Advertisement

ಮಣ್ಣಿನ ಮಡಕೆಗಳಿಗೆ ಭಾರಿ ಬೇಡಿಕೆ

12:03 PM Mar 16, 2020 | Naveen |

ಸಿಂದಗಿ: ಬೇಸಿಗೆ ಬಿಸಿಲ ಝಳ ದಿನೇ ದಿನೇ ಏರುತ್ತಿದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ತಂಪು ಪಾನೀಯ, ಹಣ್ಣುಗಳ ಖರೀದಿಗೆ ಮುಂದಾಗಿರುವುದು ಸಾಮಾನ್ಯವಾಗಿದೆ. ಜೊತೆಗೆ ಮಣ್ಣಿನ ಮಡಕೆಗಳ ಖರೀದಿ ಭರಾಟೆ ಜೋರಾಗಿದೆ.

Advertisement

ಪಟ್ಟಣದ ಗೋಲಗೇರಿ ರಸ್ತೆ ಬದಿ ತಹಶೀಲ್ದಾರ್‌ ಕಚೇರಿ ಕಾಂಪೌಂಡ್‌ಗೆ ಹತ್ತಿ ಹೊರ ಆವರಣದ ರಸ್ತೆಗೆ ಹೊಂದಿಕೊಂಡು ಸಿದ್ದಪ್ಪ ಯಮನಪ್ಪ ಕುಂಬಾರ ಕುಟುಂಬ ಸದಸ್ಯರು ಮಾರಾಟ ಮಾಡುತ್ತಿರುವ ಮಣ್ಣಿನ ಮಡಕೆಗಳ ಖರೀದಿಯಲ್ಲಿ ಜನರು ತಲ್ಲೀನರಾಗಿರುವುದು ಸಾಮಾನ್ಯವಾಗಿದೆ.

ಬಡವರ ಫ್ರಿಡ್ಜ್ ಎಂದೇ ಖ್ಯಾತಿ ಪಡೆದಿರುವ ಮಣ್ಣಿನ ಮಡಕೆಗಳು ಹಿಂದೆ ಎಲ್ಲರ ಮನೆಗಳನ್ನು ಕಂಡು ಬರುತ್ತಿದ್ದವು. ಸ್ಥಳೀಯವಾಗಿಯೇ ತಯಾರಾಗುತ್ತಿದ್ದವು. ಫ್ರಿಡ್ಜ್ ಗಳು ಮನೆ ಸೇರಿಕೊಂಡ ನಂತರ ಮಡಕೆಗಳಿಗೆ ಬೇಡಿಕೆ ಕುಂಠಿತಗೊಂಡಿದ್ದರಿಂದ ಇದರ ಉದ್ದಿಮೆ ಕ್ಷೀಣಿಸಿದೆ ಎನ್ನುತ್ತಾರೆ ಸಂತೋಷ ಕುಂಬಾರ.

ದಶಕದ ಹಿಂದೆ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲೇ ಮಣ್ಣಿನ ಮಡಕೆ ತಯಾರಿಸುತ್ತಿದ್ದೇವು. ಈಗ ಮಡಕೆ ಮಾಡಲು ಸ್ಥಳೀಯವಾಗಿ ಮಣ್ಣು ಸಿಗುತ್ತಿಲ್ಲ. ಮಣ್ಣು ಸಿಕ್ಕರೆ ಮಡಕೆ ಮಾಡಲು ಸಾಕಷ್ಟು ಸ್ಥಳದ ಅವಕಾಶವಿಲ್ಲದ ಕಾರಣ ಮತ್ತು ಅವರ ಕುಟುಂಬ ಸದಸ್ಯರು ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ ಕಾರಣ ತಯಾರಿಕೆಯನ್ನು ನಿಲ್ಲಿಸಿದ್ದೇವೆ. ಆದರೆ ಮಾರಾಟ ಮಾಡುವುದನ್ನು ಮುಂದುವರಿಸುವ ಮೂಲಕ ಕುಟುಂಬದ ಹಿರಿಯರ ವೃತ್ತಿಯಲ್ಲೇ ಸಂತೃಪ್ತಿ ಕಾಣುತಿದ್ದೇವೆ ಎಂದು ಸಿದ್ದಪ್ಪ ಯಮನಪ್ಪ ಕುಂಬಾರ ಹೇಳಿಕೊಳ್ಳುತ್ತಾರೆ.

ಪ್ರತಿ ವರ್ಷ ಬೇಸಿಗೆ ಆರಂಭವಾಗುತಿದ್ದಂತೆ ಆಂಧ್ರಪ್ರದೇಶದಿಂದ ಮಡಕೆಗಳನ್ನು ತರಿಸಿಕೊಳ್ಳುತ್ತೇವೆ. ನಮ್ಮಲ್ಲಿ ಕೆಂಪು ಮಡಕೆಗಳು ಲಭ್ಯವಿದೆ. ಜನರು ಕೆಂಪು ಮಣ್ಣಿನ ಮಡಕೆಗಳನ್ನು ಹೆಚ್ಚಾಗಿ ಕೇಳುತ್ತಾರೆ. ಹೀಗಾಗಿ ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ.

Advertisement

ಆಕಾರಕ್ಕೆ ತಕ್ಕಂತೆ ಮಡಕೆಗಳನ್ನು 200 ರೂ.ದಿಂದ 300 ರೂ.ವರೆಗೆ ಮಾರಾಟ ಮಾಡುತ್ತಿದ್ದೇವೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಜನರು ಖರೀದಿಗೆ ಮುಂದಾಗಿದ್ದಾರೆ. ಒಂದು ಮಡಕೆ ಮಾರಾಟ ಮಾಡಿದರೆ 20-50 ರೂ. ಲಾಭ ಸಿಗುತ್ತದೆ. ಬೇಸಿಗೆಯಲ್ಲಿ ಹೆಚ್ಚಿನ ಮಾರಾಟವಾಗುವುದರಿಂದ ಉತ್ತಮ ಲಾಭ ಸಿಗುವ ನಿರೀಕ್ಷೆ ಇದೆ. ನಾನು ಮಾಡುವ ಕಾರ್ಯವನ್ನು ಗುರುತಿಸಿ ಜಿಲ್ಲಾ ಕಾರ್ಮಿಕ ಇಲಾಖೆ ಅವರು ಶ್ರಮ ಸನ್ಮಾನ ಪ್ರಶಸ್ತಿ-2020 ಪುರಸ್ಕಾರ ಮಾಡಿ ಗೌರವಿಸಿ ಪ್ರೋತ್ಸಾಹ ನೀಡಿದ್ದು ಸಂತಸ ತಂದಿದೆ ಎಂದು ಸಿದ್ದಪ್ಪ ಕುಂಬಾರ ಉದಯವಾಣಿಗೆ ತಿಳಿಸಿದರು.

ಫ್ರಿಡ್ಜ್ನಲ್ಲಿನ ತಂಪು ನೀರಿಗಿಂತ ಮಡಕೆ ನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮ. ಹೀಗಾಗಿ ಪ್ರತಿ ವರ್ಷ ಬೇಸಿಗೆ ಬಂತೆಂದರೆ ಮಡಕೆ ಖರೀದಿಸುತ್ತೇವೆ.
ರಾಜಶೇಖರ ಹಿರೇಕುರಬರ,
ಶರಣು ಗೋರ್ಜಿ ಗ್ರಾಹಕರು

ಕುಂಬಾರಿಕೆ ಕೆಲಸಕ್ಕೆ ಪಕ್ಕದ ರಾಜ್ಯ ಆಂಧ್ರಪ್ರದೇಶದಲ್ಲಿ ಒಂದೊಂದು ಎಕರೆ ಜಮೀನು ನೀಡಿ ಪ್ರೋತ್ಸಾಹಿಸುತ್ತಿದೆ. ಅದೆ ರೀತಿಯಾಗಿ ಮಡಕೆ ತಯಾರಿಸಲು ರಾಜ್ಯ ಸರಕಾರ ಕುಂಬಾರ ಜನಾಂಗಕ್ಕೆ ಸ್ಥಳ ನೀಡಿ ಕುಂಬಾರಿಕೆ ಕೆಲಸಕ್ಕೆ ಪ್ರೋತ್ಸಾಹ ನೀಡಬೇಕು.
ಸಿದ್ದಪ್ಪ ಯಮನಪ್ಪ ಕುಂಬಾರ,
ಮಡಕೆ ಮಾರಾಟಗಾರ

ರಮೇಶ ಪೂಜಾರ

Advertisement

Udayavani is now on Telegram. Click here to join our channel and stay updated with the latest news.

Next