ಶಾಮು ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದ. ಶಿಕ್ಷಕರಿಂದ ಬುದ್ಧಿವಂತ ವಿದ್ಯಾರ್ಥಿ ಎಂದು ಹೆಸರು ಗಳಿಸಿದ್ದ. ಅವರಿಗೆ ಸರಳಾ ಎಂಬ ಕ್ಲಾಸ್ ಟೀಚರ್ ಇದ್ದರು. ಒಂದು ದಿನ ಪಾಠ ಮಾಡುತ್ತಿದ್ದ ಸರಳಾ ಟೀಚರನ್ನು ಪ್ರಿನ್ಸಿಪಾಲರು ಯಾವುದೋ ತುರ್ತು ವಿಚಾರ ಮಾತನಾಡಲು ಜವಾನನ ಕೈಲಿ ಹೇಳಿ ಕರೆಸಿಕೊಂಡರು.
ಟೀಚರ್ ತರಗತಿಯಿಂದ ಹೊರಗೆ ಹೋಗುವುದನ್ನೇ ಕಾಯುತ್ತಿದ್ದ ವಿದ್ಯಾರ್ಥಿಗಳು ಜೋರಾಗಿ ಕೂಗಾಡುತ್ತಾ ಗಲಾಟೆ ಶುರು ಹಚ್ಚಿಕೊಂಡರು. ಅವರಲ್ಲಿ ಚರಣ್ ಎಂಬ ತುಂಟ ವಿದ್ಯಾರ್ಥಿ ತನ್ನ ಊಟದ ಬ್ಯಾಗಿನಲ್ಲಿದ್ದ ಬಾಳೆಹಣ್ಣೊಂದನ್ನು ತಿಂದು, ಸಿಪ್ಪೆಯನ್ನು ನೆಲದಲ್ಲಿ ಎಸೆದ. ಯಾರೂ ಅದನ್ನು ತೆಗೆಯಲು ಮುಂದಾಗಲಿಲ್ಲ.
ಎರಡನೇ ಬೆಂಚಿನಲ್ಲಿ ಕೂತಿದ್ದ ಶಾಮನಿಗೆ ಸಿಪ್ಪೆ ಕಣ್ಣಿಗೆ ಬಿತ್ತು. ಟೀಚರ್ ಜಾರಿ ಬಿದ್ದಾರೆಂದು ಶಾಮು ತಾನೇ ಸಿಪ್ಪೆಯನ್ನು ತೆಗೆಯಲು ಮುಂದಾದ. ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ತನ್ನ ಬ್ಯಾಗಿನೊಳಗೆ ಹಾಕಿಕೊಳ್ಳುವಾಗ ಸರಳಾ ಟೀಚರ್ ನೋಡಿಬಿಟ್ಟರು. ಅಲ್ಲೇ ಹತ್ತಿರದಲ್ಲಿದ್ದ ತನ್ನ ಬ್ಯಾಗಿನೊಳಗಿಂದ ಶಾಮು ಏನನ್ನೋ ಕದ್ದಿದ್ದಾನೆ ಎಂದು ಕೊಂಡರು ಟೀಚರ್. ಕೋಪಗೊಂಡು ಬೆತ್ತದಿಂದ ಶಾಮನನ್ನು ರಪರಪನೆ ಹೊಡೆದೇಬಿಟ್ಟರು.
ನಂತರ ಶಾಮ ನಡೆದ ಘಟನೆಯನ್ನು ವಿವರಿಸಿದ. ಸರಳಾ ಟೀಚರ್‌ಗೆ ತುಂಬಾ ಪಶ್ಚಾತ್ತಾಪವಾಯಿತು. ದುಡುಕಿ ತಪ್ಪು ಮಾಡಿದ ಭಾವ ಅವರನ್ನು ಆವರಿಸಿತು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಸತ್ಯ ಆವಾಗ ಅವರಿಗೆ ಅರಿವಾಯಿತು. ಶಾಮನ ಕ್ಷಮೆ ಕೇರಿ ಅವನಿಗೆ ದುಬಾರಿ ಬೆಲೆಯ ಪೆನ್ನನ್ನು ಉಡುಗೊರೆಯಾಗಿ ನೀಡಿ ಭೇಷ್ ಎಂದರು.
– ಸಿ.ರವೀಂದ್ರಸಿಂಗ್,ಕೋಲಾರ