ವಿಜಯಪುರ: ಜಿಲ್ಲೆಯ ಸಿಂದಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಯಾದಗಿರಿ ಜಿಲ್ಲಾ ಮೂಲದ ಅಂತರ ಜಿಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿ, ಕಳ್ಳತನವಾಗಿದ್ದ 16.65 ಲಕ್ಷ ರೂ. ಮೌಲ್ಯದ 37 ಬೈಕ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂದಗಿ ಸಿಪಿಐ ನಾನಾಗೌಡ ಪೊಲೀಸಪಾಟೀಲ ಹಾಗೂ ಪಿಎಸ್ಐ ಭೀಮಣ್ಣ ರಬಕವಿ ನೇತೃತ್ವದ ಪೊಲೀಸರ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಬಂಧಿತರನ್ನು ಯಾದಗಿರಿ ಜಿಲ್ಲೆಯ ಸುರಪುರ, ಶಹಪುರ ಮೂಲದ ಬಸವರಾಜ ಹುಣಸಿಗಿಡದ (31), ಹುಲುಗಪ್ಪ ಕೂಕಲೋರ (22), ಕೊಂಡಯ್ಯ ಪಾರ್ವತಿಗಡ್ಡ (22), ರವಿಕುಮಾರ ಪಾರ್ವತಿಗಡ್ಡೆ (21) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಗಳ ಸಿಂದಗಿ, ತಾಳಿಕೋಟಿ, ಜೀವರ್ಗಿ, ಯಡ್ರಾಮಿ, ನೆಲೋಗಿ, ಭೀಮರಾಯನಗುಡಿ, ರಾಜನಕೋಳೂರು ಸೇರಿದಂತೆ ಇತರೆ ಕಡೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳ ಜಮೀನುಗಳಲ್ಲಿ ನಿಲ್ಲಿಸಿದ್ದ ಬೈಕ್ ಗಳ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು.
ಪೊಲೀಸರು ಅಂತರ ಜಿಲ್ಲಾ ಬೈಕ್ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಸಿಂದಗಿ ಪೊಲೀಸರಿಗೆ ವಿಜಯಪುರ ಎಸ್ಪಿ ಋಷಿಕೇಶ ಭಗವಾನ್ ಬಹುಮಾನ ಘೋಷಿಸಿದ್ದಾರೆ.