Advertisement

ಸರಳ ಮಳೆ ನೀರು ಕೊಯಿಲು ಫಿಲ್ಟರ್‌ ಅಳವಡಿಕೆ 

10:42 AM Jul 20, 2018 | |

ನೆಲ್ಯಾಡಿ : ಕೊಕ್ಕಡದ ಡೇವಿಡ್‌ ಜೈಮಿ ಅವರು ತಮ್ಮ ಮನೆಯಲ್ಲಿ ಸರಳ ಮಳೆನೀರು ಕೊಯ್ಲು ಫಿಲ್ಟರ್‌ ಅಳವಡಿಸಿಕೊಂಡು ಯಶಸ್ಸು ಗಳಿಸಿದ್ದಾರೆ. ಅವರ ಈ ಸಾಧನೆಯನ್ನು ಗಮನಿಸಿ ಮಂಗಳೂರಿನ ಮೀನುಗಾರಿಕಾ ಇಲಾಖೆ ಸಂಶೋಧನ ಕೇಂದ್ರದ ವಿಜ್ಞಾನಿಗಳು ಮನೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ.

Advertisement

ಮಂಗಳೂರಿನ ಮೀನುಗಾರಿಕಾ ಇಲಾಖೆ ಸಂಶೋಧನ ಕೇಂದ್ರದ ಪ್ರಧಾನ ವಿಜ್ಞಾನಿಗಳಾದ ಡಾ| ದಿನೇಶ್‌ ಬಾಬು ಎಂ.ಪಿ., ಡಾ| ಸುಜಾತಾ ಥಾಮಸ್‌, ಹಿರಿಯ ವಿಜ್ಞಾನಿ ಡಾ| ರಾಜೇಶ್‌ ಕೆ.ಎಂ. ಅವರನ್ನೊಳಗೊಂಡ ತಂಡವು ಡೇವಿಡ್‌ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಡೇವಿಡ್‌ ಜೈಮಿ ಅವರ ಮನೆಯ ಛಾವಣಿಯಿಂದ ಹರಿಯುವ ನೀರಿನ ಬಳಕೆ, ಅಲ್ಲಲ್ಲಿ ಇಳಿಜಾರು ಪ್ರದೇಶದಲ್ಲಿ ಅಲ್ಪ ಶ್ರಮದೊಂದಿಗೆ ನಿರ್ಮಿಸಿರುವ ಇಂಗುಗುಂಡಿ ಹಾಗೂ ಮರಗಳಿಂದ ಜಿನುಗುವ ನೀರನ್ನು ಇಂಗುಗುಂಡಿಗೆ ಹರಿಸುವ ವಿಧಾನದ ಬಗ್ಗೆ ಕಂಡುಕೊಂಡು ವಿಸ್ತೃತ ಚರ್ಚೆ ನಡೆಸಿ, ಮಾಹಿತಿ ಪಡೆದುಕೊಂಡರು.

ಅಂತರ್ಜಲ ವೃದ್ಧಿಗೆ ಅಸಂಖ್ಯ ಪ್ರಯೋಗಗಳು ನಡೆಯುತ್ತಿವೆ. ಸಮುದ್ರ ತೀರದ ಪ್ರದೇಶಗಳಲ್ಲಿ ಉಪ್ಪು ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಇಲ್ಲಿ ನೀರಿಂಗಿಸುವ ಮಳೆನೀರು ಕೊಯ್ಲು ಯೋಜನೆ ಉಪಯುಕ್ತವಾಗುತ್ತದೆ. ಕೊಕ್ಕಡದಲ್ಲಿ ಡೇವಿಡ್‌ ಜೈಮಿ ಎಂಬವರು ಸರಳ ತಂತ್ರಜ್ಞಾನದ ಮೂಲಕ ಮಳೆನೀರು ಇಂಗಿಸುವ ಕಾರ್ಯ ಮಾಡಿದ್ದಾರೆ. ಅವರು ಬಳಸುವ ವಿಧಾನಗಳತ್ತ ಸಂಶೋಧಕ ರತ್ತ ಚಿತ್ತ ಹರಿದಿರುವುದು ಉತ್ತಮ ಬೆಳವಣಿಗೆಯಾಗಿದೆ.

ದಶಕಗಳ ಸತತ ಪ್ರಯತ್ನ
ಹತ್ತು ವರ್ಷಗಳಿಂದ ಮಳೆನೀರು ಇಂಗಿಸುವಿಕೆಯಲ್ಲಿ ಸಂಶೋಧನೆಗಳನ್ನು ಮಾಡಿದ್ದಾರೆ. ಗುಡ್ಡ ಪ್ರದೇಶದ ತಮ್ಮ ಮನೆಯ ಬಾವಿಗೆ ಮಳೆ ನೀರು ಇಂಗಿಸುವ ಪ್ರಯೋಗ ಮಾಡಿ ಕಡುಬೇಸಗೆಯಲ್ಲೂ ಬಾವಿಯ ನೀರು ಆರದಂತೆ ನೋಡಿಕೊಂಡಿದ್ದಾರೆ. ಮೊದಲು ಬೇಸಗೆಯ 3-4 ತಿಂಗಳು ಬಾವಿಯಲ್ಲಿ ನೀರು ಬತ್ತಿ ಹೋಗುತ್ತಿತ್ತು. ಮಳೆನೀರು ಕೊಯ್ಲಿಗೆ ತಾವೇ ಸಂಶೋಧಿಸಿದ ಸಾಧನವನ್ನು ಅಳವಡಿಸಿ ಪ್ರಸ್ತುತ ಬಾವಿಯಲ್ಲಿ ಕಡು ಬೇಸಗೆಯಲ್ಲೂ 5 ಅಡಿ ನೀರನ್ನು ಉಳಿಸಿಕೊಳ್ಳುವಲ್ಲಿ ಸಫ‌ಲರಾಗಿದ್ದಾರೆ.

ಬತ್ತಿದ ಬಾವಿಗಳ ಪುನಶ್ಚೇತನ
ಸರಳ ಮಳೆ ನೀರು ಕೊಯ್ಲು ವಿಧಾನಗಳ ಬಗ್ಗೆ ಹಲವೆಡೆಯಲ್ಲಿ ಪ್ರಾತ್ಯಕ್ಷಿಕೆಗಳನ್ನು ನೀಡಿ ಹಲವಾರು ಬತ್ತಿದ ಬಾವಿಗಳನ್ನು ಪುನಶ್ಚೇತನಗೊಳಿಸಿದ ಹೆಗ್ಗಳಿಕೆ ಡೇವಿಡ್‌ ಜೈಮಿಯವರದ್ದು

Advertisement

ಹೀಗಿದೆ ಫಿಲ್ಟರ್‌
ಎರಡು ಇಂಚಿನ ಪೈಪುಗಳು (ಮನೆಯಿಂದ ಬಾವಿಯ ವರೆಗೆ ಸಂಪರ್ಕ ಕಲ್ಪಿಸಲು ಬೇಕಾಗುವಷ್ಟು ಉದ್ದ), ಹಳೆಯ ಬಕೆಟ್‌, 2 ಇಂಚಿನ ಪೈಪ್‌ ಅಳವಡಿಸಲು ಕಪ್ಲಿಂಗ್‌, ಹಿಟ್ಟು ಗಾಳಿಸುವ ಹಳೆಯ ಜಾರಿಗೆ (ಜರಡಿ), ಹೆಂಚಿನ ಅಥವಾ ಶೀಟ್‌ ಹಾಕಿದ ಮನೆಯಾದರೆ ಬೀಳುವ ನೀರನ್ನು ಒಂದೆಡೆ ಸೇರಿಸಲು ಅರ್ಧ ಭಾಗ ಮಾಡಿದ 4 ಇಂಚಿನ ಪೈಪುಗಳು. ಇವೆಲ್ಲವೂ ಕೃಷಿಕರ ಮನೆಯಲ್ಲಿ ನೀರಾವರಿಗೆ ಅಳವಡಿಸಿ ಉಳಿದಿರಬಹುದಾದ ಸಾಧನಗಳು. ಹೀಗಾಗಿ, ಹೆಚ್ಚು ಖರ್ಚಿಲ್ಲದೆ ಮಳೆಕೊಯ್ಲು ಮಾಡಬಹುದು.

ವಿಜ್ಞಾನಿಗಳ ಮೆಚ್ಚುಗೆ  
ಸಮುದ್ರ ತೀರದ ಪ್ರದೇಶಗಳಲ್ಲಿ ಮಳೆನೀರಿನ ಕೊಯ್ಲು ಮೂಲಕ ನೀರನ್ನು ಸಂಗ್ರಹಿಸಿ ಬಳಸುವ ಬಗ್ಗೆ ಹಾಗೂ ಉಪ್ಪುನೀರಿನ ಸಮಸ್ಯೆ ಇರುವ ಬಾವಿಗಳ ಸುತ್ತಮುತ್ತ ಇಂಗುಗುಂಡಿಗಳನ್ನು ರಚನೆ ಮಾಡಿ ಮಳೆನೀರನ್ನು ಇಂಗಿಸುವ ಮೂಲಕ ಉಪ್ಪುನೀರಿನ ಸಮಸ್ಯೆ ಪರಿಹರಿಸುವತ್ತ ಮಂಗಳೂರಿನ ಈ ವಿಜ್ಞಾನಿಗಳ ತಂಡ ಕಾರ್ಯಪ್ರವೃತ್ತವಾಗಿದೆ. ಮಳೆಕೊಯ್ಲು ವಿಧಾನವನ್ನು ಹಲವಾರು ಮಂದಿ ಸಂಶೋಧಿಸಿದ್ದರೂ ಕೊಕ್ಕಡದ ಡೇವಿಡ್‌ ಜೈಮಿಯವರ ಅತ್ಯಂತ ಸರಳ ವಿಧಾನ, ಕಡಿಮೆ ವೆಚ್ಚದಲ್ಲಿ ಅಳವಡಿಸಿಕೊಳ್ಳಬಹುದಾದ ವಿಧಾನದ ಬಗ್ಗೆ ವಿಜ್ಞಾನಿ ಗಳ ತಂಡ ಮೆಚ್ಚುಗೆ ವ್ಯಕ್ತಪಡಿಸಿತು.

ವೆಚ್ಚವಿಲ್ಲದೇ ಅಳವಡಿಸಬಹುದು
ಮೊದಮೊದಲು ಮಳೆನೀರು ಕೊಯ್ಲು ಬಗ್ಗೆ ಹೀಗಳೆಯುತ್ತಿದ್ದ ಜನರೇ ಇಂದು ಸ್ವತಃ ನೀರಿನ ಸಮಸ್ಯೆಗಳಿಗೊಳಗಾಗಿ ಮಳೆ ನೀರು ಕೊಯ್ಲು ಫಿಲ್ಟರ್‌ ಬಗ್ಗೆ ಮಾಹಿತಿ ಪಡೆದುಕೊಂಡು ಅಳವಡಿಸಿಕೊಳ್ಳುತ್ತಿದ್ದಾರೆ. ಕೃಷಿಕರು ತಮ್ಮ ಮನೆಗಳಲ್ಲಿ ನೀರಾವರಿಗೆ ಬಳಸಿ ಉಳಿದ ಪರಿಕರಗಳಲ್ಲಿಯೇ ಯಾವುದೇ ವೆಚ್ಚವಿಲ್ಲದೆ ಈ ವಿಧಾನವನ್ನು ಅಳವಡಿಸಿ ಕೊಳ್ಳಬಹುದು.
– ಡೇವಿಡ್‌ ಜೈಮಿ ಕೊಕ್ಕಡ

 ಗುರುಮೂರ್ತಿ ಎಸ್‌. ಕೊಕ್ಕಡ 

Advertisement

Udayavani is now on Telegram. Click here to join our channel and stay updated with the latest news.

Next