Advertisement

ಇಂಡಿ ಮುಖ್ಯ ಕಾಲುವೆ ಒಡೆದು ಸಾವಿರ ಎಕರೆ ಜಮೀನು ಸಂಪೂರ್ಣ ಜಲಾವೃತ

12:48 PM Jul 29, 2019 | Naveen |

ಸಿಂದಗಿ: ಕೃಷ್ಣಾ ಭಾಗ್ಯ ಜಲ ನಿಗಮದ ಇಂಡಿ ಮುಖ್ಯ ಕಾಲುವೆ 72ನೇ ಕಿ.ಮೀ. ಕಾಲುವೆಯ ಎಡ ಭಾಗ ಒಡೆದ ಪರಿಣಾಮ ಹಿಕ್ಕಣಗುತ್ತಿ, ಕಲಹಳ್ಳಿ, ಕೋರಳ್ಳಿ ವಿಭೂತಿಹಳ್ಳಿ, ರಾಂಪುರ ಗ್ರಾಮಗಳ ಸುಮಾರು 1000 ಎಕರೆಕ್ಕೂ ಹೆಚ್ಚು ಜಮೀನು ಜಲಾವೃತವಾಗಿ ಬೆಳೆ ಹಾನಿಯಾದ ಘಟನೆ ರವಿವಾರ ನಡೆದಿದೆ.

Advertisement

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ರಮೇಶ ಭೂಸನೂರ ಅವರು ಪರಸ್ಥಿತಿ ಪರಶೀಲನೆ ಮಾಡಿ ರೈತರೊಂದಿಗೆ ಮಾತನಾಡಿ, ಶೀಥಿಲಗೊಂಡ ಕಾಲುವೆ ಒಡೆದು ಹರಿಯುವ ನೀರು ಜಮೀನುಗಳಿಗೆ ಹರಿದು ಬಂದಿದೆ. ಇದರಿಂದ ಬೆಳೆ ಹಾನಿಯಾಗಿದೆ. ರೈತರು ಆತಂಕ ಪಡಬಾರದು. ನಾನು ನಿಮ್ಮೊಂದಿಗಿದ್ದೇನೆ. ಹಾನಿಗೊಳಗಾದ ರೈತರು ಆತಂಕ ಪಡಬೇಕಾಗಿಲ್ಲ. ಈಗಾಗಲೇ ಕೆಬಿಜೆಎನ್‌ಎಲ್ ಎಂ.ಡಿ. ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಇಲ್ಲಿಯ ಪರಸ್ಥಿತಿ ಬಗ್ಗೆ ಹೇಳಿದ್ದೇನೆ.

ಸುಮಾರು ಸಾವಿರಾರು ಎಕರೆ ಜಮೀನಿಗೆ ಕಾಲುವೆ ನೀರು ಹರಿದು ಬಂದಿದೆ. ಇದರಿಂದ ರೈತರು ಬೆಳೆದ ತೊಗರಿ, ಹತ್ತಿ, ಕಬ್ಬು, ದ್ರಾಕ್ಷಿ ಬೆಳೆ ಹಾನಿಯಾಗಿದೆ. ಕೂಡಲೇ ಹಾನಿಯಾದ ವರದಿ ಸಲ್ಲಿಸಬೇಕು. ಶೀಘ್ರದಲ್ಲಿ ಪರಿಹಾರ ನೀಡುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ ಎಂದರು.

ನಾರಾಯಣಪುರ ಜಲಾಶಯದಿಂದ ಇಂಡಿ ಮುಖ್ಯ ಕಾಲುವೆಗಳ ಮೂಲಕ ಸಿಂದಗಿ ತಾಲೂಕಿನ ಅನೇಕ ಹಳ್ಳಿಗಳಿಗೆ ನೀರು ಹರಿದು ಬರುತ್ತದೆ. ಕೇಲವು ದಿನಗಳ ಹಿಂದೆ ಮಾತ್ರ ಕಾಲುವೆಗಳಿಗೆ ನೀರನ್ನು ಹರಿ ಬಿಡಲಾಗಿತ್ತು. ಆದರೆ ಕಾಲುವೆಗಳು ನಿರ್ಮಾಣ ಮಾಡಿ ಸುಮಾರು ವರ್ಷಗಳಾಗಿದ್ದು ಶಿಥಿಲಗೊಂಡಿವೆ. ಇದನ್ನು ಗಮನಿಸದೇ ಕಾಲುವೆಗೆ ನೀರು ಬಿಟ್ಟ ಪರಿಣಾಮ ಕಾಲುವೆ ಒಡೆದು ನಮ್ಮ ಜಮೀನುಗಳಿಗೆ ನೀರು ಹರಿದು ಬಂದಿದೆ. ನಾವು ಬೆಳೆದ ಬೆಳೆ ಹಾನಿಗೊಳಗಾಗಿವೆ. ಶೀಘ್ರದಲ್ಲಿ ನಮಗೆ ಪರಿಹಾರ ಕೊಡಿಸಬೇಕು ಎಂದು ಹಾನಿಗೊಳಗಾದ ರೈತರು ಮಾಜಿ ಶಾಸಕ ರಮೇಶ ಭೂಸನೂರ ಅವರಲ್ಲಿ ಮನವಿ ಮಾಡಿಕೊಂಡರು. ಕಾಲುವೆಗಳು ಶಿಥಿಲಗೊಂಡ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಲಾಗಿದೆ. ಅವರು ನಿರ್ಲಕ್ಷ್ಯ ಮಾಡಿದ್ದಾರೆ. ಕೂಡಲೇ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಾಲ ಮಾಡಿ ಬೆಳೆದ ದ್ರಾಕ್ಷಿ, ಕಬ್ಬು, ಹತ್ತಿ, ತೊಗರೆ ಬೆಳೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ಒಡೆದು ಕಾಲುವೆ ನೀರು ಜಮೀನುಗಳಿಗೆ ಹರಿದು ಬಂದಿದೆ. ಇದರಿಂದ ನಮಗೆ ಸಾಕಷ್ಟು ಹಾನಿಯಾಗಿದೆ. ಶೀಘ್ರದಲ್ಲಿ ಹಾನಿಗೊಳಗಾದ ಪ್ರದೇಶ ಸರ್ವೇ ಮಾಡಿ ಪರಿಹಾರ ನೀಡಬೇಕು ಎಂದು ಹಾನಿಗೊಳಗಾದ ರೈತರಾದ ರಾಜುಗೌಡ ಪಾಟೀಲ, ಸರ್ವಜ್ಞ ಹೀರೆಮಠ , ವಿವೇಕಾನಂದ ಪಾಟೀಲ , ಈರಣ್ಣ ಬಿರಾದಾರ, ಸಂಗಣ್ಣ ಮಿರಗಿ, ಮಲ್ಲಯ್ಯ ಹೀರೆಮಠ ಸೇರಿದಂತೆ ಇನ್ನುಳಿದ ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next