ಆತ ನಿಜವಾಗಿಯೂ ಜ್ಯೂನಿಯರ್ ಆರ್ಟಿಸ್ಟಾ ಅಥವಾ ಜ್ಯೂನಿಯರ್ ಆರ್ಟಿಸ್ಟ್ ತರಹ ನಟಿಸುತ್ತಾ ಎಲ್ಲಾ ವಿದ್ಯೆಗಳನ್ನು ತಿಳಿದುಕೊಂಡಿರುವ ಮಾಯಾವಿನಾ… ಸಿನಿಮಾ ಮುಂದೆ ಸಾಗುತ್ತಿದ್ದಂತೆ ಇಂತಹ ಪ್ರಶ್ನೆಗಳು ಕೂಡಾ ಹುಟ್ಟಿಕೊಳ್ಳುತ್ತಾ ಹೋಗುತ್ತವೆ. ಆ ಪ್ರಶ್ನೆಗಳಿಗೆ ಮೊದಲ ಭಾಗದಲ್ಲಿ ಪೂರ್ಣ ಉತ್ತರ ಸಿಗುತ್ತದೆ ಎಂದು ಹೇಳುವಂತಿಲ್ಲ. ಆದರೆ, ಭರಪೂರ ಮನರಂಜನೆ ಮಾತ್ರ ಯಾವುದೇ ಕೊರತೆಯಿಲ್ಲ. ಈ ವಾರ ತೆರೆಕಂಡಿರುವ “ಅವತಾರ ಪುರುಷ’ ಸಿನಿಮಾದಲ್ಲಿ ಏನಿದೆ ಎಂದರೆ, ಒಂದು ಫ್ಯಾಮಿಲಿ ಜೊತೆಯಾಗಿ ಕುಳಿತು ನೋಡುವ ಎಲ್ಲಾ ಅಂಶಗಳಿವೆ. ಮುಖ್ಯವಾಗಿ ಇದೊಂದು ನಗೆ ಟಾನಿಕ್ ಎನ್ನಬಹುದು.
ಶರಣ್ ಸಿನಿಮಾ ಎಂದರೆ ಅಲ್ಲಿ ಕೇವಲ ಕಾಮಿಡಿಗಷ್ಟೇ ಜಾಗವಿರುತ್ತಿತ್ತು. ಆದರೆ, ಈ ಬಾರಿ ಸಿಂಪಲ್ ಸುನಿ ಶರಣ್ ಅವರನ್ನಿಟ್ಟುಕೊಂಡು ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಕಾಮಿಡಿ ಜೊತೆಗೆ ಸಸ್ಪೆನ್ಸ್- ಥ್ರಿಲ್ಲರ್ ಹಾಗೂ ಹಾರರ್ ಅಂಶವನ್ನು ಸೇರಿಸಿ ಒಂದು ಕಥೆಯನ್ನು ಮಜವಾಗಿ ತೆರೆಮೇಲೆ ತಂದಿದ್ದಾರೆ ಸುನಿ.
ಮುಖ್ಯವಾಗಿ ಈ ಚಿತ್ರ ಇಷ್ಟವಾಗಲು ಕಾರಣ ಕಥೆಯನ್ನು ಕೊಂಡೊಯ್ಯಿದಿರುವ ರೀತಿ. ಕಾಮಿಡಿಯಿಂದ ಆರಂಭವಾಗಿ ಅಲ್ಲಲ್ಲಿ ಗಂಭೀರ ಸ್ವರೂಪ ಪಡೆಯುವ ಸಿನಿಮಾ ಕೊನೆಗೊಂದು ಹೊಸ ಲೋಕವನ್ನೇ ತೆರೆದಿಡುತ್ತದೆ. ಇಲ್ಲಿನ ಕಥೆಗೊಂದು ಫ್ಲ್ಯಾಶ್‌ಬ್ಯಾಕ್ ಇದೆ, ವಾಮಾಚಾರದ ನಂಟಿದೆ, ಜೊತೆಗೆ ಯಾರೂ ಊಹಿಸಲಾಗದ ಒಂದು ಲೋಕದ ಅನಾವರಣವಿದೆ. ಇವೆಲ್ಲವನ್ನು ನಿರ್ದೇಶಕ ಸುನಿ ನಿರೂಪಿಸಿಕೊಂಡು ಹೋದ ರೀತಿ ಇಷ್ಟವಾಗುತ್ತದೆ. ಕಥೆಗೆ ಪೂರಕವಾದ ವಾತಾವರಣ ಸೃಷ್ಟಿಸುವಲ್ಲೂ ಸುನಿ ಅಂಡ್ ಟೀಂ ಹಿಂದೆ ಬಿದ್ದಿಲ್ಲ. ಹಾಗಾಗಿ, ಸಿನಿಮಾದಲ್ಲಿ ನಿರ್ಮಾಪಕರ ಖರ್ಚು ಕೂಡಾ ಎದ್ದು ಕಾಣುತ್ತದೆ. ಒಂದು ಗಂಭೀರವಾದ ಕಥೆಯನ್ನು ಕಾಮಿಡಿ ಹಿನ್ನೆಲೆಯಲ್ಲಿಟ್ಟುಕೊಂಡು ಲವಲವಿಕೆಯಿಂದ ಕಟ್ಟಿಕೊಡುವ ಮೂಲಕ ನಿರ್ದೇಶಕ ಸುನಿ ಕೂಡಾ ಹೊಸ ಜಾನರ್‌ಗೆ ತೆರೆದು ಕೊಂಡಿದ್ದಾರೆ.
ಇದನ್ನೂ ಓದಿ:ಕಿರುತೆರೆ ನಟಿ Helly Shah ಬ್ಯೂಟಿಫುಲ್ ಫೋಟೋ ಗ್ಯಾಲರಿ
ಚಿತ್ರದಲ್ಲಿ ಬರುವ ಸನ್ನಿವೇಶಗಳ ಜೊತೆಗೆ ಸಂಭಾಷಣೆಗಳು ನಗು ತರಿಸುತ್ತವೆ. ಶರಣ್ ಕಾಮಿಡಿ ಜೊತೆಗೆ ಸಾಧುಕೋಕಿಲ ಅವರ ಕಾಮಿಡಿ ಟ್ರ್ಯಾಕ್ ಕೂಡಾ ಮಜಾ ಕೊಡುತ್ತದೆ. ಸಿನಿಮಾದಲ್ಲಿ ಬರುವ ಟ್ವಿಸ್ಟ್-ಟರ್ನ್ಗಳು ಹೊಸ ಹೊಸ ಅವತಾರಕ್ಕೆ ದಾರಿ ಮಾಡಿಕೊಡುತ್ತಾ ಹೋಗುವ ಮೂಲಕ ಕುತೂಹಲಕ್ಕೆ ಕಾರಣ ವಾಗುತ್ತವೆ. ಸಿನಿಮಾದ ಕೊನೆಯ ಕುತೂಹಲವನ್ನು ಮುಂದುವರೆದ ಭಾಗಕ್ಕೆ ಬಿಟ್ಟು, ಪ್ರೇಕ್ಷಕರ ಕುತೂಹಲವನ್ನೂ ಮುಂದೂಡಲಾಗಿದೆ.
ಶರಣ್ ಅವರ ಇಡೀ ಸಿನಿಮಾದಲ್ಲಿ ತುಂಬಾ ಲವಲವಿಕೆಯಿಂದ ನಟಿಸಿದ್ದಾರೆ. ಅವರ ಮ್ಯಾನರಿಸಂ, ಡೈಲಾಗ್ ಡೆಲಿವರಿ… ಎಲ್ಲವೂ ಸಿನಿಮಾದ ಓಟಕ್ಕೆ ಮತ್ತಷ್ಟು ಮೈಲೇಜ್ ನೀಡಿವೆ. ನಾಯಕಿ ಆಶಿಕಾ ಇದ್ದಷ್ಟು ಚೆಂದ. ಉಳಿದಂತೆ ಸಾಯಿಕುಮಾರ್, ಸುಧಾರಾಣಿ, ಶ್ರೀನಗರ ಕಿಟ್ಟಿ, ಅಶುತೋಶ್, ಬಿ.ಸುರೇಶ್ ಸೇರಿದಂತೆ ಅನೇಕರು ನಟಿಸಿದ್ದು, ಎಲ್ಲರ ಪಾತ್ರಕ್ಕೂ ತೂಕವಿದೆ. “ಅವತಾರ ಪುರುಷ’ನ ದರ್ಶನಕ್ಕೆ ಕುಟುಂಬ ಸಮೇತ ಜಾಲಿರೈಡ್ ಹೋಗಿಬರಬಹುದು
ರವಿಪ್ರಕಾಶ್ ರೈ