Advertisement

371ಜೆ ಕಲಂ ಅನುಷ್ಠಾನಕ್ಕೆ ಸಚಿವಾಲಯ ಆರಂಭಿಸಲು‌ ಪ್ರಾಮಾಣಿಕ ಪ್ರಯತ್ನ: ಸಚಿವ ಖಂಡ್ರೆ

03:22 PM Jun 16, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ 371 ಜೆ ಕಲಂ ಸಮಗ್ರ ಅನುಷ್ಠಾನಕ್ಕಾಗಿ ಶೀಘ್ರವೇ ಪ್ರತ್ಯೇಕ ಸಚಿವಾಲಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದರು.

Advertisement

ನಗರದಲ್ಲಿ ರವಿವಾರ ತಮ್ಮನ್ನು ಭೇಟಿ ಮಾಡಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸದಸ್ಯರ ನಿಯೋಗದಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗ ಪ್ರಾದೇಶಿಕ ಅಸಮತೋಲನತೆಯಿಂದ ಕೂಡಿದೆ. ಇದನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ 371 ಜೆ ಕಲಂ ಜಾರಿಗೆ ತರಲಾಗಿತ್ತು. ದಶಕಗಳು ಕಳೆದರೂ ಕೂಡ ಇನ್ನೂ ಹಲವಾರು ಮೀಸಲಾತಿ ಜಾರಿಗೆ ಸಂಬಂಧದ ತೊಡಕುಗಳು ಇವೆ. ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಟ ಸಮಿತಿ ಹೇಳಿರುವಂತೆ ಪ್ರತ್ಯೇಕ ಸಚಿವಾಲಯದ ಅಗತ್ಯವಿರುವುದು ನಾವು ಮನಗಂಡಿದ್ದೇವೆ. ಈ ನಿಟ್ಟಿನಲ್ಲಿ ಕಲ್ಯಾಣ ಭಾಗದ ಸಚಿವರು ಶಾಸಕರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಚರ್ಚಿಸಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಬೆಂಗಳೂರಿನ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು, ಹಸಿರು ಪ್ರತಿಷ್ಠಾನ ವೇದಿಕೆಯ ಮುಖಾಂತರ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕಿರುವ 371ನೇ(ಜೆ) ಕಲಮಿನಿಂದ ರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಸೃಷ್ಟಿಸಿ, 24 ಜಿಲ್ಲೆಯ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಂದು ಏಕೀಕರಣ ಚಳವಳಿ ಆರಂಭಿಸಿ ರಾಜ್ಯ ಒಡೆಯುವಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಸಮಿತಿ ನೇತೃತ್ವ ವಹಿಸಿದ್ದ ಲಕ್ಷ್ಮಣ ದಸ್ತಿ  ಅಸಮಧಾನ ವ್ಯಕ್ತಪಡಿಸಿದರು.

ಈ ವೇಳೆ ‌ಖಂಡ್ರೆ ಮಾತಾಡಿ, ನಮಗೆ ಸಿಕ್ಕಿರುವ ಸಂವಿಧಾನಬದ್ಧ ಸ್ಥಾನಮಾನಕ್ಕೆ ಯಾರಿಂದಲೂ ಸಹ ಕೂದಲೆಳೆಯಷ್ಟು ಧಕ್ಕೆ ಮಾಡಲು ಸಾಧ್ಯವಿಲ್ಲ, ನಾವೆಲ್ಲ ಕಲ್ಯಾಣ ಕರ್ನಾಟಕದ ಸಚಿವರು, ಶಾಸಕರು ಸಂಘಟಿತವಾಗಿ ಬದ್ಧತೆ ಪ್ರದರ್ಶಿಸುತ್ತೇವೆ, ಕಲ್ಯಾಣ ಕರ್ನಾಟಕದಲ್ಲಿ 37ನೇ(ಜೆ) ಕಲಂ ರಕ್ಷಣೆಯ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ವಿವರವಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದರು.

ಸಚಿವರಾದ ಶರಣಪ್ಪ ದರ್ಶನಾಪೂರ ಮಾತನಾಡಿ, ನಮ್ಮ ಪ್ರದೇಶಕ್ಕೆ ಸಿಕ್ಕಿರುವ ಸಂವಿಧಾನಬದ್ಧ ಸ್ಥಾನಮಾನದಿಂದ ಯಾವ ಜಿಲ್ಲೆಗೂ ಅನ್ಯಾಯವಾಗುತ್ತಿಲ್ಲ ನಮ್ಮ ಪಾಲು ನಮಗೆ ಸಿಗುತ್ತಿದೆ. ಬೆಂಗಳೂರಿನ ಕೆಲವು ಪಟ್ಟಭದ್ರ ಶಕ್ತಿಗಳು ಸುಳ್ಳು ಅಪಪ್ರಚಾರ ಮಾಡುವುದು ನಿಲ್ಲಿಸಬೇಕು. ಸರಕಾರ ಇಂತಹ ಸುಳ್ಳು ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳುವದಿಲ್ಲ ಎಂದು ವಿವರಿಸಿದರು.

Advertisement

ಈ ಸಂದರ್ಭದಲ್ಲಿ ಪ್ರಮುಖರಾದ ಅಸ್ಲಂ ಚೌಂಗೆ, ಮಲ್ಲಿನಾಥ ಸಂಗಶೆಟ್ಟಿ, ಬಿ.ಬಿ. ನಾಯಕ, ರಮೇಶ ಚವ್ಹಾಣ, ಎಂ.ಬಿ. ನಿಂಗಪ್ಪ, ಡಾ. ಮಂಜೂರ ಡೆಕ್ಕನಿ, ಸುಭಾಶ ಶೀಲವಂತ, ಶರಣಬಸಪ್ಪ ಕುರಿಕೋಟಾ, ಅಬ್ದುಲ ರಹೀಂ, ಸಂಜೀವಕುಮಾರ, ರಾಜು ಜೈನ್, ಶಾಂತಪ್ಪ ಕಾರಭಾಸಗಿ, ಸಂಧ್ಯಾರಾಜ ಸ್ಯಾಮ್ಯೂವೆಲ್, ಆನಂದ ದೇಶಪಾಂಡೆ,ಎಚ್. ಮಹೀಬೂಬ, ಅನೀಲ, ಆರ್.ಜೆ. ಮಹೀಬೂಬ, ವಿನೋದಕುಮಾರ ಸೇರಿದಂತೆ ಅನೇಕ ಪರಿಣಿತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next