ಬೆಂಗಳೂರು: ಪ್ರತಿಷ್ಠಿತ ಸಿಮ್ ಕಂಪನಿಯೊಂದರ ಮಂದಗತಿಯ ಇಂಟರ್‌ನೆಟ್ ಸೇವೆ ಹಾಗೂ ದುರ್ಬಲ ಸಂಪರ್ಕ ವ್ಯವಸ್ಥೆಯಿಂದ ಬೇಸರಗೊಂಡ ವಕೀಲರೊಬ್ಬರು ಗ್ರಾಹಕ ನ್ಯಾಯಾಲಯದ ಕದತಟ್ಟಿದ್ದು, ಕಂಪನಿಗೆ 10 ಸಾವಿರ ರೂ. ದಂಡ, ಪರಿಹಾರವನ್ನು ನ್ಯಾಯಾಲಯ ವಿಧಿಸಿದೆ.
ಬೆಂಗಳೂರು ಮೂಲದ ರಘುರಾಮ್ ಪಿ.ಎಂಬುವರು ಮೂಲತಃ ವೃತ್ತಿಯಲ್ಲಿ ವಕೀಲರು. 2017ರ ಜೂನ್‌ನಲ್ಲಿ ಪ್ರತಿಷ್ಠಿತ ಕಂಪನಿಯ ಸಿಮ್ ಖರೀದಿಸಿ, ಬಳಸುತ್ತಿದ್ದರು. ಈ ನಡುವೆ ಸಿಮ್‌ನ ದುರ್ಬಲ ಸಂಪರ್ಕ ಹಾಗೂ ಮಂದಗತಿಯ ಇಂಟರ್‌ನೆಟ್ ವ್ಯವಸ್ಥೆ ಕುರಿತು 2020ರ ಜೂನ್‌ನಿಂದ ಡಿಸೆಂಬರ್ ನಡುವೆ ನಿರಂತರವಾಗಿ ನಾಲ್ಕು ಬಾರಿ ದೂರು ನೀಡಿದ್ದರು. ಈ ವೇಳೆ ಸಂಪರ್ಕವನ್ನು ಸರಿಪಡಿಸುವುದಾಗಿ ಕಂಪನಿ ಆಶ್ವಾಸನೆ ನೀಡಿದ್ದರೂ ಸಮಸ್ಯೆ ಸರಿಪಡಿಸಿಲ್ಲ ಎನ್ನುವುದಾಗಿ ದೂರಿದ್ದರು.
ಸಿಮ್ ಕಂಪನಿಯು 4ಜಿ ಸಾಮಾರ್ಥ್ಯ ಹೊಂದಿರುವ ಸಿಮ್ ಎಲ್‌ಟಿಇ 6.1ಎಂಬಿಪಿಎಸ್ ವೇಗವನ್ನು ನೀಡುವ ಸಾಮಾರ್ಥ್ಯವಿದ್ದರೂ, 0.6 ಎಂಬಿಪಿಎಸ್‌ನಿಂದ 2.4 ಎಂಬಿಪಿಎಸ್ ವೇಗವನ್ನು ಮಾತ್ರ ನೀಡುತ್ತಿದೆ. 32.23 ಎಂಬಿ ಒಂದು ಫೈಲ್ ಸಾಮಾಜಿಕ ಜಾಲತಾಣದಲ್ಲಿ ಆಪ್‌ಲೋಡ್ ಮಾಡಲು 6 ಗಂಟೆಯನ್ನು ಪಡೆದುಕೊಂಡಿದ್ದನ್ನು ಪ್ರಶ್ನಿಸಿ 2020ರ ನ.7ರಂದು ಪ್ರತಿಷ್ಠಿತ ಸಿಮ್ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಲಾಗಿತ್ತು.
ಪ್ರತಿಷ್ಠಿತ ಸಿಮ್ ಸಂಸ್ಥೆ ದೂರಿಗೆ ಪ್ರತಿಕ್ರಿಯಿಸಿ, “ಗ್ರಾಹಕ ಪ್ರೈಮ್ 555 ಪ್ಲ್ರಾನ್ ಆಳವಡಿಸಿಕೊಂಡಿದ್ದು, ಇದರಲ್ಲಿ ಕೇವಲ 1.5 ಜಿಬಿ ವರೆಗೆ ಇಂಟರ್‌ನೆಟ್ ಬಳಕೆಗೆ ಅವಕಾಶವಿದೆ. ಸುಮಾರು 3000 ನಿಮಿಷ ಕರೆ ಹಾಗೂ 100 ಸಂದೇಶಗಳನ್ನು ಕಳುಹಿಸಲು ಅವಕಾಶವಿದೆ. ಒಂದು ವೇಳೆ ದಿನ ಕೋಟಾ ಮುಗಿದು ಹೋದರೆ ಮುಂದಿನ 24ಗಂಟೆಗಳ ಬಳಿಕವಷ್ಟೆ ಹಿಂದಿನ ಸ್ಪೀಡ್ ಬರಲು ಸಾಧ್ಯವಿದೆ’ ಎಂದು ವಾದವನ್ನು ಮಂಡಿಸಿತ್ತು. ಇದೇ ವೇಳೆ ರಘುರಾಮ್ ಅವರು 2020ರ ನವೆಂಬರ್‌ನಿಂದ 2021ರ ಏಪ್ರಿಲ್ ತಿಂಗಳ ವರೆಗೆ ಸಿಮ್ ಬಳಕೆ ಮಾಡಿರುವ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಎರಡು ಕಡೆಯ ವಾದ ವಿವಾದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಪ್ರತಿಷ್ಠಿತ ಸಿಮ್ ಸಂಸ್ಥೆಯಿಂದ ಗ್ರಾಹಕ ಸೇವೆಯಲ್ಲಿ ವ್ಯತ್ಯಯವಾಗಿರುವುದು ಸ್ಪಷ್ಟವಾಗಿದ್ದು, ಕಂಪನಿಯು ದೂರುದಾರನಿಗೆ 5 ಸಾವಿರ ರೂ. ಪರಿಹಾರ ಮತ್ತು ನ್ಯಾಯಾಲಯ ವ್ಯಾಜ್ಯಕ್ಕೆ 5 ಸಾವಿರ ರೂ. ಸೇರಿದಂತೆ ಒಟ್ಟು 10 ಸಾವಿರ ರೂ. ಪರಿಹಾರವನ್ನು ನೀಡುವಂತೆ ಆದೇಶ ಹೊರಡಿಸಿದೆ.