Advertisement

ಬಿಜೆಪಿಗೆ ವರವಾಗದ ಕಾಂಗ್ರೆಸ್‌ ವಿರೋಧಿ ಅಲೆ

11:12 AM Jun 01, 2019 | Naveen |

ಮಲ್ಲಿಕಾರ್ಜುನ ಮುದ್ನೂರ
ಶಹಾಪುರ:
ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ವಿರೋಧಿ ಅಲೆ ಲಾಭ ಪಡೆದುಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಶಹಾಪುರ ಪುರಸಭೆ ನಗರಸಭೆಯಾಗಿ ಮೇಲ್ದರ್ಜೇಗೆರಿದ ಬಳಿಕ ನಡೆದ ಪ್ರಥಮ ಚುನಾವಣೆ ಇದಾಗಿದ್ದು, ಪ್ರಥಮದಲ್ಲಿಯೇ ಕಾಂಗ್ರೆಸ್‌ ಪಕ್ಷ ನಗರಸಭೆ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಆಡಳಿತರೂಢ ಕಾಂಗ್ರೆಸ್‌ ವಿರುದ್ಧದ ಅಲೆ ಬಿಜೆಪಿ ಪಡೆಯುವಲ್ಲಿ ವಿಫಲವಾಗಿದೆ. ಆದರೆ ನಗರದ ಅಂದಾಜು 13 ಕಡೆ ಮುಸ್ಲಿಂ ಬಾಹುಳ್ಯವಿರುವ ಕಡೆ ಬಿಜೆಪಿ ಉತ್ತಮ ಅಭ್ಯರ್ಥಿಗಳನ್ನು ಹಾಕುವ ಮೂಲಕ ಉತ್ತಮ ತಂತ್ರಗಾರಿಕೆ ರೂಪಿಸಿತ್ತು. ಮುಸ್ಲಿಂ ಬಾಹುಳ್ಯ ಹೊಂದಿದ್ದ ವಾರ್ಡ್‌ಗಳಲ್ಲಿ ಬಿಜೆಪಿ ಗೆಲ್ಲುವುದು ಸುಲಭವಲ್ಲ ಎಂಬುದರ ಬಗ್ಗೆ ಜಾಸ್ತಿ ಚರ್ಚೆ ನಡೆದಿತ್ತು. ಆದರೆ ನಗರದ ವಾರ್ಡ್‌ ನಂ. 18 ಮತ್ತು 19ರಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮುಸ್ಲಿಂ ಸಮುದಾಯದ ಬಲ ಮಾಜಿ ಶಾಸಕ ಗುರು ಪಾಟೀಲ ಅವರ ತಂದೆಯವರಿಂದಲೂ ಇದೆ. ಶಿರವಾಳ ಕುಟುಂಬ ಯಾವುದೇ ಪಕ್ಷಕ್ಕೆ ಹೋದರು ಕೆಲ ಮುಸ್ಲಿಂ ಕುಟುಂಬಗಳು ಅವರ ಬೆಂಬಲಗರಾಗಿಯೇ ಮುಂದುವರಿಯುವ ಮೂಲಕ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎನ್ನಬಹುದು. ಉಳಿದಂತೆ ಜೆಡಿಎಸ್‌ನವರು ಕೆಲ ಕಡೆ ಉತ್ತಮ ಅಭ್ಯರ್ಥಿಗಳನ್ನು ಹಾಕಿದ್ದು, ಸುಮಾರು ಐದು ವಾರ್ಡ್‌ಗಳಲ್ಲಿ ಎರಡನೇ ಸ್ಥಾನಗಳಿಸಿದ್ದಾರೆ. ವಾರ್ಡ್‌ ನಂ. 9ರಲ್ಲಿ ಜೆಡಿಎಸ್‌ ಅಭ್ಯರ್ಥಿ ಕೇವಲ 2 ಮತಗಳ ಅಂತರದಿಂದ ಸೋಲುಂಡಿದೆ.

ಮೇ 29ರಂದು ನಗರದಲ್ಲಿ ನಡೆದಿದ್ದ ನಗರಸಭೆ 31 ವಾರ್ಡ್‌ಗಳ ಚುನಾವಣೆಯಲ್ಲಿ ಒಟ್ಟು 91 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಶೇ.61.69ರಷ್ಟು ಮತದಾನವಾಗಿತ್ತು. ಮೇ 31ರಂದು ಫಲಿತಾಂಶ ಹೊರ ಬಂದಿದ್ದು, ಒಟ್ಟು 31 ವಾರ್ಡ್‌ಗಳಲ್ಲಿ 16 ಕಾಂಗ್ರೆಸ್‌, 12 ಬಿಜೆಪಿ, 2 ಎಸ್‌ಡಿಪಿಐ ಮತ್ತು 1 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದರು. ನಗರಸಭೆ ಅಧಿಕಾರಕ್ಕೆ ಬೇಕಾದ ಮ್ಯಾಜಿಕ್‌ ಸಂಖ್ಯೆ 16 ಸದಸ್ಯರನ್ನು ಕಾಂಗ್ರೆಸ್‌ ಸರಳವಾಗಿ ಪಡೆಯುವ ಮೂಲಕ ನಗರಸಭೆ ಗದ್ದುಗೆಯನ್ನು ಮತ್ತೂಮ್ಮೆ ತನ್ನ ವಶಕ್ಕೆ ಪಡೆಯಿತು. ಇದೇ ಮೊದಲ ಬಾರಿಗೆ ಬಿಜೆಪಿ 12 ಸ್ಥಾನ ಗಳಿಸಿದರೆ, ಎಸ್‌ಡಿಪಿಐ 2 ಖಾತೆ ತೆರೆಯುವ ಮೂಲಕ ನಗರಸಭೆ ಪ್ರವೇಶಿಸಿದೆ.

ಕಳೆದ 20 ವರ್ಷದಿಂದ ಪುರಸಭೆ ಆಡಳಿತ ದರ್ಶನಾಪುರ ಅವರ ಹಿಡಿತದಲ್ಲಿತ್ತು. ಒಟ್ಟು ಕಳೆದ ಬಾರಿ 23 ಸದಸ್ಯತ್ವ ಬಲದಲ್ಲಿ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಬೆಂಬಲದೊಂದಿಗೆ ಸ್ವತಂತ್ರ ಪಕ್ಷದಿಂದ ಆಟೋ ಚಿಹ್ನೆಯಡಿ 6 ಜನ ಗೆಲುವು ಸಾಸಿದ್ದರು. ಅಲ್ಲದೆ 1 ಕೆಜೆಪಿ, 1 ಜೆಡಿಎಸ್‌ ಆಗ ಗೆಲುವಿನ ನಗೆ ಬೀರಿದ್ದವು.

Advertisement

ಅಂದು ಕಾಂಗ್ರೆಸ್‌ 15ರಲ್ಲಿ ಗೆಲುವು ಸಾಧಿಸುವ ಮೂಲಕ ಆಗಿನ ಪುರಸಭೆ ಕಾಂಗ್ರೆಸ್‌ ಪಕ್ಷದ ಪಾಲಾಗಿತ್ತು. ನಂತರದ ದಿನಗಳಲ್ಲಿ ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಕೆಜೆಪಿ ಸೇರ್ಪಡೆಯಾದ್ದರಿಂದ ಆಟೋ ಚಿಹ್ನೆಯಡಿ ಗೆಲುವು ಸಾಧಿಸಿದ್ದ 6 ಜನ ಮತ್ತು ಒಂದು ಕೆಜಿಪಿ, ಗುರು ಪಾಟೀಲ ಬೆಂಬಲಕ್ಕೆ ನಿಂತಿದ್ದವು. ಜೆಡಿಎಸ್‌ ನಂತರದ ದಿನಗಳಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿತ್ತು.

ಖಾತೆ ತೆರೆದ ಎಸ್‌ಡಿಪಿಐ
ಇದೇ ಮೊದಲ ಬಾರಿಗೆ ಎಸ್‌ಡಿಪಿಐ ಎರಡು ಖಾತೆ ತೆರೆಯುವ ಮೂಲಕ ನಗರಸಭೆಗೆ ಪಾದಾರ್ಪಣೆ ಮಾಡಿದೆ. ವಾರ್ಡ್‌ನಂ 14 ಮತತು 20ರಲ್ಲಿ ಎಸ್‌ಡಿಪಿಐ ಗೆಲುವು ಸಾಧಿಸಿದೆ. ಚುನಾವಣೆ ಪೂರ್ವದಲ್ಲಿಯೇ ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಎಸ್‌ಡಿಪಿಐ ಸುಲಭ ಗೆಲವಿಗೆ ಪೂರಕವಾಗಿದೆ.

ಪುರಸಭೆಯಿಂದ ನಗರಸಭೆವರೆಗೂ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲಿನ ಜನರು ಸತತವಾಗಿ ಆಶೀರ್ವಾದ ಮಾಡಿದ್ದಾರೆ. ನಿರಂತರ ಅಭಿವೃದ್ಧಿ ಕೆಲಸ ಮಾಡುತ್ತ ಬಂದಿದ್ದೇವೆ. ಮುಂದೆ ಶಾಶ್ವತ ಕುಡಿಯುವ ನೀರು, ಚರಂಡಿ ಇತರೆ ವ್ಯವಸ್ಥೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಸುಂದರ ನಗರ ನಿರ್ಮಾಣ ಗುರಿ ಹೊಂದಲಾಗಿದೆ.
ಶರಣಬಸಪ್ಪಗೌಡ ದರ್ಶನಾಪುರ,
ಶಾಸಕರು

ಬಿಜೆಪಿಯ 12 ಅಭ್ಯರ್ಥಿಗಳ ಗೆಲುವಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಶಾಸಕರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಿದ್ದೇನೆ. ಇನ್ನೂ ನಾಲ್ಕು ಸ್ಥಾನಗಳಲ್ಲಿ ಅಲ್ಪ ಮತಗಳಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಘಟನೆ ಮಾಡಲಾಗುವುದು. ಗೆದ್ದ ನಮ್ಮ ಅಭ್ಯರ್ಥಿಗಳು ನಗರದ ಪ್ರಗತಿಗೆ ಶ್ರಮಿಸಲಿದ್ದಾರೆ.
•ಗುರು ಪಾಟೀಲ ಶಿರವಾಳ,
ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next