ಕೋಟೇಶ್ವರ, ನ. 29: ಕೋಟಿಲಿಂಗೇಶ್ವರ ದೇಗುಲದ ಕೊಡಿ ಹಬ್ಬಕ್ಕೆ ಸಿದ್ಧತೆಗಳು ನಡೆದಿದ್ದು, ಈ ಬಾರಿ ಕೋವಿಡ್ ಸಾಂಕ್ರಾಮಿಕ ರೋಗ ದಿಂದಾಗಿ ಸರಳವಾಗಿ ನಡೆಯ ಲಿದೆ. ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕೊಡಿಹಬ್ಬಕ್ಕೆ, ಈ ದೇಗುಲಕ್ಕೆ ವಿಶಿಷ್ಟ ಇತಿಹಾಸವಿದೆ. ಧ್ವಜಪುರವೆಂದು ನಾಮಾಂಕಿತ ವಾಗಿರುವ ಕೋಟೇಶ್ವರ ದೇಗುಲವು ನೂರಾರು ವರ್ಷಗಳ ಇತಿಹಾಸ ಹೊಂದಿದೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿನ 32 ಶಾಸನಗಳು ಇಲ್ಲಿ ದೊರೆತಿವೆ. ಏಳು ಪ್ರದಕ್ಷಿಣ ಪಥಗಳನ್ನೊಳಗೊಂಡ ಈ ದೇಗುಲವು ಪೂರ್ವಾಭಿಮುಖವಾಗಿದೆ. ಗರ್ಭಗುಡಿಯಲ್ಲಿ ವೃತ್ತಾಕಾರದ ಶಿಲಾ ಬಾವಿ ಇದೆ. ಆಳದಲ್ಲಿ ಮೊರಗು ಶಿಲೆ ಯಿದ್ದು ಇದರ ತುದಿಭಾಗ ರುದ್ರಾಕ್ಷಿ ಮಣಿಗಳಂತಿದೆ. ಇದೇ ಕೋಟಿಲಿಂಗವೆಂಬ ಪ್ರತೀತಿ. ಈ ಶಿಲಾಬಾವಿಯ ಮೇಲೆ ಕರಿ ಶಿಲೆಯ ಬೃಹತ್ ಪಾಣಿಪೀಠವಿದ್ದು ಅದರ ಮೇಲೆ ಶಿವನ ಪ್ರತಿಮೆಯನ್ನಿಟ್ಟು ಪೂಜಿಸ ಲಾಗುತ್ತಿದೆ. ಈ ಬಾವಿಯ ನೇರ ಮೇಲ್ಭಾಗ ದಲ್ಲಿ ಗಂಗಾಪಾತ್ರೆ ತೂಗುಹಾಕಿದ್ದು ಅದರಿಂದ ನಿರಂತರ ನೀರು ಬಾವಿಗೆ ತೊಟ್ಟಿಕ್ಕುವಂತೆ ಮಾಡಲಾಗಿದೆ. ಗರ್ಭಗುಡಿಯ ಮೇಲ್ಛಾವಣಿಯ ಒಳಭಾಗದಲ್ಲಿ ಶಿಲೆಯಲ್ಲಿ ಪದ್ಮಪುಷ್ಪವನ್ನು ಕೆತ್ತಿದ ಮುಚ್ಚಿಗೆಯಿದೆ.
ದ್ವಾರದ ಮೇಲಿರುವ ಬ್ರಹ್ಮ, ಶಿವ, ವಿಷ್ಣು ಉಬ್ಬು ಶಿಲ್ಪ ಹಾಗೂ ಸ್ತ್ರೀ ವಿಗ್ರಹಗಳು ಬಹಳಷ್ಟು ಪ್ರಾಚೀನ ಕಾಲದ್ದಾಗಿವೆ. 12 ಶಿಲಾಕಂಬಗಳನ್ನು ಹೊಂದಿರುವ ನಂದಿಮಂಟಪವಿದೆ. ದೇಗುಲದ ಒಳಭಾಗದ ಎದುರಿಗೆ ಉತ್ಸವಮೂರ್ತಿ ಯಿದೆ. ಎಡಭಾಗದಲ್ಲಿ ಮೂಳೆಗಣಪತಿ ವಿಗ್ರಹವಿದೆ. 8 ದಿಕ್ಕುಗಳಲ್ಲಿ ಬಲಿಕಲ್ಲು ದ್ವಾರದ ಬಳಿ ಪರಶುಪಾಣಿ ಹಾಗೂ ಶೂಲಪಾಣಿಗಳೆಂಬ ಪಂಚಲೋಹದ ದ್ವಾರಪಾಲಕರ ಮೂರ್ತಿಯಿದೆ. ಇದು ವಿಜಯನಗರ ಅಥವಾ ಕೆಳದಿ ನಾಯಕರ ಕಾಲದಲ್ಲಿ ರಚಿಸಲ್ಪಟ್ಟಿದೆ ಎನ್ನಲಾಗಿದೆ. ಒಳ ಸುತ್ತಿನಲ್ಲಿ 8 ದಿಕ್ಕುಗಳಲ್ಲಿ ಬಲಿಗಲ್ಲುಗಳಿವೆ. ಶೈವಾಗಮದಂತೆ ಪೂಜೆ ನಡೆಯುತ್ತದೆ. ಮೊದಲ ಸುತ್ತಿನಲ್ಲಿ ಸಪ್ತ ಮಾತೃಕೆಯರುಗಳುಳ್ಳ ಗುಡಿ, ಹಿಂಭಾಗದ ಗುಡಿಯಲ್ಲಿ ಷಣ್ಮುಖನ ಮೂರ್ತಿಯಿದೆ. ವಾಯವ್ಯ ಮೂಲೆಯಲ್ಲಿ ಪಾರ್ವತಿ ಗುಡಿ ಇದೆ.
ಬೃಹತ್ ಪುಷ್ಕರಿಣಿ ಜೀರ್ಣೋದ್ಧಾರ :
ನಾಲ್ಕೂವರೆ ಎಕರೆ ವಿಸ್ತೀರ್ಣದ ರಾಜ್ಯದ ಅತಿ ದೊಡ್ಡ ಪುಷ್ಕರಿಣಿ ಎಂದು ಗುರುತಿಸಿಕೊಂಡಿರುವ ಕೋಟಿತೀರ್ಥ ಸರೋವರ ಜೀರ್ಣೋದ್ಧಾರಗೊಂಡಿದೆ. 50 ಲ.ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಇಲ್ಲಿನ ಕೆರೆಯ ಆಗ್ನೇಯ ದಿಕ್ಕಿನಲ್ಲಿ ಸುರಂಗವಿದ್ದು ವಂಡಾರು ದೇಗುಲದ ಕಂಬಳದ ದಿನ ನೀರು ಕಲುಷಿತಗೊಳ್ಳುವುದೆಂಬ ನಂಬಿಕೆಯಿದ್ದು ಕೊಡಿ ಹಬ್ಬದ ದಿನ ರಥ ಎಳೆದಾಗ ಅಲ್ಲಿನ ಕಂಬಳ ಗದ್ದೆಯಲ್ಲಿ ಧೂಳು ಏಳುತ್ತದೆ ಎನ್ನಲಾಗಿದೆ.
ನೆಂಟಸ್ತಿಕೆಗೆ ನಾಂದಿ ಹೇಳುವ ಹಬ್ಬ : ಕೋಟಿಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವವಾದ ಕೊಡಿ ಹಬ್ಬದಂದು ವಧು-ವರರ ಅನ್ವೇಷಣೆ ಹಾಗೂ ನಿಶ್ಚಿತಾರ್ಥಕ್ಕೆ ನಾಂದಿ ಹೇಳುವ ಪರಿಪಾಠ ಇಂದಿಗೂ ನಡೆದುಕೊಂಡು ಬರುತ್ತಿದ್ದು ಮದುಮಕ್ಕಳು ಮುಂದಿನ ವರ್ಷದ ಕೊಡಿ ಹಬ್ಬದಂದು ಪೂಜೆ ಸಲ್ಲಿಸಿ ಕಬ್ಬಿನ ಕೊಡಿಯನ್ನು ಮನೆಗೆ ಕೊಂಡೊಯ್ಯುವ ಆಚರಣೆ ನಡೆಯುತ್ತಿದೆ.
ಸರಳ ಆಚರಣೆ : ಕೋವಿಡ್-19 ನಿಯಮದಂತೆ ನ. 30ರಂದು ಕೇವಲ ಧಾರ್ಮಿಕ ವಿಧಿಗಳೊಡನೆ ಸರಳವಾಗಿ ಕೊಡಿ ಹಬ್ಬ ಆಚರಿಸಲು ಉದ್ದೇಶಿಸಲಾಗಿದ್ದು ಅಂಗಡಿ ಮುಂಗಟ್ಟು ಇನ್ನಿತರ ವ್ಯಾಪಾರ ವ್ಯವಹಾರ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಬಾರಿ ನಿರ್ಬಂಧ ಹೇರಲಾಗಿರುವುದರಿಂದ ಸಡಗರದ ಉತ್ಸವಾಚರಣೆಗೆ ಸ್ವಲ್ಪ ತಡೆಯಾಗಿದೆ.