Advertisement
ಇತ್ತೀಚಿನ ದಿನಗಳಲ್ಲಿ ಕಾಯಿಲೆ ಬರುವುದು ಸಾಮಾನ್ಯವಾಗಿದೆ. ಎಷ್ಟೇ ಜಾಗರೂಕರಾಗಿದ್ದರೂ, ಕಾಯಿಲೆಗಳು ಮನುಷ್ಯನನ್ನು ಸುತ್ತುವರೆಯುತ್ತದೆ. ಕೆಲವರಿಗಂತೂ ನಿಂತರೂ ಖಾಯಿಲೆ, ನಡೆದರೂ ಕಾಯಿಲೆ. ಅಷ್ಟೇಕೆ ಸುಮ್ಮನೆ ಕೂತರೂ ಕಾಯಿಲೆ ಬರುತ್ತದೆ. ಹೌದು. ವ್ಯಕ್ತಿಯೊಬ್ಬರು ಕುರ್ಚಿಯಲ್ಲಿ ಕುಳಿತುಕೊಳ್ಳುವ ಭಂಗಿ ಅವರ ಆರೋಗ್ಯವನ್ನು ಕೆಡಿಸಬಹುದು. ಅದೇ ರೀತಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಲು ಯತ್ನಿಸುವುದು ಕೂಡ ಕೆಲವು ಸಲ ಸಮಸ್ಯೆಯನ್ನು ಸೃಷ್ಟಿಸಬಹುದು. ನಾವು ಕುಳಿತುಕೊಳ್ಳುವ ಭಂಗಿ ಕೂಡ ನಮ್ಮ ದೇಹದ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು. ಹೀಗಂತ ತಜ್ಞರೇ ದೃಢಪಡಿಸಿದ್ದಾರೆ.
ಕುಳಿತುಕೊಂಡು ಕಂಪ್ಯೂಟರ್ ನೋಡುವ ಮಂದಿಗೆ ಹೆಚ್ಚಾಗಿ ಕುತ್ತಿಗೆ, ಭುಜದ ನೋವು ಎದುರಾಗುತ್ತದೆ. ಇದನ್ನು ತಡೆಯಲು ಕುಳಿತುಕೊಳ್ಳುವ ಭಂಗಿಯನ್ನು ಸರಿಯಾಗಿಟ್ಟುಕೊಳ್ಳುವುದು ಮುಖ್ಯ. ಕಂಪ್ಯೂಟರ್, ಡ್ರೆçವಿಂಗ್‌ನಲ್ಲಿ ಬೆನ್ನು ನೇರವಾಗಿ ಇರಲಿ. ಕಂಪ್ಯೂಟರ್ ಮಾನಿಟರ್ ಕಣ್ಣಿಗೆ ನೇರವಾಗಿ ಇದ್ದರೆ ಒಳ್ಳೆಯದು. ನೋವು ಕಂಡುಬಂದರೆ ಬಟ್ಟೆಯಲ್ಲಿ ಬಿಸಿ ಉಪ್ಪನ್ನು ಅಥವಾ ಅಕ್ಕಿಯನ್ನು ಕಟ್ಟಿಕೊಂಡು ನೋವಿರುವ ಭಾಗಕ್ಕೆ ಶಾಖ ಕೊಡಿ. ಇಲ್ಲವೇ, ಐಸ್ ಬ್ಯಾಗ್ ಅನ್ನು ನೋವಿರುವ ಭಾಗಕ್ಕೆ 20 ನಿಮಿಷ ಇರಿಸಿ, ನಿರಂತರವಾಗಿ ಭುಜ ನೋವು ಕಾಣಿಸಿಕೊಂಡರೆ ತಜ್ಞರನ್ನು ಭೇಟಿಯಾಗಿ. ಜೀರ್ಣಕ್ರಿಯೆಯ ಮೇಲೂ ಪರಿಣಾಮ
ಸಾಮಾನ್ಯವಾಗಿ ಕುಳಿತುಕೊಳ್ಳುವಾಗ ಕೆಲವೊಬ್ಬರು ಸೊಂಟದ ಭಾಗವನ್ನು ಮುಂದಕ್ಕೆ ತಂದು ಬೆನ್ನಿನ ಮಧ್ಯಭಾಗವನ್ನು ಕುರ್ಚಿಯ ಬೆನ್ನಿಗೆ ಆಸರೆಯಾಗುವಂತೆ ಬಾಗಿಸುತ್ತಾರೆ. ಈ ರೀತಿ ಮಾಡುವುದರಿಂದ ಸೊಂಟದ ಭಾಗದಲ್ಲಿರುವ ಮಾಂಸಖಂಡಗಳು ಬೆನ್ನಿನ ಕೆಳಭಾಗವನ್ನು ಮುಂದಕ್ಕೆ ತಳ್ಳುತ್ತದೆ. ಸುದೀರ್ಘವಾಗಿ ಈ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಬೆನ್ನಿನ ಕೆಳ ಭಾಗದಲ್ಲಿ ನೋವು ಕಾಣಿಸುತ್ತದೆ. ಅಲ್ಲದೆ, ಜೀರ್ಣ ಕ್ರಿಯೆಯ ಮೇಲೆಯೂ ಪ್ರಭಾವ ಬೀರುವ ಸಾಧ್ಯತೆ ಇದೆ.
ಇನ್ನು, ಕಂಪ್ಯೂಟರ್‌ನಲ್ಲಿ ಗ್ರಾಫಿಕ್ಸ್ ವಿನ್ಯಾಸ ಮಾಡುವ ಮಂದಿ ಕಂಪ್ಯೂಟರ್ ಮೌಸ್ ಹಿಡಿಯುವ ಕೈಯತ್ತ ದೇಹವನ್ನು ಕೂಡ ಸ್ವಲ್ಪ ವಾಲಿಸುತ್ತಾರೆ. ಈ ರೀತಿ ಕುಳಿತುಕೊಳ್ಳುವುದರಿಂದ ಸೊಂಟದ ಭಾಗದ ಎಲುಬುಗಳ ಸ್ನಾಯು ಸವೆಯಬಹುದು. ತಜ್ಞರ ಸಲಹೆಯಂತೆ ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳಬೇಕು.
Related Articles
Advertisement
ಅರ್ಧ ಗಂಟೆಗೊಮ್ಮೆ ಎದ್ದೇಳಿಇಂದಿನ ಡಿಜಿಟಲ್ ಯುಗದಲ್ಲಿ ಗಂಟೆಗಟ್ಟಲೆ ಕಂಪ್ಯೂಟರ್ ಎದುರು ಕೂತು ಕೆಲಸ ಮಾಡುವುದು ಅನಿವಾರ್ಯ. ಅದರಲ್ಲೂ, ಐಟಿ-ಬಿಟಿ ಕಂಪೆನಿಯ ಉದ್ಯೋಗಿಗಳಂತೂ ಕಂಪ್ಯೂಟರ್‌ಗೆ ತನ್ನನ್ನು ಒಗ್ಗಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಕುಳಿತುಕೊಂಡೇ ದಿನದ ಹೆಚ್ಚಿನ ಸಮಯ ಕಳೆಯುತ್ತಾರೆ. ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಈ ಪರಿಪಾಠ ಒಳ್ಳೆಯದಲ್ಲ. ಕಚೇರಿಯಲ್ಲಿ ಹೆಚ್ಚಿನ ಕಾಲದವರೆಗೆ ಕುಳಿತುಕೊಂಡು ಕೆಲಸ ನಿರ್ವಹಿಸುವುದು ಅನಿವಾರ್ಯ. ಸುಮಾರು ಅರ್ಧ ಗಂಟೆಗೊಮ್ಮೆ ಕುರ್ಚಿಯಿಂದ ಎದ್ದು ನಡೆದಾಡಬೇಕು. ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಮಧು ಮೇಹ ಸಾಧ್ಯತೆ ಹೆಚ್ಚು
ದಿನದ ಹೆಚ್ಚಿನ ಕಾಲ ಕುಳಿತುಕೊಂಡೇ ಕೆಲಸ ಮಾಡುವವರು ಮಧುಮೇಹಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಇತ್ತೀಚೆಗೆ ವರದಿಯೊಂದು ಹೇಳಿದೆ. ನೆದರ್‌ಲ್ಯಾಂಡ್‌ನ ಮಾಸ್ಟ್ರಿಕ್ಟ್ ವಿ.ವಿ. ಜೂಲಿಯನ್ ವಾನ್‌ಡರ್ ಬರ್ಗ್ ಮತ್ತು ಅವರ ಸಹೋದ್ಯೋಗಿಗಳು ನಡೆಸಿದ ಅಧ್ಯಯನವು, ಚಟುವಟಿಕೆ ರಹಿತವಾಗಿ ಕಳೆಯುವ ಅವಧಿ ಹೆಚ್ಚಿದಷ್ಟೂ ದೇಹದಲ್ಲಿ ಸಂಗ್ರಹವಾಗುವ ಸಕ್ಕರೆ ಅಂಶ ಹೆಚ್ಚುತ್ತದೆ ಎಂದಿದೆ. ದಿನವೊಂದಕ್ಕೆ ಸಾಮಾನ್ಯ ಚಟುವಟಿಕೆ ರಹಿತ ಅವಧಿ ಹೆಚ್ಚಾದರೆ ಪ್ರತೀ ಗಂಟೆಗೆ ಟೈಪ್ 2 ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಶೇ. 22ರಷ್ಟಿದೆ ಎಂದು ಸಂಶೋಧಕರು ಅಧ್ಯಯನದಲ್ಲಿ ತಿಳಿಸಿದ್ದಾರೆ. ನವೀನ್ ಭಟ್ ಇಳಂತಿಲ