ಮೆಲ್ಬರ್ನ್: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧರೋಚಕ ಜಯ ಸಾಧಿಸಿದೆ. ಅಂತಿಮ ಎಸೆತದವರೆಗೆ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್ ಅಂತರದ ಗೆಲುವು ಕಂಡಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅಮೋಘ 82 ರನ್ ಆಟದಿಂದ ಭಾರತಕ್ಕೆ ನೆರವು ನೀಡಿತು. ಅಂತಿಮ ಓವರ್ ನಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದರೂ ಭಾರತ ಅಂತಿಮ ಎಸೆತದಲ್ಲಿ ಗೆಲುವಿನ ಗುರಿ ತಲುಪಿತು.
ಅಂತಿಮ ಓವರ್ ನ ಮೊದಲ ಎಸೆತದಲ್ಲಿ ಹಾರ್ದಿಕ್ ಔಟಾದರೆ, ಎರಡನೇ ಎಸೆತದಲ್ಲಿ ಕಾರ್ತಿಕ್ ಒಂಟಿ ರನ್ ಕಸಿದರು. ಮೂರನೇ ಎಸೆತದಲ್ಲಿ ವಿರಾಟ್ ಎರಡು ರನ್ ತೆಗೆದರು. ನಾಲ್ಕನೇ ಎಸೆತ ನೋ ಬಾಲ್, ಇದಕ್ಕೆ ವಿರಾಟ್ ಸಿಕ್ಸರ್ ಬಾರಿಸಿದರು. ನಂತರ ಫ್ರೀ ಹಿಟ್ ಎಸೆತಕ್ಕೆ ವಿರಾಟ್ ಬೌಲ್ಡ್ ಆದರೂ, ಚೆಂಡು ಥರ್ಡ್ ಮ್ಯಾನ್ ಕಡೆ ಸಾಗಿತು. ಈ ನಡುವೆ ವಿರಾಟ್ ಮತ್ತು ಕಾರ್ತಿಕ್ ಮೂರು ರನ್ ಓಡಿದರು.
ಆದರೆ ವಿರಾಟ್ ಬೌಲ್ಡ್ ಆದರೂ ರನ್ ನೀಡಿದ್ದಕ್ಕೆ ಪಾಕ್ ಆಟಗಾರರು ಅಂಪೈರ್ ಗೆ ಪ್ರಶ್ನಿಸಿದರು. ಅದು ಡೆಡ್ ಬಾಲ್ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದರು. ಆದರೆ ಅಂಪೈರ್ ರನ್ ನೀಡಿದರು. ಪಂದ್ಯದ ಬಳಿಕವೂ ಇದರ ಬಗ್ಗೆ ಹಲವು ಚರ್ಚೆಗಳು ನಡೆದಿದೆ.
ಇದನ್ನೂ ಓದಿ:ಬಾಂಗ್ಲಾದೇಶದಲ್ಲಿ ಸಿತ್ರಂಗ್ ಚಂಡಮಾರುತದ ಹಾವಳಿ: 9 ಮಂದಿ ಬಲಿ; ಭಾರತದ ಹಲವೆಡೆ ಭಾರೀ ಮಳೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಅಂಪೈರ್ ಸೈಮನ್ ಟಫೆಲ್, ಪಂದ್ಯದಲ್ಲಿ ಅಂಪೈರ್ ಗಳು ಸರಿಯಾದ ನಿರ್ಧಾರವನ್ನು ಮಾಡಿದ್ದಾರೆ ಎಂದು ಸಮರ್ಥನೆ ಮಾಡಿದ್ದಾರೆ.
“ಸ್ಟಂಪ್ ಗೆ ಬಡಿದ ಚೆಂಡು ಥರ್ಡ್ ಮ್ಯಾನ್ ಕಡೆದ ಹೋದಾಗ ಬ್ಯಾಟರ್ ಗಳು ಮೂರು ರನ್ ಗಳಿಸಿದರು. ಇದಕ್ಕೆ ಅಂಪೈರ್ ಬೈ ಸಿಗ್ನಲ್ ಮಾಡಿ ಸರಿಯಾದ ನಿರ್ಧಾರವನ್ನು ಮಾಡಿದರು. ಫ್ರೀ ಹಿಟ್ ನಲ್ಲಿ ಸ್ಟ್ರೈಕರ್ ನನ್ನು ಬೌಲ್ಡ್ ಆದರೂ ಔಟ್ ನೀಡುವಂತಿಲ್ಲ. ಆದ್ದರಿಂದ ಅದು ಡೆಡ್ ಬಾಲ್ ಆಗವುದಿಲ್ಲ. ಐಸಿಸಿ ಕಾನೂನುಗಳ ಅಡಿಯಲ್ಲಿ ಎಲ್ಲಾ ಷರತ್ತುಗಳನ್ನು ಪೂರೈಸಲಾಗಿದೆ.” ಎಂದು ಅನುಭವಿ ಟಫೆಲ್ ಅವರು ಬರೆದುಕೊಂಡಿದ್ದಾರೆ.