ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ, ವಿನಯ್ ರಾಜಕುಮಾರ್, ಸ್ವಾತಿಷ್ಠ ಕೃಷ್ಣನ್ ಹಾಗೂ ಹಿಂದಿಯ “ರಾಧಾಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ “ಒಂದು ಸರಳ ಪ್ರೇಮಕಥೆ’. ರಾಘವೇಂದ್ರ ರಾಜಕುಮಾರ್, ಸಾಧುಕೋಕಿಲ, ರಾಜೇಶ್ ನಟರಂಗ, ಅರುಣಾ ಬಾಲರಾಜ್ ತಾರಾಗಣದಲ್ಲಿರುವ ಈ ಚಿತ್ರ ಫೆ. 8ರಂದು ತೆರೆಗೆ ಬರಲಿದೆ. “ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’, “ಚಮಕ್’ ಬಳಿಕ ಮತ್ತೂಂದು ಭಿನ್ನ ಕಥಾಹಂದರದ ಪ್ರೇಮ್ ಕಹಾನಿ ಹೇಳಲು ಮುಂದಾಗಿದ್ದಾರೆ ನಿರ್ದೇಶಕ ಸುನಿ. ಸಿನಿಮಾದೊಳಗಿನ ವಿಶೇಷತೆಗಳ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ ಸುನಿ…
“ಇದೊಂಥರ ಮ್ಯೂಸಿಕಲ್ ಲವ್‌ಸ್ಟೋರಿ ಎನ್ನಬಹುದು, ತ್ರಿಕೋನ ಪ್ರೇಮಕಥೆಯೂ ಹೌದು. ಮತ್ತೂಂದು ಆ್ಯಂಗಲ್‌ನಲ್ಲಿ ಇದು “ಯಾರೇ ನೀನು ಚೆಲುವೆ’, “ಎಕ್ಸ್‌ಕ್ಯೂಸ್ ಮೀ’ ರೀತಿಯ ಸಿನಿಮಾಗಳಂತೆಯೂ ಭಾಸವಾಗಬಹುದು’ ಎಂದು ಸಿಂಪಲ್ಲಾಗ್ ಒಂದು ಸ್ಮೈಲ್ ಎಸೆದರು ಸುನಿ. ಹಾಗಾದರೆ ಅಸಲಿ ಕಥೆ ಏನು..?
“ಮಿಡ್ಲ್ ಕ್ಲಾಸ್ ಹುಡುಗನೊಬ್ಬ ತನ್ನ ಕಲ್ಪನೆಯ ಹುಡುಗಿಯನ್ನು ಅರಸುತ್ತ ಊರೂರು ಅಲೆಯುವ ವಿರಳ ಕಥೆಯಿದು. ಹೀಗಾಗಿ ಕರ್ನಾಟಕ, ಬಾಂಬೆ, ರಾಜಸ್ಥಾನ… ಹೀಗೆ ಅನೇಕ ಕಡೆ ಶೂಟಿಂಗ್ ಮಾಡಲಾಗಿದೆ. ಆದರೆ ಅದನ್ನು ತುಂಬಾ ಕಾಂಪ್ಲಿಕೇಟ್ ಮಾಡದೇ ಸರಳವಾಗಿ ಹೇಳಿದ್ದೇನೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಇದು ಕೊಂಚ ಭಿನ್ನ ರೀತಿಯಲ್ಲಿರುತ್ತದೆ. “ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ’ ಹಾಗೂ “ಚಮಕ್’ ಮಧ್ಯೆ ನಿಲ್ಲುವಂಥ ಸಿನಿಮಾ-ಒಂದು ಸರಳ ಪ್ರೇಮಕಥೆ.
ಸಾಮಾನ್ಯವಾಗಿ ನನ್ನ ಸಿನಿಮಾಗಳಲ್ಲಿ ಹ್ಯೂಮರ್ ಜಾಸ್ತಿ ಇರುತ್ತದೆ. ಆದರೆ ಈ ಚಿತ್ರದಲ್ಲಿ ಹ್ಯೂಮರ್ ಕಡಿಮೆ ಮಾಡಿ ಫೀಲ್ ಜಾಸ್ತಿ ಮಾಡಿದ್ದೀನಿ. ವೀರ್ ಸಮರ್ಥ್ ಮ್ಯೂಸಿಕ್‌ನಲ್ಲಿ ಒಟ್ಟು ಹತ್ತು ಹಾಡುಗಳು ಮೂಡಿಬಂದಿವೆ. ನಾಯಕ ಮ್ಯೂಸಿಷಿಯನ್ ಆಗಬೇಕೆಂಬ ಹಂಬಲದಿಂದ ಸಾಧುಕೋಕಿಲ ಅವರ ಬಳಿ ಅಸಿಸ್ಟೆಂಟ್ ಆಗಿರುತ್ತಾನೆ. ನಾಯಕಿ ಗಾಯಕಿ. ಹೀಗಾಗಿ ಅಷ್ಟು ಹಾಡುಗಳು ಬೇಕಿತ್ತು. ಈಗಾಗಲೇ ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಎಲ್ಲದಕ್ಕೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಾಗೆಯೇ ಹಾಡುಗಳಲ್ಲಿ ಸ್ವಲ್ಪ ವೆರೈಟಿ ಇರಲಿ ಎಂಬ ಕಾರಣಕ್ಕಾಗಿ “ನೀನ್ಯಾರೆಲೆ ನಿನಗಾಗಿಯೆ’ ಹಾಡಿನಲ್ಲಿ ಫೋಟೋ ಮತ್ತು ಸಾಹಿತ್ಯ ಬಳಸಲಾಗಿತು ಇನ್ನು ಎರಡನೇ ಹಾಡು “ಗುನು ಗುನುಗು’ ವಿಡಿಯೋ ರಿಲೀಸ್ ಮಾಡಲಾಗಿತ್ತು. ಮೊನ್ನೆಯಷ್ಟೇ ರಿಲೀಸ್ ಆಗಿರುವ ಮೂರನೇ ಹಾಡನ್ನು ವಿಭಿನ್ನವಾಗಿ ಮಾಡಬೇಕು ಎಂಬ ಆಲೋಚನೆಯಿಂದ ಇದಕ್ಕೆ ಎಐ (ಕೃತಕ ಬುದ್ದಿಮತ್ತೆ) ಸ್ಪರ್ಶ ನೀಡಲಾಗಿದೆ. “ಎಲ್ಲಾ ಮಾತನ್ನು’ ಎಂಬ ಈ ಸೂಫೀ ಗೀತೆಗೆ ಜಯಂತ ಕಾಯ್ಕಿಣಿ ಸಾಹಿತ್ಯ, “ಇಂಡಿಯನ್ ಐಡಲ್’ ಖ್ಯಾತಿಯ ಗಾಯಕಿ ಶಿವಾನಿ ಸ್ವಾಮಿ ಧ್ವನಿಯಾಗಿದ್ದಾರೆ.
ಹಾಗೆಯೇ ಹಾಡುಗಳನ್ನು ಸರಳವಾಗಿ ಬಿಡುಗಡೆ ಮಾಡಬಾರದು ಎಂಬ ಕಾರಣದಿಂದ ಮೊದಲ ಹಾಡನ್ನು ಹೊಸ ವರ್ಷದ ಸಂಭ್ರಮದಲ್ಲಿ ರಿಲೀಸ್ ಮಾಡಲಾಗಿತ್ತು. ಎರಡನೇ ಹಾಡನ್ನು ನಟ ಗಣೇಶ್ ರಿಲೀಸ್ ಮಾಡಿದ್ದರು. ಇದೀಗ ಮೂರನೇ ಹಾಡನ್ನು ರಮ್ಯಾ ರಿಲೀಸ್ ಮಾಡಿ ಕೊಟ್ಟಿದ್ದಾರೆ. ಅಪ್ಪು ಸರ್, ರಮ್ಯಾ ಅವರ ಎಐ ಫೋಟೋಗಳನ್ನು ನೋಡಿದಾಗ ಈ ಯೋಚನೆ ಬಂತು. ಇತ್ತೀಚಿನ ದಿನಗಳಲ್ಲಿ ಇಂತಹದೊಂದು ಸೂಫಿ ಸಾಂಗ್ ಬಂದಿಲ್ಲ. ಬಹುಶಃ ಈ ವರ್ಷದ ಮೊದಲ ಸೂಫಿ ಸಾಂಗ್ ಇದು. ಜತೆಗೆ ಈ ಹಾಡು ಕೇಳಿದಾಗ ರಮ್ಯಾ ಅವರೇ ನೆನಪಾಗುತ್ತಾರೆ ಎನ್ನುವ ಕಾರಣಕ್ಕೆ ಅವರಿಂದಲೇ ರಿಲೀಸ್ ಮಾಡಿಸಬೇಕು ಅನಿಸಿತು. ಅವರಿಂದಲೂ ಗ್ರೀನ್ ಸಿಗ್ನಲ್ ಸಿಕ್ತು. ಸಿನಿಮಾ ಬಿಡುಗಡೆಯ ಹೊತ್ತಿಗೆ ಮತ್ತಷ್ಟು ಹಾಡುಗಳು ರಿಲೀಸ್ ಆಗಲಿವೆ. ಎಲ್ಲವೂ ಸಿನಿಮಾಕ್ಕೆ ಸೂಕ್ತವಾಗಿವೆ’ ಎಂದು ಮಾತು ಮುಗಿಸಿದರು ಸುನಿ.
ರವಿಪ್ರಕಾಶ್ ರೈ