Advertisement

ದುಂದುವೆಚ್ಚ ತಡೆಗೆ ಸರಳ ವಿವಾಹ ಸಹಕಾರಿ

03:34 PM Dec 11, 2018 | |

ಹೂವಿನಹಡಗಲಿ: ಬಡವರು ಮತ್ತು ಆರ್ಥಿಕವಾಗಿ ಹಿಂದುಳಿದವರ ದುಂದು ವೆಚ್ಚ ತಡೆಗಟ್ಟಲು ಸಾಮೂಹಿಕ ವಿವಾಹ ವರದಾನವಾಗಿದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಕಾಂತೇಬೆನ್ನೂರು ಗ್ರಾಮದಲ್ಲಿ ಸ್ನೇಹ ಸೇವಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಾರತೀಯ ಉತ್ಕೃಷ್ಠ ಸಂಸ್ಕೃತಿಯಲ್ಲಿ ವಿವಾಹಕ್ಕೆ ಬಹಳಷ್ಟು ಪಾವಿತ್ರ್ಯತೆಯಿದೆ. ಚತುರ್ವಿಧ ಆಶ್ರಮಗಳಲ್ಲಿ ಗೃಹಸ್ಥಾಶ್ರಮ ಅತ್ಯಂತ ಶ್ರೇಷ್ಠವಾಗಿದೆ. ಅಷ್ಟೇ ಜವಾಬ್ದಾರಿಯುತ ಜೀವನವಾಗಿದೆ ಎಂದರು.

ಸತಿಪತಿಗಳು ಪರಸ್ಪರ ಅರಿತು ಸಾಮರಸ್ಯದಿಂದ ಬಾಳಿದರೆ ಜೀವನ ಸುಖಮಯವಾಗಿರುತ್ತದೆ. ಮರೆತು ಬಾಳಿದರೆ ಜೀವನ ಬಂಧನಕಾರಿಯಾಗುತ್ತದೆ. ಆದರ್ಶ ಗೃಹಸ್ಥ ಜೀವನ ರೂಪಿಸಿಕೊಳ್ಳಲು ಸಂಸ್ಕಾರ, ಸಂಸ್ಕೃತಿಗಳ ಅರಿವು ಮತ್ತು ಆಚರಣೆ ಬಹಳ ಮುಖ್ಯ. ವೈಯಕ್ತಿಕ ಬದುಕಿನ ಬೆಳವಣಿಗೆಯೊಂದಿಗೆ ಸಾಮಾಜಿಕ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ತಿಳಿಸಿದರು.

ಜೀವನದಲ್ಲಿ ಗುರಿ ಮತ್ತು ಧ್ಯೇಯ ಇಲ್ಲದ ಕಾರಣ ಮನುಷ್ಯ ದಿಕ್ಕು, ದಾರಿ ತಪ್ಪಿ ನಡೆದು ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ. ಆಹಾರ, ನೀರು, ದೈಹಿಕ ವಿಕಾಸಕ್ಕೆ ಕಾರಣವಾದರೆ ಧರ್ಮ ಬದುಕನ್ನು ವಿಕಾಸಗೊಳಿಸಿ ಅಭಿವೃದ್ಧಿಯತ್ತ ಸಾಗಿಸುತ್ತದೆ. ಕಲಿಕೆ, ಗಳಿಕೆ ಮತ್ತು ಭಗವಂತನ ಚಿಂತನೆಯಲ್ಲಿ ಹೆಜ್ಜೆ ಹಾಕಿದರೆ ಬದುಕಿಗೆ ಬೆಲೆ ಬರುವುದರಲ್ಲಿ ಯಾವ ಸಂದೇಹವಿಲ್ಲ. ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಬೆಸೆಯುವ ಕೆಲಸ ಮಾಡಬೇಕಾಗಿದೆ. ಸ್ನೇಹ ಸೇವಾ ಟ್ರಸ್ಟ್‌ನವರು ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡು ಬಡವರ ಬಾಳಿಗೆ ಸಹಕರಿಸಿ ಶ್ರಮಿಸುತ್ತಿರುವುದು ಶ್ರೇಷ್ಠ ಕಾರ್ಯ ಎಂದರು.

ಇದೇ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ 10 ಜೋಡಿಗಳಿಗೆ ಆಶೀರ್ವಾದ ಮಾಡಿದರು. ಈ ವೇಳೆ ಅಂಗೂರು ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಹೂವಿನಹಡಗಲಿ ಗವಿಮಠದ ಹಿರಿಯ ಶಾಂತವೀರ ಸ್ವಾಮೀಜಿ, ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ, ಹಿರೇಹಡಗಲಿ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು ಸಮ್ಮುಖ ವಹಿಸಿದ್ದರು. ಸ್ನೇಹ ಸೇವಾ ಟ್ರಸ್ಟ್‌ ಅಧ್ಯಕ್ಷ ಪಿ.ಎಚ್‌. ರಾಜೇಶ್‌, ಎಸ್‌.ಎಸ್‌.ಗುತ್ತಲ, ಪಿ.ಎಸ್‌.ಮೇಟಿ, ಎಸ್‌.ಬಸವರಾಜ ಇನ್ನಿತರರಿದ್ದರು.

Advertisement

ಅಡ್ಡಪಲ್ಲಕ್ಕಿ ಮಹೋತ್ಸವ: ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ| ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣಕುಂಭ, ವಾದ್ಯ ವೈಭವಗಳೊಂದಿಗೆ ಶ್ರೀಗಳನ್ನು ಸ್ವಾಗತಿಸಲಾಯಿತು. ಈ ವೇಳೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next