ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ರಾಜಧಾನಿಯ ಮುಸಲ್ಮಾನರು ಸರಳವಾಗಿ ಬಕ್ರೀದ್ ಆಚರಿಸಿದರು. ಈದ್ಗಾ ಮೈದಾನ, ಸಮುದಾಯ ಭವನ, ಶಾದಿ ಮಹಲ್ ಹಾಗೂ ಇನ್ನಿತರ ಬಯಲು ಪ್ರದೇಶಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಸಿಟಿ ಮಾರುಕಟ್ಟೆಯ ಜಾಮೀಯಾ ಮಸೀದಿ, ಬನ್ನೇರು ಘಟ್ಟ ರಸ್ತೆಯ ಬಿಲಾಲ್ ಮಸೀದಿ, ಜಯನಗರ 4ನೇ ಬ್ಲಾಕ್‌ನ ಈದ್ಗಾ ಮಸೀದಿ, ಟ್ಯಾನರಿ ರಸ್ತೆಯ ಸಬೀಲುರ್ರಷಾದ್ ಮದರಸಾ ಮಸೀದಿ ಸೇರಿದಂತೆ ನಗರದ ಬಹುತೇಕ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಸಿಟಿ ಮಾರು ಕಟ್ಟೆ ಜಾಮೀಯಾ ಮಸೀದಿಯಲ್ಲಿ ಮೌಲಾನ ಮಕ್ಸೂದ್ ಇಮ್ರಾನ್ ರಷಾದಿ, ಸಬೀಲುರ್ರಷಾದ್ ಮಸೀದಿಯಲ್ಲಿ ಅಮಿರೆ ಷರಿಯತ್ ಮೌಲಾನ ಸಗೀರ್ ಅಹ್ಮದ್ ರಷಾದಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಸಿಟಿ ಮಾರು ಕಟ್ಟೆಯ ಜಾಮೀಯಾ ಮಸೀದಿಯಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಪಾಲ್ಗೊಂಡಿದ್ದರು.
ಪ್ರಾರ್ಥನೆ ವೇಳೆ ಎಲ್ಲಾ ಮಸೀದಿಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಪ್ರತಿಯೊಬ್ಬರು ಮಾಸ್ಕ್ ಧರಿಸಿದ್ದರು. ಪ್ರವೇಶದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆಯಿತ್ತು. ಮಸೀದಿಯ ಆಡಳಿತ ಮಂಡಳಿ, ವಕ್ಫ್ ಇಲಾಖೆಗಳಿಂದ ಮಾರ್ಗಸೂಚಿ ಪಾಲಿಸುವ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಮಸೀದಿ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಬೆಳಗ್ಗೆ 6.20ರಿಂದ 8 ಗಂಟೆಯೊಳಗೆ ಬಹುತೇಕ ಎಲ್ಲಾ ಕಡೆ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಪ್ರಾರ್ಥನೆ ಬಳಿಕ ಹಬ್ಬದ ಶುಭಾಶಯ ಕೋರಲು ಪರಸ್ಪರ ಕೈ ಕುಲುಕುವುದು, ಆಲಿಂಗನ ಮಾಡುವುದು ಸಂಪ್ರದಾಯ. ಆದರೆ, ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡಬೇಕಾದ ಕಾರಣ ದೂರದಿಂದಲೇ ಪರಸ್ಪರ ಶುಭಾಶಯ ಕೋರಿಕೊಂಡರು. ಮಸೀದಿಗಳಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತಿತ್ತು.
ಕುರ್ಬಾನಿ ಪ್ರಮಾಣ ಇಳಿಕೆ : ಕೋವಿಡ್-19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ, ಸಾಮಾಜಿಕ ಅನಾನುಕೂಲತೆಗಳ ಹಿನ್ನೆಲೆಯಲ್ಲಿ ಕುರ್ಬಾನಿ (ಪ್ರಾಣಿ ಬಲಿ) ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿತು. ಪ್ರತಿ ವರ್ಷದಂತೆ ಈ ವರ್ಷ ಜನ ಪ್ರಾಣಿ ಬಲಿ ಅರ್ಪಿಸಲಿಲ್ಲ. ವಿವಿಧ ಮಸೀದಿ ಸಮಿತಿಗಳು, ಸ್ವಯಂಸೇವಾ ಸಂಸ್ಥೆಗಳಿಂದ ನಿರ್ವಹಿಸಲಾಗುತ್ತಿದ್ದ ಸಾಮೂಹಿಕ ಕುರ್ಬಾನಿ ವ್ಯವಸ್ಥೆ ಈ ಬಾರಿ ಇರಲಿಲ್ಲ. ಬದಲಿಗೆ ಸ್ವಚ್ಛತೆಗೆ ಒತ್ತು ನೀಡಲಾಗಿತ್ತು. ಪೌರ ಕಾರ್ಮಿಕರು, ಪಾಲಿಕೆ ವಾಹನಗಳು ಎರಡು ಬಾರಿ ತ್ಯಾಜ್ಯ ಸಂಗ್ರಹಿಸಿದ್ದು ಕಂಡು ಬಂತು.