ಬೆಂಗಳೂರು: ಹಲವು ದಿನಗಳಿಂದ ಚರ್ಚೆಗೆ ಕಾರಣವಾಗಿದ್ದ ಮೈಸೂರು ದಸರಾ ಆಚರಣೆಯ ಬಗ್ಗೆ ಇಂದು ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದೆ. ಕೋವಿಡ್-19 ಸೋಂಕಿನ ಕಾರಣದಿಂದ ಈ ಬಾರಿ ಸರಳವಾಗಿಯೇ ಮೈಸೂರು ದಸರಾ ಆಚರಿಸಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದ್ದು, ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಮಾತ್ರ ಸೀಮಿತವಾಗಿ ದಸರಾ ನಡೆಯಲಿದೆ. ಅರಮನೆ ಆವರಣಕ್ಕೆ ಸೀಮಿತವಾಗಿ ಗಜಪಯಣ ನಡೆಯಲಿದೆ. ಈ ಬಾರಿಯ ದಸರಾವನ್ನು ಐದು ಮಂದಿ ಕೋವಿಡ್-19 ವಾರಿಯರ್ಸ್ ಗಳಿಂದ ಉದ್ಘಾಟನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
ಏನು ಇದೆ? ಏನು ಇಲ್ಲ?
ಕೋವಿಡ್ ಕಾರಣದಿಂದ ಈ ಬಾರಿ ವೈಭವಕ್ಕೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಹೆಚ್ಚಿನ ಜನಸಂದಣಿ ಸೇರದಂತೆ ಸಾಂಕೇತಿಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಯುವ ದಸರಾ, ಮಹಿಳಾ ದಸರಾ, ಚಿಣ್ಣರ ದಸರಾ, ರೈತ ದಸರಾ, ಪಂಜಿನ ಕವಾಯಿತು ಸೇರಿದಂತೆ ಜನಸಂದಣಿ ಕಾರ್ಯಕ್ರಮಗಳು ಈ ಬಾರಿಯ ಮೈಸೂರು ದಸರಾದಲ್ಲಿ ಇರುವುದಿಲ್ಲ.
ಇದನ್ನೂ ಓದಿ: ಸರಳ ದಸರಾ ಆಚರಿಸಲು ನಿರ್ಧಾರ: ಅರಮನೆ ಆವರಣಕ್ಕಷ್ಟೇ ಜಂಬೂ ಸವಾರಿ ಸೀಮಿತ
ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಸಹ ಕನಿಷ್ಟ 5ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಪೂಜೆ ನೆರವೇರಿಸಿ, 5-6 ಆನೆಗಳನ್ನು ಮಾತ್ರ ಬಳಸಿ, ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಮಾತ್ರ ನಡೆಸುವುದು. ಮೈಸೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಾಡದೇವತೆ ಚಾಮುಂಡೇಶ್ವರಿಯ ಅಗ್ರಪೂಜೆ ಮತ್ತು ದಸರಾ ಉದ್ಘಾಟನೆಯನ್ನು ಕೋವಿಡ್ ಗಾಗಿ ಶ್ರಮಿಸಿರುವ ಕರೊನಾ ಯೋಧರಾದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಪೊಲೀಸ್ ಅವರಿಂದ ನೆರವೇರಿಸುವುದು ಎಂದು ತೀರ್ಮಾನಿಸಲಾಯಿತು.
ಪ್ರಧಾನಮಂತ್ರಿಗಳ ಆತ್ಮನಿರ್ಭರ್ ಭಾರತ ಪರಿಕಲ್ಪನೆಯಂತೆ ಚೀನಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಬಾರದು. ದೇಶೀ ಉತ್ಪನ್ನಗಳಿಗೆ ಆದ್ಯತೆ ನೀಡಲಾಗುವುದು.