ಸಿಂಧನೂರು: ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಕ್ಟೋಬರ್ 22, 23ರಂದು ತಾಲೂಕಿನ ಇ.ಜೆ. ಹೊಸಳ್ಳಿ ಕ್ಯಾಂಪ್‌ನ ಯಲಮಂಚಾಲಿ ವಾಸುದೇವರಾವ್ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ವೆಂಕಟರಾವ್ ನಾಡಗೌಡ ನೇತೃತ್ವದಲ್ಲಿ ರವಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಒಮ್ಮತದಿಂದ ನಿರ್ಧರಿಸಲಾಯಿತು.
ಸಂಸದ ಕರಡಿ ಸಂಗಣ್ಣ ಮಾತನಾಡಿ, ಜಿಲ್ಲೆಯ ನೆಲ, ಜಲ, ಭಾಷೆ ಕುರಿತಂತೆ ಸಮಗ್ರ ಚಿಂತನೆಯಾಗಬೇಕು. ಸಮ್ಮೇಳನ ಅಧ್ಯಕ್ಷರ ಆಯ್ಕೆಯನ್ನು ಸಮಿತಿಯವರೇ ಅಂತಿಮಗೊಳಿಸಬೇಕು ಎಂದು ಹೇಳಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ರಾಜ್ಯದ ವಿವಿಧೆಡೆ ಮಳೆ, ನೆರೆಯಿಂದ ಜನ ನೋವಿನಲ್ಲಿದ್ದಾರೆ. ಅದ್ಧೂರಿ ಮೆರವಣಿಗೆ ಬದಲಿಗೆ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ನಡೆಸಿ ಸಮ್ಮೇಳನದಲ್ಲಿ ಚರ್ಚಾಗೋಷ್ಠಿಗಳಿಗೆ ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷೆ ಸರಸ್ವತಿ ಪಾಟೀಲ, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿದರು. ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಜೆ.ಈರಣ್ಣ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಭೀಮನಗೌಡ ಇಟಗಿ, ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಹಿರಿಯ ಸಾಹಿತಿ ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ, ಮುಖಂಡರಾದ ಎನ್.ಶಿವನಾಗಪ್ಪ, ಅಶೋಕಗೌಡ ಗದ್ರಟಗಿ, ಬೀರಪ್ಪ ಶಂಭೋಜಿ, ವೆಂಕಣ್ಣ ಜೋಶಿ, ಗೌತಮ ಮೆಹ್ತಾ, ಮಲ್ಲನಗೌಡ ಕಾನಿಹಾಳ ಸೇರಿ ವಿವಿಧ ತಾಲೂಕುಗಳ ಕಸಾಪ ಪದಾಧಿಕಾರಿಗಳು ಇದ್ದರು.