ಸಿಂದಗಿ: ಸರ್ಕಾರ ಮಧ್ಯವರ್ತಿಗಳ ಹಾವಳಿ ಮತ್ತು ನಿಜವಾದ ಫಲಾನುಭವಿ ಸೌಲಭ್ಯ ನೀಡುವ ನಿಟ್ಟಿನಲ್ಲಿ ಹೋಬಳಿ ಮಟ್ಟದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತ ಸ್ಥಳದಲ್ಲಿಯೇ ಆದೇಶ ಪತ್ರಗಳನ್ನು ನೀಡಿವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಉಪ ವಿಭಾಗಾಧಿಕಾರಿ ಡಾ| ಆನಂದ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಪಂನಲ್ಲಿ ತಾಲೂಕಾಡಳಿತ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೋಬಳಿ ಮಟದಲ್ಲಿ ಹಮ್ಮಿಕೊಂಡ ಪಿಂಚಣಿ ಆದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಪೋಸ್ಟ್‌ಮ್ಯಾನ್ ಸರಿಯಾಗಿ ಹಣ ಬಟವಡೆ ಮಾಡುತ್ತಿರುವ ಬಗ್ಗೆ ನಿಗಾ ವಹಿಸಿಬೇಕಲ್ಲದೆ ಸರ್ಕಾರದಿಂದ ಬರುವಂತ ಸವಲತ್ತು ದುರಪಯೋಗ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರಕಾರ ಹತ್ತಾರು ಪಿಂಚಣಿ ಯೋಜನೆಗಳು ಜಾರಿಯಲ್ಲಿ ತಂದಿದೆ. ಅರ್ಹವಿರುವ ಫಲಾನುಭವಿಗಳು ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ತಮ್ಮ ಭಾವಚಿತ್ರ ಸೇರಿದಂತೆ ಸಂಬಂಧಿಸಿದ ದಾಖಲಾತಿಯನ್ನು ನಮ್ಮ ನೆಮ್ಮದಿ ಕೇಂದ್ರದಲ್ಲಿ ನೀಡಿ ಅರ್ಜಿ ಸಲ್ಲಿಸಬೇಕು. ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು. ನಿಮಗೆ ಪಿಂಚಣಿ ಕೊಡಿಸುತ್ತೇನೆ ಎಂದು ಮಧ್ಯವರ್ತಿಗಳು ಬರುತ್ತಿರುತ್ತಾರೆ. ಅಂಥವರಿಗೆ ಅವಕಾಶ ನೀಡಬೇಡಿ. ನೇರವಾಗಿ ಕಚೇರಿಗೆ ಬಂದು ಮಾಹಿತಿ ಪಡೆಯಿರಿ ಎಂದು ಹೇಳಿದರು.
ಪಿಂಚಣಿದಾರರು ಹಾಗೂ ಗ್ರಾಮಸ್ಥರು ಉಪವಿಭಾಗದ ಅಧಿಕಾರಿಗಳ ಎದುರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಉಪ ತಹಶೀಲ್ದಾರ್ ಸಿ.ಬಿ. ಬಾಬಾನಗರ, ಗ್ರಾಮ ಲೆಕ್ಕಾಧಿಕಾರಿ ವೈ.ಡಿ. ಗಂಗನಳ್ಳಿ, ಪಿಡಿಒ ಬಿ.ಎಂ. ಸೊನ್ನಗಿ, ಶ್ರೀಶೈಲ ಕೆರಿಗೊಂಡ, ಬಂದೇನವಾಜ್ ಕಣ್ಣಿ, ಚಿನ್ನಪ್ಪ ಕುಂಬಾರ, ಮೈಬೂಬ ಕಕ್ಕಳಮೇಲಿ, ಅಮ್ಮಣ್ಣ ಕೆರಿಗೊಂಡ, ಶರಣಪ್ಪ ವಿಭೂತಿ, ಭಾಗಣ್ಣ ಕೆಂಭಾವಿ, ರಮಜಾನ್ ಮಕಾಂದಾರ, ಗುರುರಾಜ ಹಡಪದ, ಅರ್ಜುನ ಕಟ್ಟಿಮನಿ, ಸಿಬ್ಬಂದಿಗಳಾದ ರಫೀಕ್ ದೇವರನಾವದಗಿ, ಪಿಂಟು ಭಾರತಿ, ಸುಭಾಷ್ ಇಟ್ಟಗಿ, ಸಾವಳಿಗೆಪ್ಪ ನೆಲ್ಲಗಿ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.