Advertisement

ಟಿಕೆಟ್‌ ಸಿಗುವ ಮುನ್ನವೇ ಮತದಾರರ ಮನವೋಲಿಕೆ ಕಸರತ್ತು

07:58 PM Mar 18, 2021 | Team Udayavani |

ಸಿಂದಗಿ: ಸಿಂದಗಿ ವಿಧಾನಸಭಾ ಉಪ ಚುನಾವಣೆಯ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ರಾಜಕೀಯ ಪಕ್ಷಗಳು ತಮ್ಮ ಅಸಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಆದರೂ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ನನಗೆ ಟಿಕೆಟ್‌ ಗ್ಯಾರಂಟಿ ಎಂದು ಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ಹೋಗಿ ಮತದಾರರ ಮನವೊಲಿಕೆ ಕಸರತ್ತಿನಲ್ಲಿ ತೊಡಗಿದ್ದಾರೆ.

Advertisement

ಚುನಾವಣಾ ಕಣ ಅಕ್ಷರಶಃ ಕಾವೇರಿದ್ದು ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ. ಪಟ್ಟಣದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಚುನಾವಣೆಗೆ ಸಂಬಂಧಿಸಿದ ಸಭೆ, ಸಮಾರಂಭ, ರೋಡ್‌ ಶೋ, ಮತಯಾಚನೆ ಕಾರ್ಯ ನಡೆಸಿ ತಮ್ಮ ಪಕ್ಷದ ಬಲ ಪ್ರದರ್ಶನ ನಡೆಸಿವೆ. ರಾಜ್ಯ ನಾಯಕರನ್ನು ಕರೆಸಿ ಪಕ್ಷದ ಸಂಘಟನೆ ಪ್ರದರ್ಶನ ಮಾಡಬೇಕು ಎಂದು ಕನಸು ಹೊತ್ತ ಬಿಜೆಪಿ ಮತ್ತು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಕನಸು ಕೊರೊನಾ ಮಾಹಾಮಾರಿ ಕಸಿದುಕೊಂಡಿದೆ.

ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಬೆಳಗ್ಗೆ 8ರ ವೇಳೆಗೆ ಹಳ್ಳಿಗಳಲ್ಲಿರುತ್ತಿದ್ದಾರೆ. ನನಗೆ ಟಿಕೆಟ್‌ ಸಿಗೋದು ಗ್ಯಾರಂಟಿ, ನೀವು ನಮಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತ ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಹಗಲು-ರಾತ್ರಿಗಳ ಪರಿವೆ ಇಲ್ಲದೆ ಓಡಾಡುತ್ತ ತಂತ್ರಗಾರಿಕೆ ನಡೆಸುತ್ತಿದ್ದಾರೆ.

ಪ್ರಸ್ತುತ ತಾಲೂಕಿನಲ್ಲಿ ಬೇಸಿಗೆ ಬಿಸಿಲು ನೆತ್ತಿ ಸುಡುತ್ತಿದೆ. ತಾಪಮಾನದ ಪ್ರಮಾಣ ಗರಿಷ್ಠ 35 ಡಿಗ್ರಿವರೆಗೂ ದಾಖಲಾಗುತ್ತಿದೆ. ಮಧ್ಯಾಹ್ನದ ವೇಳೆಯಲ್ಲಂತೂ ಮನೆ ಹೊರಗೆ ಕಾಲಿಡಲು ಆಗದಷ್ಟು ಬಿಸಿಲು ಕಂಡು ಬರುತ್ತದೆ. ಇಂತಹ ಸನ್ನಿವೇಶದಲ್ಲೂ ಟಿಕೆಟ್‌ ಆಕಾಂಕ್ಷಿಗಳು ಮತ್ತವರ ಬೆಂಬಲಿಗರು ಮತದಾರರ ಮನೆ ಬಾಗಿಲುಗಳಿಗೆ ಎಡತಾಕುತ್ತಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಟಿಕೆಟ್‌ ಪ್ರಮುಖ ಆಕಾಂಕ್ಷಿಗಳು ತಮ್ಮ ವರಿಷ್ಠರ ಬಳಿ ಹೋಗಿ ತಮ್ಮ ಸ್ವ ಪಕ್ಷದ ಟೀಕೆ ಆಕಾಂಕ್ಷಿಗಳ ಬಗ್ಗೆ ಆರೋಪ-ಪ್ರತ್ಯಾರೋಪಗಳ ಕೆಸರೆರಚಾಟ ತಾರಕಕ್ಕೇರಿದೆ. ಟಿಕೆಟ್‌ ಆಕಾಂಕ್ಷಿಗಳು ಟಿಕೆಟ್‌ ಸಿಗದಿದ್ದರೂ ಕ್ಷೇತ್ರದ ಹಳ್ಳಿ ಹಳ್ಳಿ ಗಳಲ್ಲಿನ ಮನೆ ಮನೆ ಬಾಗಲಿಗೆ ಹೋಗುತ್ತಿದ್ದಾರೆ. ತಮ್ಮ ಸಮುದಾಯದ ಮತದಾರರನ್ನು ಗೌಪ್ಯ ಸ್ಥಳದಲ್ಲಿ ಸೇರಿಸಿ ಜಾತಿ ಒಗ್ಗಟ್ಟಿನ ಬಗ್ಗೆ ಹೇಳುವ ಮೂಲಕ ಮತ ಯಾಚಿಸುವ ಜಾತಿ ತಂತ್ರಗಾರಿಗೆ ನಡೆದಿವೆ.

Advertisement

ಕ್ಷೇತ್ರದ ಹಲವೆಡೆ ಕೆಲ ರಾಜಕೀಯ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಚುನಾವಣೆ ಘೋಷಣೆ ಮುಂಚೆಯೇ ಅತ್ಯಂತ ಗುಪ್ತವಾಗಿ ಮತದಾರರಿಗೆ ನಾನಾ ರೀತಿಯ ಆಮಿಷವೊಡ್ಡುತ್ತಿರುವ ಮಾಹಿತಿಗಳು ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ. ಚುನಾವಣೆ ದಿನಾಂಕ ಮತ್ತು ಪಕ್ಷಗಳ ಅಭ್ಯರ್ಥಿಗಳ ಹೆಸರುಗಳು ಘೋಷಣೆಯಾದಲ್ಲಿ ಆಮಿಷದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ರಮೇಶ ಪೂಜಾರ   

Advertisement

Udayavani is now on Telegram. Click here to join our channel and stay updated with the latest news.

Next