ಸಿಂದಗಿ: ಕುಣಿಯೋಣು ಬಾರಾ ಕುಣಿಯೋಣು ಬಾ, ಇಳಿದು ಬಾ ತಾಯಿ ಇಳಿದು ಬಾ, ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆ ಉಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮ ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟವರು ವರಕವಿ ಬೇಂದ್ರೆ ಎಂದು ನಿವೃತ್ತ ಪ್ರಾಚಾರ್ಯ ಎಂ.ವಿ. ಗಣಾಚಾರಿ ಹೇಳಿದರು.
ಪಟ್ಟಣದ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಾಲೇಜಿನ ಕನ್ನಡ ಸಂಘ ಹಮ್ಮಿಕೊಂಡ ದ.ರಾ. ಬೇಂದ್ರೆ ಅವರ 125ನೇ ಸ್ಮರಣೆ ಮತ್ತು ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜನನ, ವೀರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಅವರು ತಮ್ಮ ಕಾವ್ಯಗಳ ಮೂಲಕ ಸಮಾಜಕ್ಕೆ ತಿಳಿಸಿದ್ದಾರೆ ಎಂದು ಹೇಳಿದರು.
ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ಎಲ್ಲ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು. ನಾಡಿನ ತುಂಬೆಲ್ಲ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡಿ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಶರಣಬಸವ ಜೋಗೂರ ಮಾತನಾಡಿ, ದ.ರಾ. ಬೇಂದ್ರೆ ಅವರ ಸಾಹಿತ್ಯ ರಚನೆ ಮೊದಲ ಒಲವು ಕಾಲೇಜಿನಲ್ಲಿ ಓದುತ್ತಿದ್ದಾಗ ಕವಿತೆಗಳನ್ನು ಕಟ್ಟಿದರು. 1918ರಲ್ಲಿ ಅವರ ಮೊದಲ ಕವನ ಪ್ರಭಾತ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಇವರ ನಾಕುತಂತಿ ಕೃತಿಗೆ 1974ರಲ್ಲಿ ಕೇಂದ್ರದಿಂದ ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂದರು.
ಕನ್ನಡ ಸಂಘದ ಕಾರ್ಯಾಧ್ಯಕ್ಷ ದಾನಯ್ಯ ಮಠಪತಿ ಮಾತನಾಡಿದರು. ರಾಹುಲ್ ಕಾಂಬಳೆ, ಸುಧಾಕರ ಕಲ್ಲೂರ, ರೇಖಾ ಮಳ್ಳಗೇರಿ, ಅರುಣಕುಮಾರ, ರೇಷ್ಮಾ ಜಾಗಿರದಾರ, ದ್ಯಾವಮ್ಮ ಕೇಲೋಜಿ ಸೇರಿದಂತೆಅನೇಕರು ಸ್ವರಚಿತ ಕವನ ವಾಚನ ಮಾಡಿದರು.
ಉಪನ್ಯಾಸಕರಾದ ಜೆ.ಸಿ. ನಂದಿಕೋಲ, ಸಿದ್ದಲಿಂಗ ಕಿಣಗಿ, ಎನ್.ಬಿ. ಪೂಜಾರಿ, ವಿಜಯಲಕ್ಷ್ಮೀ ಭಜಂತ್ರಿ, ವಿದ್ಯಾ ಮೊಗಲಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಪೂಜಾ ಹಿರೇಮಠ ಸ್ವಾಗತಿಸಿದರು. ಬೋರಮ್ಮ ಅಡವಿ ನಿರೂಪಿಸಿದರು. ರೇಖಾ ಮಳ್ಳಿಗೇರಿ ವಂದಿಸಿದರು.