Advertisement

ಸರಳ ಗಣೇಶೋತ್ಸವಕ್ಕೆ ನಿರ್ಧಾರ

07:46 PM Aug 21, 2020 | Suhan S |

ಚಿಕ್ಕಮಗಳೂರು: ಜಿಲ್ಲೆಯ ಇತಿಹಾಸ ಪ್ರಸಿದ್ಧ ಆಜಾದ್‌ ಪಾರ್ಕ್‌ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸಲು ಆಜಾದ್‌ ಪಾರ್ಕ್‌ ಗಣೇಶ ಉತ್ಸವ ಸಮಿತಿ ನಿರ್ಧರಿಸಿದೆ.

Advertisement

ಪ್ರತೀ ವರ್ಷ ಅತ್ಯಂತ ವೈಭವದಿಂದ ಗಣೇಶೋತ್ಸವ ಆಚರಿಸಲಾಗುತ್ತಿತ್ತು. ಆದರೆ, ಈ ವರ್ಷ ಕೋವಿಡ್‌-19 ಮಹಾಮಾರಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಗಣೇಶ ಉತ್ಸವ ನಡೆಸಲು ಸಮಿತಿ ತೀರ್ಮಾನಿಸಿದೆ.

ಆಜಾದ್‌ ಪಾರ್ಕ್‌ ಗಣೇಶೋತ್ಸವವನ್ನು ಸುಮಾರು 83 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಶೆಟ್ಟರ ಬೀದಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ನಂತರ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ ವಿಜಯದಶಮಿವರೆಗೂ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. 2007ರಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ನಗರದ ಬೋಳರಾಮೇಶ್ವರ ದೇವಸ್ಥಾನದ ವಿಶಾಲ ಆವರಣದಲ್ಲಿ ಪ್ರತಿಷ್ಠಾಪಿಸಿ ವೈಭವದಿಂದ ಆಚರಿಸಲಾಗುತ್ತಿದೆ.

8 ಅಡಿ ಎತ್ತರದ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶಮೂರ್ತಿಗೆ ಬೆಳ್ಳಿಕಿರೀಟ, ಬೆಳ್ಳಿಯ ಕೈ, ಪಾದ, ಆಯುಧ ಸೇರಿದಂತೆ ಬೆಳ್ಳಿ ಆಭರಣಗಳಿಂದ ಅಲಂಕರಿಸಿ 25 ರಿಂದ 30 ದಿನಗಳ ವರೆಗೂ ಗಣೇಶೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಸಾವಿರಾರು ಭಕ್ತರು ದೇವರ ದರ್ಶನ ಪಡೆದುಕೊಳ್ಳುತ್ತಿದ್ದರು. ಉತ್ಸವದ ಹಿನ್ನೆಲೆಯಲ್ಲಿ ಪ್ರತೀ ದಿನ ವಿವಿಧ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. 25 ರಿಂದ 30 ದಿನಗಳವರೆಗೂ ನಡೆಯುವ ವೈಭವದ ಉತ್ಸವದಲ್ಲಿ ಮಕ್ಕಳ ಆಟಿಕೆ ಅಂಗಡಿಗಳು, ಜಾಯಿಟ್‌ ವೀಲ್‌ ಸೇರಿದಂತೆ ಮಕ್ಕಳ ಆಟಿಕೆಗಳನ್ನು ಜೋಡಿಸಿ ಮಕ್ಕಳಿಗೂ ಮನೋರಂಜನೆ ಕಲ್ಪಿಸಲಾಗುತ್ತದೆ. ಗಣೇಶ ಉತ್ಸವದ ರಾಜಬೀದಿ ಉತ್ಸವ ಅತ್ಯಂತ ಅದ್ಧೂರಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಗಣೇಶಮೂರ್ತಿ ವಿರ್ಸಜನೆ ದಿನ ಮಧ್ಯಾಹ್ನ 3ಗಂಟೆಗೆ ಆರಂಭವಾಗುವ ಉತ್ಸವದ ಮೆರವಣಿಗೆ ಮರುದಿನ ಬೆಳಗ್ಗೆವರೆಗೂ ನಡೆಸಿ ನಂತರ ಗಣೇಶಮೂರ್ತಿಯ ವಿಸರ್ಜನೆಮಾಡಲಾಗುತ್ತಿತ್ತು. ಮೆರವಣಿಗೆಯಲ್ಲಿ ಗೊಂಬೆ ನೃತ್ಯ, ಡೊಳ್ಳುಕುಣಿತ, ವೀರಗಾಸೆ, ಮಂಗಳವಾದ್ಯ ಸೇರಿದಂತೆ ಅನೇಕ ಕಲಾತಂಡಗಳಿಂದ ನೃತ್ಯ- ವೈಭವದೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಗುತ್ತಿತ್ತು. ಪ್ರತೀ ವರ್ಷ ಅದ್ಧೂರಿಯಿಂದ ನಡೆಯುತ್ತಿದ್ದ ಗಣೇಶೋತ್ಸವಕ್ಕೆ ಕೋವಿಡ್ ಕಂಟಕ ಎದುರಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವವನ್ನು ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸರಳವಾಗಿ ಆಚರಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಆಜಾದ್‌ಪಾರ್ಕ್‌ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ.

ಒಂದು ತಿಂಗಳವರೆಗೆ ನಡೆಯುತ್ತಿದ್ದ ಗಣೇಶ ಉತ್ಸವವನ್ನು 11ದಿನಗಳಿಗೆ ಮೊಟಕುಗೊಳಿಸಲಾಗಿದೆ. ಪ್ರತೀ ವರ್ಷ 8 ಅಡಿಯ ಬೃಹತ್‌ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ, ಈ ವರ್ಷ ಮೂರುವರೆ ಅಡಿಯ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಲು ಸಮಿತಿ ನಿರ್ಧರಿಸಿದೆ. ಈ ವರ್ಷ ಪ್ರತಿಷ್ಠಾಪಿಸುತ್ತಿರುವ ಹಿನ್ನೆಲೆಯಲ್ಲಿ ಮೂರ್ತಿಗೆ ಅಳವಡಿಸುತ್ತಿದ್ದ ಬೆಳ್ಳಿಯ ಕಿರೀಟ, ಬೆಳ್ಳಿಯ ಕೈ, ಬೆಳ್ಳಿಯ ಪಾದ, ಮೂರ್ತಿಗೆ ಅಳವಡಿಸಿ ಅಲಂಕರಿಸುತ್ತಿದ್ದ ಬೆಳ್ಳಿಯ ಆಯುಧಗಳನ್ನು ಈ ಬಾರಿ ತೊಡಿಸಲಾಗುತ್ತಿಲ್ಲವೆಂದು ಸಮಿತಿ ತಿಳಿಸಿದೆ.ಕೋವಿಡ್ ಮಹಾಮಾರಿ ಎಲ್ಲಾ ಕ್ಷೇತ್ರಗಳನ್ನು ಕಾಡುತ್ತಿದ್ದು, ಅದ್ಧೂರಿ ಇತಿಹಾಸ ಪ್ರಸಿದ್ಧ ಗಣೇಶೋತ್ಸವಕ್ಕೂ ಅಡ್ಡಿಯಾಗಿದೆ.

Advertisement

ಕೋವಿಡ್‌-19 ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಆಜಾದ್‌ ಪಾರ್ಕ್‌ ಗಣೇಶ ಉತ್ಸವವನ್ನು ಅತ್ಯಂತ ಸರಳವಾಗಿ ಸರ್ಕಾರದ ಮಾರ್ಗಸೂಚಿಯಂತೆ ನಡೆಸಲು ಸಮಿತಿ ತೀರ್ಮಾನ ಮಾಡಿದೆ. – ಈಶ್ವರಪ್ಪ, ಅಧ್ಯಕ್ಷರು ಶ್ರೀ ಗಣಪತಿ ಸೇವಾ ಸಮಿತಿ ಬೋಳರಾಮೇಶ್ವರ ದೇವಸ್ಥಾನ

 

-ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next