ಸಿಂದಗಿ: ಸೇವೆ ಎಂಬುದು ಒಂದು ಸಮಾಜದ ಕಾರ್ಯ. ಸೇವೆಯಲ್ಲಿ ಸ್ವಾರ್ಥತೆ, ಅಹಂಕಾರಗಳು ಸಲ್ಲದು ಎಂದು ಸ್ಥಳೀಯ ಸಾರಂಗಮಠದ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಗೌರವಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸೇವೆ ಮಾಡುವುದು ಒಂದು ಧರ್ಮ. ಅದನ್ನು ನಿರಂತರವಾಗಿ ಮಾಡುವುದು ನಮ್ಮ ಕಾರ್ಯವಾಗಬೇಕು. ಮಠ, ಮಂದಿರ, ಶ್ರದ್ಧಾ ಕೇಂದ್ರಗಳು ಸೇವೆಯ ಮನೋಭಾವ ತುಂಬುತ್ತವೆ. ಮನುಷ್ಯ ಜೀವಿ ಭೂಮಿಗೆ ಬಂದ ಮೇಲೆ ನಮ್ಮ ಕೈಲಾದಷ್ಟು ಸಮಾಜ ಸೇವೆ ಮಾಡಬೇಕು. ಫಲಾಪೇಕ್ಷೆ ಇಲ್ಲದ ಸೇವೆ ನಿಜವಾದ ಸೇವೆ ಎಂದರು.
ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ರೋಹಿಣಿ ಬಸಾಪುರ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿ, ನಾವು ಎಂದು ಗೌರವಕ್ಕೆ ಬೆನ್ನತ್ತಿ ಹೋಗಬಾರದು. ಅದು ತಾನಾಗಿಯೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಸಾಧನೆ ನಿರಂತರವಾಗಿರಬೇಕು. ಅಧ್ಯಾತ್ಮಿಕ ಅಂಶಗಳನ್ನು ನಮ್ಮ ಜೀವನದಲ್ಲಿ ನಿತ್ಯ ಅಳವಡಿಸಿಕೊಳ್ಳಬೇಕು. ಇಂದು ಸಮಾಜ ಅತ್ಯಂತ ಕಲುಷಿತವಾಗುತ್ತಿದೆ. ಅಧ್ಯಾತ್ಮಿಕ ಭಾವನೆಗಳು ಆ ಕಲುಷಿತವನ್ನು ಹೊಡೆದು ಹಾಕುತ್ತವೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೇಂದ್ರ ಜೀವನವನ್ನು ಸನ್ಮಾರ್ಗದತ್ತ ಕೊಂಡ್ಯೊಯುತ್ತದೆ ಎಂದರು.
ಬೆಳಗಾವಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಕೇಂದ್ರದ ಮುಖ್ಯ ಸಂಚಾಲಕಿ ಅಂಬಿಕಾ ಅಕ್ಕಾ, ಸಿಂದಗಿ ಕೇಂದ್ರದ ಪವಿತ್ರಾ ಅಕ್ಕ, ಹಾಸನದ ದ್ವಿತೀಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ವೈ. ಬಸಾಪುರ ಮಾತನಾಡಿದರು.
ಈ ವೇಳೆ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಸಿಂದಗಿಯ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರಿಗೆ ಹಾಗೂ ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣದಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರೋಹಿಣಿ ಬಸಾಪುರ ಅವರನ್ನು ಸಿಂದಗಿ ಕೇಂದ್ರದಿಂದ ಸನ್ಮಾನಿಸಲಾಯಿತು.
ಕೇಂದ್ರದ ಪದ್ಮಾ ಅಕ್ಕನವರು, ಎಸ್.ಎಸ್. ಬುಳ್ಳಾ, ಎಸ್.ಎಸ್. ಬಿರಾದಾರ, ತಾನಾಜಿ ಕನಸೆ, ವಿಜಯಕುಮಾರ ತೇಲಿ, ಅಶೋಕ ವಾರದ, ಅಶೋಕ ಗಾಯಕವಾಡ, ಎಂ.ವೈ. ಪಾಟೀಲ, ಬಿ.ಜಿ. ಬಿರಾದಾರ, ಡಾ| ಸಿ.ಸಿ. ಹಿರೇಗೌಡ, ಮಹಾದೇವಪ್ಪ ಮುಂಡೇವಾಡಗಿ, ಬಾಬು ಡೊಳ್ಳಿ ಸೇರಿದಂತೆ ಇತರರು ಇದ್ದರು.