Advertisement

KASSIA; ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ನಿಯಮಗಳ ಸರಳೀಕರಣ: ದರ್ಶನಾಪುರ

01:14 PM Sep 16, 2023 | Team Udayavani |

ಕಲಬುರಗಿ: ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ಅದರಲ್ಲೂ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಸಣ್ಣ, ಗುಡಿ ಕೈಗಾರಿಕೆಗಳಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರವು ಸಣ್ಣ ಕೈಗಾರಿಕೆ ಸ್ಥಾಪನೆಗೆ ಸರಳೀಕರಣ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

Advertisement

ಶನಿವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಿಡ್ಮಿ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಂಯುಕ್ತಾಶ್ರಯದಲ್ಲಿ ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ‌ ಕೈಗಾರಿಕೋದ್ಯಮಗಳಿಗೆ ಹೆಚ್ಚು ಸಮಸ್ಯೆ ಇರುವುದು ನನ್ನ ಗಮನಕ್ಕಿದೆ. ಸಣ್ಣ ಕೈಗಾರಿಕೆ, ಉದ್ದಿಮೆದಾರರಿಗೆ ನ್ಯಾಯ ಕೊಡಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ. ಈ ಭಾಗದಲ್ಲಿ ಸಣ್ಣ ಉದ್ದಿಮೆ ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸಣ್ಣ ಉದ್ದಿಮೆದಾರರಿಗೆ ಸಚಿವ ಶರಣಬಸಪ್ಪ ದರ್ಶನಾಪುರ ಕರೆ ನೀಡಿದರು.

ಇದನ್ನೂ ಓದಿ:Game Changer: ಶೂಟಿಂಗ್‌ ಹಂತದಲ್ಲೇ ʼಗೇಮ್‌ ಚೇಂಜರ್‌ʼ ಸಿನಿಮಾದ ದುಬಾರಿ ಹಾಡು ಲೀಕ್

ಬೆಂಗಳೂರಿನಾಚೆ ಕೈಗಾರಿಕೆಗಳು ಸ್ಥಾಪನೆಯಾಗಬೇಕಿದೆ. ಬೃಹತ್ ಉದ್ಯಮಗಳು ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ, ಬಾಗಲಕೋಟೆ ಕಡೆ ಸ್ಥಾಪಿಸಿ ಇಲ್ಲಿ ಹೆಚ್ಚು ಉದ್ಯೋಗ ಸೃಷ್ಟಿವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಅವರೊಂದಿಗೆ ಚರ್ಚಿಸಿರುವೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

ಇನ್ನು ಸಣ್ಣ ಕೈಗಾರಿಕೆಗಳಿಗೆ ಸರ್ಕಾರದ‌ ಸವಲತ್ತು, ಜಿ.ಎಸ್.ಟಿ. ಇನ್ನಿತರ ತಾಂತ್ರಿಕವಾಗಿ ಅರಿವು ಮೂಡಿಸಲಿ ಇಂದಿಲ್ಲಿ ಕಾರ್ಯಾಗಾರ ಮಾಡಲಾಗಿದೆ. ಈಗಾಗಲೆ ವಿಜಯಪುರ, ಯಾದಗಿರಿಯಲ್ಲಿ ಆಯೋಜಿಸಿದ್ದು, ಬೀದರನಲ್ಲಿಯೂ ಶೀಘ್ರ ಈ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.

ಸಾಲ‌ ನೀಡಲು ಮುಂದಾಗಲಿ: ದೊಡ್ಡ ಕೈಗಾರಿಕೆಗಳಿಗೆ ಬ್ಯಾಂಕ್‌ ಗಳು ಮನೆಗೆ ಹೋಗಿ ಸಾಲ ಕೊಡುತ್ತಾರೆ. ಸಣ್ಣ ಕೈಗಾರಿಕೆಗಳಿಗೆ ಇದೇ ರೀತಿಯ ನೆರವಿನ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ ಸಚಿವ ಶರಣಬಸಪ್ಪ ದರ್ಶನಾಪುರ, ಕೆ.ಐ.ಎ.ಡಿ.ಬಿ, ಕೆ.ಎಸ್.ಎಸ್.ಐ.ಡಿ.ಸಿ ಗಳು ಸಣ್ಣ ಕೈಗಾರಿಕೆ ಸ್ಥಾಪಿಸಲು ಮುಂದೆ ಬರುವ‌ ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡಿ ಬೆನ್ನು ತಟ್ಟಬೇಕು ಎಂದರು.

ಪ್ರತ್ಯೇಕ ಮಳಿಗೆ ಸ್ಥಾಪಿಸಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ವೇದಿಕೆ ಅವಶ್ಯಕತೆ ಇದೆ. ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಮಳಿಗೆಯಲ್ಲಿ ಮಹಿಳೆಯರು ತಯಾರಿಸಿರುವ ಉತ್ಪನ್ನಗಳಿಗೆ ಮಾರಾಟಕ್ಕೆಂದು ಪ್ರತ್ಯೇಕ ಮಳಿಗೆ ಮೀಸಲಿರಿಸಬೇಕು. ಇದು ಶಾಶ್ವತ ವ್ಯವಸ್ಥೆವಾಗಿರಬೇಕು.‌ ಸಚಿವ ಶರಣಬಸಪ್ಪ ದರ್ಶನಾಪುರ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.

ಕಾಸಿಯಾ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ ಸ್ವಾಗತಿಸಿ ಮಾತನಾಡಿ, ಸಣ್ಣ ಕೈಗಾರಿಕೋದ್ಯಮಿಗಳಿಗೆ ತಾಂತ್ರಿಕ ಸಲಹೆ ನೀಡಲು ಇಂದಿಲ್ಲಿ ಒಂದು ದಿನದ ಕಾರ್ಯಾಗಾರ ಆಯೋಜಿಸಿದೆ.‌ ವಿವಿಧ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ. ಸಚಿವ ದರ್ಶನಾಪುರ ಅವರು ಸಣ್ಣ ಉದ್ದಿಮೆಗಳಿಗೆ ತುಂಬಾ ಸಹಕಾರ ನೀಡುತ್ತಿದ್ದು, ಉದ್ದಿಮೆದಾರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ತಾಂತ್ರಿಕ ಉನ್ನತ್ತೀಕರಣ ಪರಿಷತ್ತಿನ ವ್ಯವಸ್ಥಾಪಕ ನಿರ್ದೇಶಕ ಮಹೇಶ ಬಿ., ಸಿಡ್ಬಿ ಹುಬ್ಬಳ್ಳಿ ಶಾಖೆಯ ವ್ಯವಸ್ಥಾಪಕ ಶಿವಕುಮಾರ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಬಿ. ಸತೀಶ್ ಕುಮಾರ್, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ, ಕಾಸಿಯಾ ಸಂಸ್ಥೆಯ ಪದಾಧಿಕಾರಿಗಳಾದ ಎಂ.ಜಿ.ರಾಜಗೋಪಾಲ, ಶ್ರೇಯಾನ್ಸ್ ಕುಮಾರ ಜೈನ್, ಅರುಣ ಪಡಿಯಾರ್ ಎಸ್.,ಹೆಚ್.ಕೆ.ಮಲ್ಲೇಶಗೌಡ, ಲತಾ ಎಸ್.,‌ಭೀಮಾಶಂಕರ‌ ಬಿ.ಪಾಟೀಲ ಮತ್ತಿತರಿದ್ದರು.  ಎಸ್.ನಾಗರಾಜು ನಿರೂಪಿಸಿ ವಂದಿಸಿದರು.

ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ಉದ್ದಿಮೆ ಸ್ಥಾಪನೆ ಸಂಬಂಧ ಎಂ.ಎಸ್.ಎಂ.ಇ. ಬಲವರ್ಧನೆ, ಜವಳಿ ಕ್ಷೇತ್ರ, ಆಹಾರ ಘಟಕ ಸ್ಥಾಪನೆ, ಕೈಗಾರಿಕೆ ನೀತಿ, ಡಿಜಿಟಲ್ ಮಾರುಕಟ್ಟೆ, ಜಿ.ಎಸ್.ಟಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next