ಸಿಂದಗಿ: ಡಂಬಳ-ಗದಗ ಮಠದ ಲಿಂ| ಡಾ| ತೋಂಟದ ಸಿದ್ಧಲಿಂಗ ಸ್ವಾಮಿಗಳು ಸಮಾಜಕ್ಕೆ ಗುರುವಾಗಿ, ಜಗದ್ಗುರುಗಳಾಗಿ, ಅಡ್ಡಪಲ್ಲಕ್ಕಿ ತಿರಸ್ಕರಿಸಿ ಆಡಂಬರ ಜೀವನ ತ್ಯಜಿಸಿದ ಮಹಾನ್ ಸಂತರಾಗಿದ್ದಾರೆ ಎಂದು ಕೈಗಾರಿಕೆ ತರಬೇತಿ ಸಂಸ್ಥೆ ಕಾರ್ಯದರ್ಶಿ ನಿಂಗನಗೌಡ ಪಾಟೀಲ ಹೇಳಿದರು.
ಲಿಂ| ಡಾ| ತೋಂಟದ ಸಿದ್ಧಲಿಂಗ ಸ್ವಾಮಿಗಳ 71ನೇ ಜನ್ಮ ದಿನಾಚರಣೆ ನಿಮಿತ್ತ ಮೋರಟಗಿ ಗ್ರಾಮದಲ್ಲಿನ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆದ ಭಾವೈಕ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1982ರಲ್ಲಿ ಗೋಕಾಕ ಚಳವಳಿ ಗಂಟೆಯನ್ನು ಸಿಂದಗಿಯಿಂದ ಮೊಳಗಿಸಿದ ಕೀರ್ತಿ ಹಾಗೂ 80 ಸಾವಿರ ಎಕರೆ ಪ್ರದೇಶ ಕಪ್ಪತಗುಡ್ಡವನ್ನು ಹೋರಾಟದ ಮೂಲಕ ಗಣಿಗಾರಿಕೆಯಿಂದ ರಕ್ಷಿಸಿದ ಕೀರ್ತಿ ಡಾ| ತೋಂಟದ ಸಿದ್ಧಲಿಂಗ ಸ್ವಾಮಿಗಳಿಗೆ ಸಲ್ಲುತ್ತದೆ ಎಂದರು.
ಲಿಂ| ಡಾ| ತೋಂಟದ ಸಿದ್ಧಲಿಂಗ ಸ್ವಾಮಿಗಳು ತಮ್ಮ ಬದುಕಿನುದ್ದಕ್ಕೂ 12ನೇ ಶತಮಾನದ ಬಸವಾದಿ ಶಿವಶರಣರ ಆಶಯಗಳನ್ನು ಅನುಷ್ಠಾನಕ್ಕೆ ತರಲು ಸಾಕಷ್ಟು ಶ್ರಮಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು.
ಸಂಸ್ಥೆಗಳ ಮೂಲಕ ಅನಾಥ, ಹಿಂದುಳಿದ, ಬಡ ಮಕ್ಕಳಿಗೆ ಅನ್ನ, ಶಿಕ್ಷಣ, ಪ್ರವಚನ ನೀಡುವ ಮೂಲಕ ತ್ರಿವಿಧ ದಾಸೋಹಿ ಎನಿಸಿಕೊಂಡಿದ್ದಾರೆ ಎಂದು ಹೇಳಿದರು. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಮಾತೃ ಹೃದಯದಿಂದ ಬದುಕಿದವರು. ಸ್ವಜಾತಿಯವರನ್ನು ಹಚ್ಚಿಕೊಳ್ಳದೇ ದೀನ, ದಲಿತ ಹೀಗೆ ಎಲ್ಲ ಧರ್ಮದವರನ್ನು ಸಮನಾಗಿ ಕಾಣುತ್ತಿದ್ದರು. ವೈಚಾರಿಕತೆ ಪ್ರತಿಪಾದಿಸುತ್ತ ಬಸವ ತತ್ವದ ಪರಿಪೂರ್ಣತೆ ಅರಿತಿದ್ದರು. ತೋಂಟದ ಶ್ರೀಗಳು ಜನಸಾಮಾನ್ಯರ ನಡುವಿನ ಬಸವಣ್ಣ ಆಗಿದ್ದುಕೊಂಡು ಸಮ ಸಮಾಜ ನಿರ್ಮಿಸಲು ಹಗಲಿರುಳು ಶ್ರಮಿಸಿದ್ದಾರೆ ಎಂದು ಹೇಳಿದರು.
ಕೈಗಾರಿಕಾ ತರಬೇತಿ ಪ್ರಾಚಾರ್ಯ ಎಂ.ಸಿ.ಸಿಂದಗಿ ಮಾತನಾಡಿ, ತೋಂಟದ ಶ್ರೀಗಳು ಶಿಕ್ಷಣ ಮತ್ತು ಸಾಹಿತ್ಯದ ಪೋಷಕರಾಗಿದ್ದರು ಮತ್ತು ಸ್ವತಃ ಲೇಖಕರಾಗಿದ್ದರು. ಶ್ರೀಗಳು 500ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರು ಸಮಾಜದ ಎಲ್ಲ ಸಮುದಾಯಗಳಲ್ಲಿ ಭಕ್ತರನ್ನು ಹೊಂದಿದ್ದರು ಎಂದು ಹೇಳಿದರು.
ಅಮ್ಮಣ್ಣ ಯಂಕಂಚಿ, ಆರ್.ಕೆ. ಪತ್ತಾರ ಮಾತನಾಡಿದರು. ಜಿಪಂ ಮಾಜಿ ಸದಸ್ಯ ನರಸಿಂಗಪ್ರಸಾದ ತಿವಾರಿ, ಮೀಬೂಬಸಾಬ ಕಣ್ಣಿ, ಮುತ್ತಪ್ಪ ಸಿಂಗೆ, ಬೂತಾಳಿ ವಸ್ತಾರಿ, ಈರಣ್ಣ ಅರಕೇರಿ, ಸಿದ್ದು ಶೀಲವಂತ, ಸುರೇಶ ಬಮ್ಮಣ್ಣಿ, ಅಣ್ಣಾರಾಯ ಲಾಳಸಂಗಿ, ಈರಯ್ಯ ಗಣಾಚಾರಿ, ಚಿದಾನಂದ ಕುಂಬಾರ, ಶಿವಶಂಕರ ಚೌದರಿ, ಗುರುಸಂಗಪ್ಪ ಕತ್ತಿ, ರಾಜಶೇಖರ ಯಕ್ಕುಂಡಿ, ಮಹೇಶ ಸಿಂಗಾಡಿ, ಸಿದ್ದನಗೌಡ ಪಾಟೀಲ, ಪ್ರಶಾಂತ ಕೋರಿ, ಸಂಗಮೇಶ ಅಂಗಡಿ, ಸಂಗಮನಾಥ ಪಟ್ಟಣಶೆಟ್ಟಿ, ಶಿವಣ್ಣ ಮದರಿ ಇದ್ದರು.