Advertisement
ನಗರದ ವಿವಿಧೆಡೆ ಆಧಾರ್ ಕಾರ್ಡ್ ಹಾಗೂ ತಿದ್ದುಪಡಿ ಮಾಡಲಾಗುತ್ತಿದೆ. ಆದರೆ, ಸಾರ್ವಜನಿಕರ ದಟ್ಟಣೆ ಹಾಗೂ ದಿನದ ಕೆಲಸಗಳನ್ನು ಬಿಟ್ಟು ಬಂದು ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇರುವುದರಿಂದ ಸಾರ್ವಜನಿಕರು ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಬೇಗ ಆಗಲಿದೆ ಎಂದು ಆಗಮಿಸುತ್ತಾರೆ. ಆದರೆ, ಅದನ್ನೇ ಬಂಡವಾಳ ಮಾಡಿಕೊಂಡಿರುವ ಬಿಎಸ್‌ಎನ್‌ಎಲ್ ಅಧಿಕಾರಿಗಳು ಮಾರ್ಕೆಟಿಂಗ್ ಹೆಸರಿನಲ್ಲಿ ಸಿಮ್ ಖರೀದಿಸುವ ಕಡ್ಡಾಯ ನಿಯಮ ಮಾಡಿದ್ದಾರೆ. ಹೊಸದಾಗಿ ಆಧಾರ್ ಕಾರ್ಡ್ ಅಥವಾ ತಿದ್ದುಪಡಿ ಮಾಡಿಸಲು ನಗರದ ಬಿಎಸ್‌ಎನ್‌ಎಲ್ ಕಚೇರಿಗೆ ಆಗಮಿಸುವ ಸಾರ್ವಜನಿಕರು ಕಡ್ಡಾಯವಾಗಿ ಸಿಮ್ ಕಾರ್ಡ್ ಖರೀದಿಸಬೇಕಾಗಿದೆ. ಇಲ್ಲದಿದ್ದರೆ ಆಧಾರ್ ಕಾರ್ಡ್ ಆಗಲೀ, ತಿದ್ದುಪಡಿಯಾಗಲೀ ಮಾಡಿಕೊಡುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ಸಮಜಾಯಿಷಿ ನೀಡುತ್ತಾರೆ.
Related Articles
Advertisement
ಕಚೇರಿ ಸೇರಿದಂತೆ ನಗರದ 4-5 ಕಡೆ ಮಾತ್ರ ಹೊಸದಾಗಿ ಆಧಾರ್ ಹಾಗೂ ತಿದ್ದುಪಡಿ ಮಾಡಲಾಗುತ್ತದೆ. ಆದರೆ, ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದರಿಂದ ನೂಕು ನುಗ್ಗಲು ಇರುತ್ತದೆ. ಇದರಿಂದ ದಿನಗಟ್ಟಲೇ ಕಾಯಬೇಕಾಗಿದೆ. ಆದರೆ, ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಜನದಟ್ಟಣೆ ಕಡಿಮೆ ಇರುವುದರಿಂದಇಲ್ಲಿಗೆ ಬಂದರೆ ಸಿಮ್ ಕಾರ್ಡ್ ಖರೀದಿಸಲೇಬೇಕು ಎಂದು ಸಾರ್ವಜನಿಕರ ಮೇಲೆ ಒತ್ತಡ ಹಾಕುತ್ತಾರೆ.
ದಿನಕ್ಕೆ 20 ಮಂದಿಗೆ ಮಾತ್ರ ಅವಕಾಶ: ಪ್ರತಿದಿನ ಕೇವಲ 20 ಮಂದಿಗೆ ಮಾತ್ರ ಆಧಾರ್ ತಿದ್ದುಪಡಿ ಮಾಡಲಾಗುತ್ತದೆ. ಬೆಳಗ್ಗೆ ಕಚೇರಿ ತೆರೆಯುತ್ತಿದ್ದಂತೆ ಬರುವ 20 ಮಂದಿ ಸಾರ್ವಜನಿಕರಿಗೆ ಟೋಕನ್ ವಿತರಿಸಲಾಗುತ್ತದೆ. ಆ ನಂತರ ಬರುವ ಯಾರಿಗೂ ತಿದ್ದುಪಡಿ ಮಾಡುವುದಿಲ್ಲ. ಆ 20 ಮಂದಿಗೂ ಸಮಯ ನಿಗದಿ ಮಾಡುವ ಸಿಬ್ಬಂದಿ ದಿನಗಟ್ಟಲೇ ಕಾಯಿಸುತ್ತಾರೆ.
ದಿನಗಟ್ಟಲೇ ಕಾಯಬೇಕು: ಸಿಮ್ ಖರೀದಿಗೆ ಫೋಟೋ, ದಾಖಲೆಗಳು ಸರಿಯಾಗಿಲ್ಲದಿದ್ದರೆ ಮತ್ತೆ ಒಂದು ದಿನ ಕಾಯಬೇಕು. ಆಧಾರ್ ಕಾರ್ಡ್ ಅಥವಾ ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆ ಸಲ್ಲಿಸದಿದ್ದರೂ ಸಿಮ್ ಖರೀದಿಗೆ ಮಾತ್ರ ದಾಖಲೆಗಳನ್ನು ನೀಡಲೇಬೇಕು.
ಏನಾದರೂ ಮಾಡಿಕೊಳ್ಳಿ: ನಮ್ಮ ಬಳಿ ಈಗಾಗಲೇ ಸಿಮ್ ಇದೆ ಎಂದು ಹೇಳಿದರೂ ಸಿಬ್ಬಂದಿ ಮಾತ್ರ ಸಿಮ್ ಖರೀದಿಸದಿದ್ದರೆ, ಆಧಾರ್ ಕಾರ್ಡ್ ತಿದ್ದುಪಡಿ ಮಾಡುವುದಿಲ್ಲ. ಸಿಮ್ ಖರೀದಿಸಿ ಬೇರೆ ಯಾರಿಗಾದರೂ ಕೊಡಿ, ಇಲ್ಲದಿದ್ದರೆ ವ್ಯಾಲಿಡಿಟಿ ಇರುವವರೆಗೆ ಉಪಯೋಗಿಸಿ ನಂತರ ಬಿಸಾಡಿ ನಮಗೇನು ಎಂದು ನಿರ್ಲಕ್ಷ್ಯದಿಂದ ಮಾತನಾಡುತ್ತಾರೆ. ಆದರೆ, ಸಾರ್ವಜನಿಕರ ಬಳಿ ಈಗಾಗಲೇ ಸಿಮ್ ಇದ್ದು, ಅದೇ ನಂಬರ್ ಅನ್ನು ಆಧಾರ್ ಕಾರ್ಡ್, ಬ್ಯಾಂಕ್, ಅಡುಗೆ ಅನಿಲ ಖರೀದಿ ಸೇರಿದಂತೆ ಇನ್ನಿತರ ಕಡೆ ನೀಡಿದ್ದಾರೆ. ಇದನ್ನು ತೆಗೆದುಕೊಂಡು ಏನು ಮಾಡಲಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನನ್ನ ಬಳಿ ಈಗಾಗಲೇ ಸಿಮ್ ಇದೆ. ನನ್ನ ಹಾಗೂ ನನ್ನ ಮಗಳ ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ನಂಬರ್ ತಿದ್ದುಪಡಿ ಮಾಡಿಸಲು ಬಂದರೆ, ಸಿಮ್ ಖರೀದಿಸಲೇಬೇಕು. ಅದಕ್ಕಾಗಿ 260 ರೂ. ಕೊಟ್ಟು 2 ಸಿಮ್ ಖರೀದಿಸಿದ್ದೇನೆ. ನನ್ನ ಮಗಳ ಫೋಟೋ ಇಲ್ಲದಿರುವುದರಿಂದ ನನ್ನ ಫೋಟೋ ಕೊಟ್ಟಿದ್ದೇನೆ. ನಾಳೆ ಬನ್ನಿ ಆಧಾರ್ ತಿದ್ದುಪಡಿ ಮಾಡಲಾಗುವುದು ಎಂದು ಹೇಳುತ್ತಾರೆ. – ಬೆಳ್ಳುಂಡೆಗೆರೆ ಗ್ರಾಮಸ್ಥ
ಆಧಾರ್ ಕಾರ್ಡ್ ಮತ್ತು ತಿದ್ದುಪಡಿ ಮಾಡುವುದನ್ನು ಖಾಸಗಿಯವರಿಗೆ ನೀಡಲಾಗಿದೆ. ಆದರೆ, ಅಲ್ಲಿ ಹಣದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಬಿಎಸ್‌ಎನ್‌ಎಲ್ ಕಚೇರಿಯಲ್ಲಿಯೇ ಮಾಡಲಾಗುತ್ತಿದೆ. ಆದರೆ, ಬಿಎಸ್‌ಎನ್‌ಎಲ್ ಅಧಿಕಾರಿಗಳು ಮಾರ್ಕೆಟಿಂಗ್ ಮಾಡಲು ಸಾರ್ವಜನಿಕರು ಸಿಮ್ ಖರೀದಿಸಬೇಕು ಎಂಬ ನಿಯಮ ಮಾಡಿ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. – ಉಮಾಕಾಂತ್, ನಗರ ನಿವಾಸಿ
ಮಾರ್ಕೆಟಿಂಗ್ ನಡೆಯುತ್ತಿರುವುದ ರಿಂದ ಬರುವ ಸಾರ್ವಜನಿಕರಿಗೆ ಸಿಮ್ ಕಡ್ಡಾಯವಾಗಿ ಪಡೆಯಲೇಬೇಕು ಎಂದು ಒತ್ತಾಯ ಮಾಡುತ್ತಿಲ್ಲ. ಅಗತ್ಯವಿರುವವರು ತೆಗೆದುಕೊಳ್ಳಬಹುದು. ಮಕ್ಕಳಿಗೂ ತೆಗೆದುಕೊಳ್ಳಿ ಎಂದು ಹೇಳುತ್ತಿಲ್ಲ. ಇದೊಂದು ಮಾರ್ಕೆಟಿಂಗ್ ಅಷ್ಟೆ. ಸಿಮ್ ತೆಗೆದುಕೊಂಡವರಿಗೆ ತಕ್ಷಣವೇ ತಿದ್ದುಪಡಿ ಮಾಡಿಕೊಡಲಾಗುವುದು. – ನೀತಾ, ಉಸ್ತುವಾರಿ ಅಧಿಕಾರಿ, ಬಿಎಸ್‌ಎನ್‌ಎಲ್, ಮಂಡ್ಯ