Advertisement

ಸಂಘದ ಸದಸ್ಯರಿಗೆ ಸರ್ಕಾರಿ ಸೌಲಭ್ಯ ತಲುಪಿಸಿ: ಪಾಟೀಲ

05:30 PM Mar 08, 2020 | Naveen |

ಸಿಂದಗಿ: ಸರಕಾರದ ಸೌಲಭ್ಯಗಳನ್ನು ಸಹಕಾರಿ ಸಂಘ ಸಂಸ್ಥೆಗಳು ಸದಸ್ಯರಿಗೆ ಒದಗಿಸಿ ಅವರ ಆರ್ಥಿಕ ಜೀವನಮಟ್ಟ ಸುಧಾರಿಸಿಕೊಳ್ಳಲು ಸಹಕಾರ ನೀಡಬೇಕು ಎಂದು ಡಿಸಿಸಿ ಬ್ಯಾಂಕ್‌ ವಿಶ್ರಾಂತ ಸಹಕಾರ ಸಂಘಗಳ ಅಪರ ನಿಬಂಧಕ, ಬ್ಯಾಂಕಿನ ವೃತ್ತಿಪರ ನಿರ್ದೇಶಕ ಎಂ.ಜಿ. ಪಾಟೀಲ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಸಿಂದಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ವಿಡಿಸಿಸಿ ಬ್ಯಾಂಕ್‌ ಆಯೋಜಿಸಿದ್ದ ಸಿಂದಗಿ ತಾಲೂಕಿನ ಪಿಕೆಪಿಎಸ್‌ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಹಕಾರ ಸಂಘಗಳ ಕಾಯ್ದೆ, ಬ್ಯಾಂಕ್‌ನ ಸಾಲ ಧೋರಣೆ, ಸಮರ್ಪಕ ಕಾರ್ಯರ್ನಿಹಣೆ ಕುರಿತ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಕೆಪಿಎಸ್‌) ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಮಗೆ ಅನ್ವಯವಾಗುವ ಸಹಕಾರ ಸಂಘಗಳ ಕಾನೂನಿನ ಮಾಹಿತಿ ಹೊಂದಿರಬೇಕು. ಸಹಕಾರಿ ಸಂಘಗಳ ಕಾನೂನು ಅರಿತಲ್ಲಿ ಸುಗಮ ಆಡಳಿತ ನಡೆಸಲು ಸಾಧ್ಯ ಎಂದರು.

ಸಹಕಾರಿ ಸಂಘಗಳ ಕಾನೂನಿನ ತಿಳಿವಳಿಕೆ ಮತ್ತು ಮಾಹಿತಿ ನೀಡಲು ಪಿಕೆಪಿಎಸ್‌ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ, ಸದಸ್ಯರಿಗೆ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಪಾರದರ್ಶಕ ಆಡಳಿತ ನಡೆಸಬೇಕು. ಸದಸ್ಯ ರೈತರಿಗೆ ಸರಕಾರ ನೀಡುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು ಎಂದರು. ಒಂದು ಸಹಕಾರ ಸಂಘ ಅಭಿವೃದ್ಧಿಯಾಗ ಬೇಕಾದರೆ ಸದಸ್ಯರ ಸಹಕಾರ ಅಗತ್ಯ. ಆದ್ದರಿಂದ ಪಿಕೆಪಿಎಸ್‌ ಅಧ್ಯಕ್ಷರು, ಸಂಘದ ಸದಸ್ಯರ, ನೌಕರರ, ಕಾರ್ಯನಿರ್ವಾಹಕ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಸಂಘದ ಸದಸ್ಯನಾಗಲು ಅರ್ಹತೆ, ಸೌಲಭ್ಯಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡುವುದು, ಸದಸ್ಯ ಮತದಾನ ಅಧಿಕಾರ, ವಾರ್ಷಿಕ ಮಹಾಸಭೆ ಕಡ್ಡಾಯವಾಗಿ ನಡೆಸುವುದು, ಸಂಘದ ವ್ಯವಹಾರದಲ್ಲಿ ಕಡ್ಡಾಯವಾಗಿ ಭಾಗವಹಿಸುವುದು, ನಿಬಂಧಕರಿಗೆ ಮಾಹಿತಿ ಸಲ್ಲಿಸುವುದು, ಸಂಘದ ಆಡಳಿತ ಮಂಡಳಿ ಜವಾಬ್ದಾರಿಗಳು, ಚುನಾವಣೆ ಜರುಗಿಸುವ ಅಧಿ ಕಾರ, ಆಡಳಿತ ಮಂಡಳಿ ಅಧಿಕಾರಿಯ ಕಾರ್ಯ ಚಟುವಟಿಕೆಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಾರ್ಯ ನಿರ್ವಹಣಾಧಿಕಾರಿ ಅವರ ಜವಾಬ್ದಾರಿಗಳು, ಆಡಳಿತ ಮಂಡಳಿ ಸದಸ್ಯರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದು, ವಿಶೇಷಾಧಿಕಾರಿ ನೇಮಿಸುವುದು, ಸಂಘದ ದಾಖಲೆ, ಆಸ್ತಿ ಹಸ್ತಾಂತರಿಸುವುದು, ಬಂಡವಾಳ ತೊಡಗಿಸುವುದು, ಶಾಸನಬದ್ಧ ಲೆಕ್ಕಪರಿಶೋಧನೆ, ಸದಸ್ಯರಿಗೆ ಚೀಟಿ ನೀಡುವುದು ಸೇರಿ ಒಟ್ಟು 25 ಅಂಶಗಳ ಕುರಿತು ಮಾಹಿತಿ ನೀಡುವ ಮೂಲಕ ತರಬೇತಿ ನೀಡಿದರು.

Advertisement

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ. ರಾಜಣ್ಣ ಮಾತನಾಡಿ, ಪಿಕೆಪಿಎಸ್‌ಗೆ ರೈತರೇ ಸದಸ್ಯರಾಗಿರುತ್ತಾರೆ. ಸದಸ್ಯರ ಆರ್ಥಿಕ ಜೀವನ ಅಭಿವೃದ್ಧಿ ಮಾಡಿಕೊಳ್ಳಲು ಸರಕಾರ ಕಾಲಕ್ಕೆ ತಕ್ಕಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತದೆ. ಈ ಯೋಜನೆಗಳ ಮಾಹಿತಿ ಸದಸ್ಯರಿಗೆ ತಿಳಿಸಿ ಅವುಗಳ ಲಾಭ ಅವರಿಗೆ ತಲುಪಿಸಬೇಕು ಎಂದು ಹೇಳಿದರು.

ನಿರ್ದೇಶಕ ಹನುಮಂತ್ರಾಯಗೌಡ ಪಾಟೀಲ, ಸಂಪನ್ಮೂಲ ಅಭಿವೃದ್ಧಿ ಅಧಿಕಾರಿ ಆರ್‌.ಎಂ. ಬಣಕರ, ಸಿಂದಗಿ ಶಾಖಾ ವ್ಯವಸ್ಥಾಪಕ ಎಂ.ಜಿ. ಬಿರಾದಾರ ಮಾತನಾಡಿದರು. ಕ್ಷೇತ್ರಾ ಧಿಕಾರಿಗಳಾದ ಪಿ.ಎಸ್‌. ಬಿರಾದಾರ, ಎಸ್‌ .ಬಿ. ಬಿರಾದಾರ, ಎನ್‌.ಜಿ. ಬಿರಾದಾರ, ಎಸ್‌.ಎಂ. ಬಿರಾದಾರ, ಎಂ.ಎನ್‌. ಮಸಳಿ, ಎಸ್‌.ವಿ. ರಾಜಗಿರಿ, ಎಚ್‌.ಎಸ್‌. ದಳವಾಯಿ, ಎಂ.ಬಿ. ಕುಲಕರ್ಣಿ, ಸಿಂದಗಿ ಪಿಕೆಪಿಎಸ್‌ ನಿರ್ದೇಶಕ ಶಂಕರಗೌಡ ಪಾಟೀಲ, ಭೀಮನಗೌಡ ಬಿರಾದಾರ, ಆರ್‌.ಸಿ. ಪಾಟೀಲ, ಅಧ್ಯಕ್ಷ ಅಶೋಕ ಮಣೂರ, ಅಂಬಣ್ಣ ಹೂಗಾರ, ಸೇರಿದಂತೆ ಒಟ್ಟು ತಾಲೂಕಿನಲ್ಲಿರುವ 52 ಪಿಕೆಪಿಎಸ್‌ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ ಭೂಶೆಟ್ಟಿ, ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ಮಲಗೊಂಡ ನಿರೂಪಿಸಿದರು. ನೋಡಲ್‌ ಅಧಿಕಾರಿ ಎಂ.ಎಚ್‌. ಹತ್ತೂರಕರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next