Advertisement

ವೀನಸ್‌ ಆಟ ಮುಗಿಸಿದ ಹಾಲೆಪ್‌​​​​​​​

12:30 AM Jan 20, 2019 | |

ಮೆಲ್ಬರ್ನ್: ವಿಶ್ವದ ನಂಬರ್‌ ವನ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ವಿಲಿಯಮ್ಸ್‌ ಸೋದರಿಯರಲ್ಲಿ ಹಿರಿಯಳಾದ ವೀನಸ್‌ಗೆ ಸೋಲುಣಿಸುವ ಮೂಲಕ ಅಂತಿಮ 16ರ ಸುತ್ತು ಪ್ರವೇಶಿಸಿದ್ದಾರೆ. ಸೋಮವಾರ ಇಲ್ಲಿ ಸೆರೆನಾ ವಿಲಿಯಮ್ಸ್‌ ವಿರುದ್ಧ ಸೆಣಸಲಿದ್ದಾರೆ. ನವೋಮಿ ಒಸಾಕಾ, ಗಾರ್ಬಿನ್‌ ಮುಗುರುಜಾ, ಕ್ಯಾರೋಲಿನಾ ಪ್ಲಿಸ್ಕೋವಾ, ಅನಾಸ್ತಾಸಿಜಾ ಸೆವಸ್ತೋವಾ ವನಿತಾ ಸಿಂಗಲ್ಸ್‌ ವಿಭಾಗದಿಂದ ಮುನ್ನಡೆದವರಲ್ಲಿ ಪ್ರಮುಖರು.

Advertisement

ಕಳೆದ ಸಲದ ಫೈನಲಿಸ್ಟ್‌ ಹಾಲೆಪ್‌ ಶನಿವಾರದ 3ನೇ ಸುತ್ತಿನ ಪಂದ್ಯದಲ್ಲಿ 6-2, 6-3 ಅಂತರದಿಂದ, ಬಹಳ ಸುಲಭದಲ್ಲಿ ವೀನಸ್‌ ಆಟಕ್ಕೆ ತೆರೆ ಎಳೆದರು. “ಈ ವರ್ಷ ನನ್ನ ಅತ್ಯುತ್ತಮ ಪಂದ್ಯವೊಂದನ್ನು ಇಲ್ಲಿ ಆಡಿದೆ’ ಎಂಬುದಾಗಿ ಹಾಲೆಪ್‌ ಪ್ರತಿಕ್ರಿಯಿಸಿದ್ದಾರೆ. ಆದರೆ ಸೆರೆನಾ ವಿರುದ್ಧ ಹಾಲೆಪ್‌ ಕಳಪೆ ದಾಖಲೆ ಹೊಂದಿದ್ದಾರೆ. 9 ಪಂದ್ಯಗಳಲ್ಲಿ ಗೆದ್ದದ್ದು ಒಂದನ್ನು ಮಾತ್ರ.

ಸೆರೆನಾಗೆ ಸುಲಭ ಜಯ
ದಿನದ ಇನ್ನೊಂದು ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ ಉಕ್ರೇನಿನ ಯುವ ಆಟಗಾರ್ತಿ ಡಯಾನಾ ಯಾಸ್ಟ್ರೆಮ್‌ಸ್ಕಾ ವಿರುದ್ಧ 6-2, 6-1 ಅಂತರದಿಂದ ಗೆದ್ದು ಬಂದರು. ಸೆರೆನಾ 1999ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಗೆದ್ದಾಗ ಆಗಿನ್ನೂ ಯಾಸ್ಟ್ರೆಮ್‌ಸ್ಕಾ ಜನಿಸಿರಲಿಲ್ಲ!

“ನಿನ್ನ ಆಟ ಅಮೋಘವಾಗಿತ್ತು. ಮುಂದೊಂದು ದಿನ ಗೆಲುವು ಕೈಹಿಡಿಯಲಿದೆ. ಬೇಸರಪಡಬೇಡ’ ಎಂದು ಸೆರೆನಾ ಕಣ್ಣೀರಿಡುತ್ತಿದ್ದ ಯಾಸ್ಟ್ರೆಮ್‌ಸ್ಕಾಗೆ ಸಮಾಧಾನ ಮಾಡಿ ಕ್ರೀಡಾಸ್ಫೂರ್ತಿ ಮೆರೆದರು.

ಒಸಾಕಾ, ಮುಗುರುಜಾ ಓಟ
ಯುಎಸ್‌ ಓಪನ್‌ ಚಾಂಪಿಯನ್‌, ಜಪಾನಿನ 17ರ ಹರೆಯದ ಆಟಗಾರ್ತಿ ನವೋಮಿ ಒಸಾಕಾ 3 ಸೆಟ್‌ಗಳ ಕಾದಾಟದ ಬಳಿಕ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾದರು. ಶನಿವಾರದ “ಆಲ್‌ ಏಶ್ಯನ್‌’ ಪಂದ್ಯದಲ್ಲಿ ಅವರು ಥೈವಾನ್‌ನ ಸೀ ಸು ವೀ ವಿರುದ್ಧ 7-5, 4-6, 6-1 ಅಂತರದ ಗೆಲುವು ಸಾಧಿಸಿದರು. ಮುಂದಿನ ಎದುರಾಳಿ ಲಾತ್ವಿಯಾದ ಅನಾಸ್ತಾಸಿಜಾ ಸೆವಸ್ತೋವಾ. ಅವರು ಚೀನದ ವಾಂಗ್‌ ಕ್ವಿಯಾಂಗ್‌ ವಿರುದ್ಧ 6-3, 6-3 ಅಂತರದಿಂದ ಗೆದ್ದರು.ಸ್ಪೇನಿನ ಗಾರ್ಬಿನ್‌ ಮುಗುರುಜಾ ಸ್ವಿಸ್‌ ಆಟಗಾರ್ತಿ ಟೈಮಿಯಾ ಬಕ್ಸಿನ್‌ಸ್ಕಿ ವಿರುದ್ಧ 7-6 (7-5), 6-2 ಅಂತರದಿಂದ ಜಯ ಸಾಧಿಸಿ 4ನೇ ಸುತ್ತು ತಲುಪಿದರು.

Advertisement

ಮಿಕ್ಸೆಡ್‌ ಡಬಲ್ಸ್‌
ಪೇಸ್‌ ಜಯ, ಬೋಪಣ್ಣ ಪರಾಭವ

ಆಸ್ಟ್ರೇಲಿಯನ್‌ ಓಪನ್‌ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಶನಿವಾರ ಭಾರತ ಮಿಶ್ರ ಫ‌ಲ ಅನುಭವಿಸಿದೆ. ಲಿಯಾಂಡರ್‌ ಪೇಸ್‌ ಜಯ ಸಾಧಿಸಿದರೆ, ರೋಹನ್‌ ಬೋಪಣ್ಣ ಪರಾಭವಗೊಂಡರು.ತವರಿನ ಸಮಂತಾ ಸ್ಟೋಸರ್‌ ಜತೆಗೂಡಿ ಆಡುತ್ತಿರುವ ಲಿಯಾಂಡರ್‌ ಪೇಸ್‌ ನೆದರ್ಲೆಂಡ್‌ನ‌ ವೆಸ್ಲಿ ಕೂಲ್‌ಹೋಫ್-ಜೆಕ್‌ ಗಣರಾಜ್ಯದ ಕ್ವೆಟಾ ಪೆಶೆR ವಿರುದ್ಧ 6-4, 7-5 ಅಂತರದಿಂದ ಜಯ ಸಾಧಿಸಿದರು. ಆದರೆ ದಿಟ್ಟ ಹೋರಾಟ ಪ್ರದರ್ಶಿಸಿಯೂ ರೋಹನ್‌ ಬೋಪಣ್ಣ-ಚೀನದ ಯಾಂಗ್‌ ಜೊಕ್ಸುವಾನ್‌ ಜೋಡಿ ರಾಬರ್ಟ್‌ ಫ‌ರ (ಕೊಲಂಬಿಯಾ)-ಅನ್ನಾ ಲೆನಾ ಗ್ರೋನ್‌ಫೆಲ್ಡ್‌ (ಜರ್ಮನಿ) ವಿರುದ್ಧ 6-3, 3-6, 6-10 ಅಂತರದಿಂದ ಪರಾಭವಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next