Advertisement

ಕನ್ನಡ ಭಾಷೆ ಮೇಲಿನ ಪಾಪು ಪ್ರೀತಿ ಪ್ರಶ್ನಾತೀತ

06:32 PM Mar 18, 2020 | Naveen |

ಸಿಂದಗಿ: ಮೊನಚು ಬರಹಗಳಿಂದ ಪ್ರಸಿದ್ಧರಾಗಿದ್ದ ಹಿರಿಯ ಪತ್ರಕರ್ತ, ಲೇಖಕ, ಕನ್ನಡಪರ ಹೋರಾಟಗಾರ ಡಾ|ಪಾಟೀಲ ಪುಟ್ಟಪ್ಪ ಅವರು ಸೋಮವಾರ ಪ್ರಪಂಚಕ್ಕೆ ವಿದಾಯ ಹೇಳಿದ ಹಿನ್ನೆಲೆಯಲ್ಲಿ ಸಿಂದಗಿ ತಾಲೂಕಿನ ಜನಪ್ರತಿನಿಧಿಗಳು, ಮಠಾಧೀಶರು, ಸಾಹಿತಿಗಳು, ಪತ್ರಕರ್ತರು ಮಂಗಳವಾರ ಸಂತಾಪ ಸೂಚಿಸಿದ್ದಾರೆ.

Advertisement

ಗೋಕಾಕ ಚಳವಳಿ ಸಮಿತಿ ತಾಲೂಕಾಧ್ಯಕ್ಷ ಡಾ| ಬಿ.ಆರ್‌.ನಾಡಗೌಡ ನೇತೃತ್ವದಲ್ಲಿ ಸಿಂದಗಿ ಪಟ್ಟಣದಲ್ಲಿ ನಡೆದ ಗೋಕಾಕ ಚಳವಳಿ ಪ್ರಚಾರ ಕಾರ್ಯಕ್ರಮದಲ್ಲಿ ನಟ ಡಾ|ರಾಜಕುಮಾರ,ಶಂಕರನಾಗ ಅವರ ಜೊತೆಗೆ ಡಾ| ಪಾಟೀಲ ಪುಟ್ಟಪ್ಪ ಭಾಗವಹಿಸಿದ್ದರು. ಅವರು ಭಾರತೀಯ ಬರಹಗಾರ, ಅನುಭವಿ ಪತ್ರಕರ್ತರು. 1940 ಮತ್ತು 1950ರ ದಶಕದ ಅಂತ್ಯದಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದ ಪ್ರದೇಶಗಳನ್ನು ಏಕೀಕರಿಸುವಂತೆ ಒತ್ತಾಯಿಸಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು. ನಂತರ ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಮರು ನಾಮಕರಣ ಮಾಡಲಾಯಿತು. 2003ರಲ್ಲಿ ಬೆಳಗಾವಿಯಲ್ಲಿ ನಡೆದ 70ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. 1949ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್‌ ಯೂನಿವರ್ಸಿಟಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಪಾಟೀಲ ಪುಟ್ಟಪ್ಪನವರ ಕನ್ನಡ ಭಾಷೆ ಮೇಲಿನ ಪ್ರೀತಿ, ನೆಲ, ಜಲದ ಮೇಲಿನ ಕಾಳಜಿ ಮತ್ತು ಬದ್ಧತೆ ಪ್ರಶ್ನಾತೀತವಾದ್ದು. ಎಂಥ ವೈರಿಯೂ ಮೆಚ್ಚುವಂತಹದ್ದು. ನಲವತ್ತು-ಐವತ್ತು ದಶಕಗಳ ಕಾಲ ಕನ್ನಡ ಭಾಷೆ ಕುರಿತಂತೆ ಎಂಥದೇ ಸಮಸ್ಯೆ ಎದುರಾದಾಗ ಪುಟ್ಟಪ್ಪ ಏನು ಹೇಳುತ್ತಾರೆ ಎಂದು ನಾಡಿಗೆ ನಾಡೇ ಎದುರು ನೋಡುತ್ತಿತ್ತು. ಒಂದು ಕಾಲಕ್ಕೆ ಏಳು ಪತ್ರಿಕೆಗಳನ್ನು ನಡೆಸಿ, ಪತ್ರಿಕೋದ್ಯಮದ ಭೀಷ್ಮ ಎನಿಸಿಕೊಂಡವರು. ಅವರ ಅಗಲಿಕೆಯಿಂದ ಕನ್ನಡ ನಾಡಿಗೆ, ಕನ್ನಡ ಸಾಹಿತ್ಯಕ್ಕೆ ಹಾಗೂ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಸಾರಂಗಮಠ-ಗಚ್ಚಿನಮಠದ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು, ಶಾಸಕ ಎಂ.ಸಿ. ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಅಂಬಿಕಾತನಯದತ್ತ ವೇದಿಕೆ ಅಧ್ಯಕ್ಷ ಡಾ| ಬಿ.ಆರ್‌. ನಾಡಗೌಡ, ಹಿರಿಯ ಸಂಶೋಧಕ ಡಾ| ಎಂ.ಎಂ. ಪಡಶೆಟ್ಟಿ, ಹಿರಿಯ ಸಾಹಿತಿ ಡಾ| ಚನ್ನಪ್ಪ ಕಟ್ಟಿ, ಕಜಾಪ ಜಿಲ್ಲಾಧ್ಯಕ್ಷ ಬಿ.ಎನ್‌. ಪಾಟೀಲ ಇಬ್ರಾಹಿಂಪುರ, ಮಕ್ಕಳ ಸಾಹಿತಿ ಹ.ಮ. ಪೂಜಾರ, ಪ್ರಸ್‌ ಕ್ಲಬ್‌ ಅಧ್ಯಕ್ಷ ಶಾಂತು ಹಿರೇಮಠ, ಮಕ್ಕಳ ಸಾಹಿತಿ ರಾ.ಸಿ. ವಾಡೇದ, ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಚಂದ್ರಶೇಖರ ದೇವರೆಡ್ಡಿ, ಸಾಹಿತಿ ವಿ.ವಿ. ಗಣಾಚಾರಿ, ಕಸಾಪ ತಾಲೂಕಾಧ್ಯಕ್ಷ ಎಸ್‌.ಬಿ. ಚೌಧರಿ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಪ್ರಭುಲಿಂಗ ಲೋಣಿ, ಪತ್ರಕರ್ತರಾದ ವೀರೇಶ ಮಠಪತಿ, ಇಂದುಶೇಖರ ಮಣೂರ, ಡಾ| ರಮೇಶ ಕತ್ತಿ, ರಮೇಶ ಪೂಜಾರ, ಸಿದ್ದಲಿಂಗ ಕಿಣಗಿ, ನಿಂಗರಾಜ ಅತನೂರ, ಅವಧೂತ ಬಂಡಗಾರ, ಚಂದ್ರಕಾಂತ ಮಾವೂರ, ಸಾಹಿತಿ ಈರನಗೌಡ ಪಾಟೀಲ ಹಂದಿಗನೂರ, ರಾಗರಂಜನಿಯ ಡಾ| ಪ್ರಕಾಶ, ಸ್ಥಳೀಯ ನೆಲೆ ಪ್ರಕಾಶನ ಹಾಗೂ ವಿದ್ಯಾಚೇತನ ಪ್ರಕಾಶನದ ಬಳಗ ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next