾರಿಗೆ 13.18 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಬಳಿಕ ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಅವಧಿಯಲ್ಲಿ 5 ವರ್ಷವಾದರೂ ಕೆಲಸ ಮುಗಿದಿಲ್ಲ. ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡಿ ಕೈತೊಳೆದುಕೊಂಡಿದ್ದಾರೆ. ಈಗ 3ನೇ ಹಂತದ ಕಾಮಗಾರಿ 2018ಕ್ಕೆ ಪ್ರಾರಂಭವಾಗಿದ್ದು 10.40 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಇನ್ನೂ ಅನೇಕ ವಾರ್ಡ್‌ಗಳಲ್ಲಿ ಕಚ್ಚಾ ರಸ್ತೆಗಳೇ ಇವೆ. ಕೆಲವೆಡೆ ನಿರ್ಮಿಸಿದ ರಸ್ತೆಗಳ ಡಾಂಬರ್ ಕಿತ್ತಿಹೋಗಿದೆ. ಇದು ನಗರೋತ್ಥಾನ ಕಾಮಗಾರಿ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.
24×7 ಕುಡಿಯುವ ನೀರಿನ ಕಾಮಗಾರಿ: ಸಿಂಧನೂರು ನಗರದ ಜನತೆಗೆ 24×7 ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿಯೂ ಆಮೆಗತಿಯಲ್ಲಿ ಸಾಗಿದೆ. 99 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಕೆರೆ ನಿರ್ಮಾಣ ಸಹ ಸೇರಿದೆ. ತುಂಗಭದ್ರ ಎಡದಂಡೆ ನಾಲೆಯಿಂದ ಕೆರೆಗೆ ನೀರು ಡಂಪ್ ಮಾಡಿ ಅಲ್ಲಿಂದ ನಗರಕ್ಕೆ ನೀರು ಪೂರೈಸುವ ಯೋಜನೆ ಇದಾಗಿದೆ. ಪ್ರಾರಂಭದಿಂದಲೂ ಈ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಯೋಜನೆ ಆರಂಭಕ್ಕೂ ಮುನ್ನವೇ ಕೆರೆ ಕುಸಿದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಬಹುಕೋಟಿ ಹಣ ದುರ್ಬಳಕೆಯಾಗಿರುವುದು ಸಹ ಕಂಡುಬರುತ್ತಿದೆ.
7 ವಾಟರ್ ಟ್ಯಾಂಕ್: ಕುಡಿಯುವ ನೀರು ಸರಬರಾಜು ಮಾಡಲು ನಗರದಲ್ಲಿ 7 ಟ್ಯಾಂಕ್‌ಗಳು ಇದ್ದು, ಇದರಲ್ಲಿ 5 ಹೊಸ ಟ್ಯಾಂಕ್, 2 ಹಳೆ ಟ್ಯಾಂಕ್ ಇವೆ. ಹೊಸ ಟ್ಯಾಂಕ್ ಪೈಕಿ 3ರಲ್ಲಿ ತಲಾ 10 ಲಕ್ಷ ಲೀಟರ್, ಉಳಿದ ಎರಡರಲ್ಲಿ ತಲಾ 5 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದಾಗಿದೆ. ಎರಡು ಹಳೆ ಟ್ಯಾಂಕ್‌ಗಳಲ್ಲಿ 10.37 ಲಕ್ಷ ನೀರು ಸಂಗ್ರಹಿಸಬಹುದಾಗಿದೆ.
ಒಟ್ಟಾರೆ ನಗರೋತ್ಥಾನ, ಒಳಚರಂಡಿ, 24×7 ಕುಡಿಯುವ ನೀರು ಕಾಮಗಾರಿ ಮುಗಿಯದ್ದರಿಂದ ನಗರದ ಜನತೆ ಹತ್ತು ಹಲವು ಸಮಸ್ಯೆ ಎದುರಿಸುವಂತಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರು ಪ್ರಮುಖ ರಸ್ತೆ ಸೇರಿ, ಓಣಿಗಳ ರಸ್ತೆಗಳಲ್ಲೂ ಸಂಚರಿಸದಂತಾಗಿದೆ. ಧೂಳಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವರು ಬಿದ್ದು ಗಾಯಗೊಂಡಿದ್ದಾರೆ. ಮೇಲಾಧಿಕಾರಿಗಳು, ಜನಪ್ರತಿನಿಧಿಗಳು ಆದಷ್ಟು ಬೇಗ ಕಾಮಗಾರಿ ಮುಗಿಸಿ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.