Advertisement

ಶಾಲೆಗೆ ಚಕ್ಕರ್‌, ರಜೆ ಹೆಸರಲ್ಲಿ ಗೋಲ್‌ಮಾಲ್‌

05:20 PM Nov 27, 2020 | Suhan S |

ಸಿಂಧನೂರು: ಬೆರಳೆಣಿಕೆ ಶಾಲೆ ಹೊರತುಪಡಿಸಿ ತಾಲೂಕಿನ ಯಾವುದೇ ಸರ್ಕಾರಿ ಶಾಲೆಗೆ ಕಾಲಿಟ್ಟರೂ ಅಲ್ಲಿ ಶಿಕ್ಷಕರು ಕಣ್ಣಿಗೆ ಬೀಳುವುದಿಲ್ಲ. ಎಂದೋ ಕೊಟ್ಟು ಹೋದ ರಜೆ ಚೀಟಿಗಳೇ ರಾರಾಜಿಸುತ್ತವೆ!

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರು ಕಡ್ಡಾಯವಾಗಿ ಶಾಲೆಯಲ್ಲಿ ಇರಬೇಕೆಂದು ಆದೇಶಿಸಿದ್ದರೂ ಅದಕ್ಕೆ ತಾಲೂಕಿನಲ್ಲಿ ಕವಡೆ ಕಿಮ್ಮತ್ತು ನೀಡಿಲ್ಲ. ಹೊರಜಿಲ್ಲೆಯ ಶಿಕ್ಷಕರು, ದೂರದ ಊರಿನ ಬಹುತೇಕ ಶಿಕ್ಷಕರು ಯಾರಾದರೂ ಬಂದಾಗ ತೋರಿಸಲಷ್ಟೇ ರಜೆಚೀಟಿಗಳನ್ನಿಟ್ಟು ತವರು ಸೇರಿದ್ದಾರೆ. ಇದಕ್ಕೆ ಪರಸ್ಪರ ಮೌಖೀಕ ಒಪ್ಪಂದಗಳು ಆಸ್ಪದ ನೀಡಿದ್ದು, ಯಾರಾದರೂವಿಚಾರಣೆ ಮಾಡಿದಾಗಲಷ್ಟೇ ದಾಖಲೆಗಳಲ್ಲಿಪಾರಾಗುವ ವಾಮಮಾರ್ಗ ತುಳಿಯಲಾಗಿದೆ.

ಎಲ್ಲೆಡೆಯೂ ರಜೆ ಮೇಲೆ: ನ.26ರಂದು ಖುದ್ದುಶಾಲೆಗಳಿಗೆ ಭೇಟಿ ನೀಡಿದಾಗ ಬಹುತೇಕ ಕಡೆ ಶಿಕ್ಷಕರೇ ಇರಲಿಲ್ಲ. ಮಾಡಸಿರವಾರ ಸರ್ಕಾರಿ ಶಾಲೆಯಲ್ಲಿ 7ಜನ ಶಿಕ್ಷಕರಿದ್ದರೆ, ಮೂವರಷ್ಟೇ ಹಾಜರಿದ್ದರು. ಇಬ್ಬರು ತರಬೇತಿಗೆ ಹೋಗಿದ್ದರೆ, ಇಬ್ಬರು ರಜೆಯಲ್ಲಿದ್ದರು. ನ.24ಕ್ಕೆ ರಜೆ ಮುಗಿದಿದ್ದರೂ ಶಿಕ್ಷಕರೊಬ್ಬರು ದೂರವಾಣಿಯಲ್ಲೇ ತಿಳಿಸಿ, ರಜೆ ವಿಸ್ತರಿಸಿಕೊಂಡಿದ್ದರು. ಬೆಳಗುರ್ಕಿ ಗ್ರಾಮದ ಶಾಲೆಯಲ್ಲಿ 8 ಶಿಕ್ಷಕರಿದ್ದರೆ, ಇಬ್ಬರು ಮಾತ್ರ ಹಾಜರಿದ್ದರು. ಮೂವರು ತರಬೇತಿಯಲ್ಲಿದ್ದರೆ, ಇಬ್ಬರು ರಜೆಯಲ್ಲಿದ್ದರು. ಅಲಬನೂರಿನಲ್ಲಿ ಶಿಕ್ಷಕರೊಬ್ಬರು ಪಿತೃತ್ವ ರಜೆಗೆ ಹೋಗಿದ್ದರು. ಗಿಣಿವಾರದಲ್ಲಿ 11 ಶಿಕ್ಷಕರ ಪೈಕಿ ನಾಲ್ವರು ಮಾತ್ರ ಶಾಲೆಯಲ್ಲಿದ್ದರು. ಓದು ಬೆಳಕು ಕಾರ್ಯಕ್ರಮ ಹಿನ್ನೆಲೆಯಲ್ಲಿ ಮೂವರು ಶಿಕ್ಷಕರು ಮಧ್ಯಾಹ್ನ ಶಾಲೆಗೆ ಬಂದರೆ, ಮೂವರು ಶಿಕ್ಷಕರು ರಜೆ ಮೇಲಿದ್ದರು. ನ.24ರಂದು ವಿರೂಪಾಪುರ ಶಾಲೆಗೆ ಭೇಟಿ ನೀಡಿದಾಗ ಒಬ್ಬರೂ ಶಾಲೆಯಲ್ಲಿರಲಿಲ್ಲ. ಮಧ್ಯಾಹ್ನ 1 ಗಂಟೆಗೆ ಶಾಲೆಗೆ ಬೀಗ ಹಾಕಲಾಗಿತ್ತು.

ಕೇಳಬೇಕಾದವರೇ ಗಪ್‌ಚುಪ್‌: ಮುಖ್ಯಗುರು, ಸಿಆರ್‌ಪಿಯೊಂದಿಗೆ ಮೌಖೀಕ ಒಪ್ಪಂದದ ಮೇಲೆ ಊರು ಬಿಟ್ಟಿರುವ ಬಹುತೇಕ ಶಿಕ್ಷಕರು ಶಾಲೆ ಆರಂಭದ ತನಕವೂ ಚಕ್ಕರ್‌ ಹಾಕುವ ಪದ್ಧತಿ ಮೊರೆ ಹೋಗಿದ್ದಾರೆಂಬ ಮಾತು ಕೇಳಿಬಂದಿವೆ. 10, 15 ದಿನಗಳ ಲೆಕ್ಕದಲ್ಲಿ ಶಾಲೆ ಕಡೆಗೆ ಸುಳಿಯದವರಿಂದ ಮೇಲ್ವಿಚಾರಣೆ ಮಾಡಬೇಕಾದವರಿಗೆ ಕೈ ಬಿಸಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. ಕೊರೊನಾ ಸಮಯದಲ್ಲಿ ಅತ್ತ ಶಿಕ್ಷಕರಿಗೆಅನುಕೂಲ, ಮೇಲಾಧಿಕಾರಿಗಳಿಗೆ ದುಡಿಮೆಎಂಬಂತಾಗಿರುವುದರಿಂದ ಭರ್ಜರಿ ರಜೆಗಳುಸಿಗುತ್ತಿವೆ. ಶಾಲೆಗೆ ಯಾರಾದರೂ ಭೇಟಿ ನೀಡಿಪರಿಶೀಲನೆ ಮಾಡಿದಾಗಲಷ್ಟೇ ಈ ವ್ಯವಹಾರದಗುಟ್ಟು ರಟ್ಟಾಗುವುದರಿಂದ ಅದಕ್ಕೂ ಪರಿಹಾರವಾಗಿ ರಜೆ ಚೀಟಿ ಬಳಸಿಕೊಳ್ಳಲಾಗುತ್ತಿದೆ. ಯಾರೂ ಕೇಳದಿದ್ದರೆ ದೀರ್ಘ‌ ರಜೆ ಬಳಿಕ ಆಗಮಿಸಿದ ಶಿಕ್ಷಕರು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುತ್ತಿದ್ದು, ಶಾಲಾ ಹಂತದಲ್ಲೇ ಎಲ್ಲವನ್ನು ನಿಭಾಯಿಸುವ ಹೊಸ ವ್ಯವಸ್ಥೆ ಚಾಲ್ತಿಗೆ ಬಂದಿದೆ.

ಪುಸ್ತಕದಲ್ಲಿ ಮಾತ್ರ ಹಾಜರಿ! :  ಬೆಳಗುರ್ಕಿಯಲ್ಲಿ ಶಿಕ್ಷಕಿಯೊಬ್ಬರು ಗುರುವಾರ ಶಾಲೆಯಲ್ಲಿ ರಜೆ ಮೇಲಿದ್ದಾರೆಂದು ಹೇಳಲಾಯಿತು. ಪೂರಕವಾಗಿ ಮುಖ್ಯ ಗುರು ರಜೆ ಚೀಟಿ ತೋರಿಸಿದರು. ಅಚ್ಚರಿ ಎಂದರೆ ಹಾಜರಿ ಪುಸ್ತಕದಲ್ಲಿ ಶಾಲೆಯಲ್ಲೇ ಇಲ್ಲದ ರಜೆ ಮೇಲಿರುವ ಶಿಕ್ಷಕಿಯೊಬ್ಬರು ನ.26ರಂದು ಕರ್ತವ್ಯ ನಿರ್ವಹಿಸಿದ್ದಾಗಿ ಸಹಿ ಮಾಡಿದ್ದರು. “ಬೈ ಮಿಸ್ಟೇಕ್‌ ಸಹಿ ಮಾಡಿದ್ದಾರೆ’ ಎಂಬ ಸಬೂಬು ಕೇಳಿಬಂತು.

Advertisement

ತ‌ರಬೇತಿಯಲ್ಲೂ ಇಲ್ಲ, ಶಾಲೆಯಲ್ಲೂ ಇಲ್ಲ :  ತಾಲೂಕಿನ 4ನೇ ಮೈಲ್‌ ಕ್ಯಾಂಪಿನ ಶಾಲೆಗೆ ನ.24ರಂದು ಬೆಳಗ್ಗೆ 11.30ಕ್ಕೆ ಭೇಟಿ ನೀಡಿದಾಗ ಶಾಲೆಗೆ ಬೀಗ ಹಾಕಲಾಗಿತ್ತು. ಈ ಬಗ್ಗೆ ಶಿಕ್ಷಕರನ್ನು ವಿಚಾರಿಸಿದಾಗ ತರಬೇತಿಗೆ ಹೋಗಿದ್ದಾಗಿ ಹೇಳಿದರು. ತರಬೇತಿಗೆ ಹಾಜರಾದ ಶಿಕ್ಷಕರ ಪಟ್ಟಿ ಗಮನಿಸಿದಾಗ ಅಲ್ಲಿ ಶಿಕ್ಷಕರೇ ಇರಲಿಲ್ಲ. ಅಲ್ಲಿಯೂ ಇಲ್ಲ; ಇಲ್ಲಿಯೂ ಇಲ್ಲ. ಶಾಲೆಗೆ ಬೀಗ ಹಾಕಿ ತರಬೇತಿ ನೆಪದಲ್ಲಿ ನುಸುಳಿಕೊಂಡಿದ್ದು ಸ್ಪಷ್ಟವಾಯಿತು.

 

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next