Advertisement

Mangaluru ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಬೆಂಗಳೂರಿನ ಸ್ಫೋಟಕ್ಕೂ ಸಾಮ್ಯ?

12:44 AM Mar 03, 2024 | Team Udayavani |

ಮಂಗಳೂರು: ಮಂಗಳೂರಿನಲ್ಲಿ 2022ರ ನ. 19ರಂದು ಸಂಭವಿಸಿದ್ದ ಕುಕ್ಕರ್‌ಬಾಂಬ್‌ ಸ್ಫೋಟಕ್ಕೂ ಶುಕ್ರವಾರ ಬೆಂಗಳೂರಿನ ಹೊಟೇಲ್‌ನಲ್ಲಿ ಸಂಭವಿಸಿದ ಸ್ಫೋಟಕ್ಕೂ ಸಾಮ್ಯ ಇತ್ತೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಮಂಗಳೂರು ಮತ್ತು ಬೆಂಗಳೂರು ಭಯೋತ್ಪಾದಕರ ಪ್ರಮುಖ ಗುರಿಯ ನಗರಗಳಾಗಿವೆಯೇ ಎಂಬ ಆತಂಕ ಉಂಟಾಗಿದೆ.

Advertisement

ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಮೈಸೂರಿನಿಂದ ಕುಕ್ಕರ್‌ ಬಾಂಬ್‌ ಸಮೇತವಾಗಿ ಮಂಗಳೂರಿಗೆ ಬಂದು ನಗರದ ಪಂಪ್‌ವೆಲ್‌ ಬಳಿ ಆಟೋರಿಕ್ಷಾ ಏರಿದ್ದ. ಅರ್ಧದಾರಿಯಲ್ಲಿ ಬರುತ್ತಿದ್ದಾಗ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡು ಶಾರೀಕ್‌ ಹಾಗೂ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸುತ್ತಿದ್ದು ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಸಿದೆ. ಇದು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಪ್ರಾಯೋಜಿತ ಕೃತ್ಯವಾಗಿತ್ತು. ಭಯೋತ್ಪಾದಕರು ಕದ್ರಿ ದೇವಸ್ಥಾನವನ್ನು ಗುರಿಯಾ ಗಿರಿಸಿಕೊಂಡಿದ್ದರು ಎಂಬುದು ಎನ್‌ಐಎ ತನಿಖೆಯಲ್ಲಿ ಗೊತ್ತಾಗಿತ್ತು.ಕುಕ್ಕರ್‌ ಬಾಂಬ್‌ನಲ್ಲಿ ಶಂಕಿತ ಉಗ್ರರ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ಸ್ಫೋಟ ಸಂಭವಿಸಿತ್ತು ಹಾಗೂ ಅದು ಜನನಿಬಿಡ ಪ್ರದೇಶದಲ್ಲಿ ಸ್ಫೋಟಿಸದೆ ಆಟೋ ರಿಕ್ಷಾದೊಳಗೆ ಸ್ಫೋಟಿಸಿತ್ತು. ಅದೃಷ್ಟವಶಾತ್‌ ಪ್ರಾಣಹಾನಿ ಸಂಭವಿಸಿರಲಿಲ್ಲ.

ಬೆಂಗಳೂರಿನಲ್ಲಿ ಆಶ್ರಯ
ಶಾರೀಕ್‌ ಮತ್ತು ಆತನ ಸಹಚರರು ಬೆಂಗಳೂರಿನಲ್ಲಿ ಐಸಿಸ್‌ ನೆಟÌರ್ಕ್‌ ಬೆಳೆಸುವುದಕ್ಕಾಗಿ ಆರ್‌.ಟಿ. ನಗರದಲ್ಲಿ ಮಸೀದಿಯೊಂದರ ಸಮೀಪ ಮನೆಯನ್ನು ಬಾಡಿಗೆ ಪಡೆದಿದ್ದರು. ತಿಂಗಳ ಬಾಡಿಗೆ ಏಳು ಸಾವಿರ ರೂ. ಮತ್ತು ಮುಂಗಡವಾಗಿ 70,000 ರೂ. ಕೊಟ್ಟಿದ್ದರು. ಕ್ರಿಪ್ಟೊ ಕರೆನ್ಸಿ ಮೂಲಕ ವ್ಯವಹಾರ ನಡೆಸುತ್ತಿದ್ದರು ಎಂಬುದನ್ನು ಕೂಡ ಎನ್‌ಐಎ ತನಿಖೆ ವೇಳೆ ಕಂಡುಕೊಂಡಿತ್ತು.

ಭದ್ರತೆ ಹೆಚ್ಚಾಗಲಿ
ಮಂಗಳೂರು ನಗರದಲ್ಲಿ ಭದ್ರತೆ ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯವಿದೆ. ರೈಲುನಿಲ್ದಾಣ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ ಕಚೇರಿ ಮೊದಲಾದೆಡೆ ಈ ಹಿಂದೆ ಮೆಟಲ್‌ ಡಿಟೆಕ್ಟರ್‌ಗಳು ಸಮರ್ಪಕವಾಗಿದ್ದವು. ಈಗ ಕೆಲವು ದುಸ್ಥಿತಿಯಲ್ಲಿವೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಬಗ್ಗೆಯೂ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ.

ಮಂಗಳೂರಿನಲ್ಲಿಯೂ ಪೊಲೀಸ್‌ ಕಣ್ಗಾವಲು ಹೆಚ್ಚಳ
ಮಂಗಳೂರು: ಬೆಂಗಳೂರಿನಲ್ಲಿ ಶುಕ್ರವಾರ ಬಾಂಬ್‌ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿಯೂ ಪೊಲೀಸ್‌ ಕಣ್ಗಾವಲು ಹೆಚ್ಚಿಸಲಾಗಿದೆ.

Advertisement

ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣ ಮೊದಲಾದ ಪ್ರಮುಖ ಜನನಿಬಿಡ ಸ್ಥಳಗಳಲ್ಲಿ ಪೊಲೀಸ್‌ ನಿಗಾ ಹೆಚ್ಚಿಸಲಾಗಿದೆ. “ಈಗಾಗಲೇ ಮಂಗಳೂರಿನಲ್ಲಿ ಪೊಲೀಸ್‌ ನಿಗಾ ಹೆಚ್ಚಿಸಲಾಗಿದೆ. ಬೀಟ್‌ ಕೂಡ ಬಲಪಡಿಸಲಾಗಿದ್ದು ನಿರಂತರ ಪೊಲೀಸ್‌ ಕಣ್ಗಾವಲಿರುತ್ತದೆ’ ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next