ಮಂಗಳೂರು: ಫಾದರ್ ಮುಲ್ಲರ್ ಸಂಸ್ಥೆ ಅನೇಕ ಯುವ ಹಾಗೂ ಉತ್ಸಾಹಿ ವೈದ್ಯರನ್ನು ಸಮಾಜಕ್ಕೆ ನೀಡಿದೆ. ಸಂಸ್ಥೆಯ ಸೇವೆ ದೇಶ ವಿದೇಶಗಳಲ್ಲಿ ವ್ಯಾಪಿಸಿದ್ದು, ಸಹಸ್ರಾರು ರೋಗಿಗಳಿಗೆ ನೆರವಾಗಿದೆ. ಇದು ವೈದ್ಯಕೀಯ ಶಿಕ್ಷಣದ ಜತೆಗೆ ನೈತಿಕ ಮೌಲ್ಯ, ಸೇವಾ ಮನೋಭಾವ ಬೆಳೆಸುವ ಸಂಸ್ಥೆಯಾಗಿದೆ ಎಂದು ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ಡಾ| ಗಾನಾ ಪಿ. ಕುಮಾರ್ ಹೇಳಿದರು.
ಕಂಕನಾಡಿ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಸೋಮವಾರ ನಡೆದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಬೆಳ್ಳಿಹಬ್ಬ ವರ್ಷಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಜೀವನ ಭವಿಷ್ಯಕ್ಕೆ ಬುನಾದಿ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಎಂಬಿಬಿಎಸ್ ಪದವಿ ಹಂತದಲ್ಲಿ ಯುವ ವೈದ್ಯರು ವೃತ್ತಿ ಶಿಕ್ಷಣದ ಜತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವಕಾಶವಿದೆ. ಅತ್ಯುತ್ತಮ ಸೇವೆಯ ಮೂಲಕ ರೋಗಿಯನ್ನು ಗುಣಪಡಿ ಸುವುದೇ ಶ್ರೇಷ್ಠ ಸಾಧನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲ ವಿದ್ಯಾರ್ಥಿಗಳಲ್ಲಿ ಇರಬೇಕು. ಶಿಕ್ಷಕರ ಬೋಧನೆಗಿಂತಲೂ ಹೆಚ್ಚಿನ ವಿಷಯ ಸಂಗ್ರಹ, ಗ್ರಹಿಕೆ ಅಗತ್ಯ ಎಂದರು. ಗುಣಮಟ್ಟದ ಸೇವೆಯಿಂದ ಪ್ರಸಿದ್ಧಿ ಗಳಿಸಿರುವ ಸಂಸ್ಥೆ ಕುಷ್ಠರೋಗ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಶ್ಲಾ ಸಿದರು.
ಸಂಸ್ಥೆಯ ಡೀನ್ ಡಾ| ಆ್ಯಂಟನಿ ಸಿಲ್ವನ್ ಡಿ’ಸೋಜಾ ಬೆಳ್ಳಿಹಬ್ಬ ವರ್ಷದಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ವಿವರ ನೀಡಿದರು. ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ನಿರ್ದೇಶಕ ವಂ| ರಿಚರ್ಡ್ ಅಲೋಶಿಯಸ್ ಕುವೆಲ್ಹೊ ಸ್ವಾಗತಿಸಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ವಂ| ಅಜಿತ್ ಬಿ. ಮಿನೇಜಸ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಆಡಳಿತಾಧಿಕಾರಿ ವಂ| ಜಾರ್ಜ್ ಜೀವನ್ ಸಿಕ್ವೇರ, ಸಹಾಯಕ ಆಡಳಿತಾಧಿಕಾರಿ ವಂ| ನೆಲ್ಸನ್ ಧೀರಜ್ ಪಾಸ್, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ| ಸಿಲ್ವೆಸ್ಟರ್, ವೈದ್ಯಕೀಯ ಅಧೀಕ್ಷಕ ಡಾ| ಉದಯ್ ಕುಮಾರ್ ಕೆ., ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ| ಪ್ರಭು ಕಿರಣ್, ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಪ್ರಾಂಶುಪಾಲೆ ಡಾ| ಹಿಲ್ಡಾ, ಫಿಸಿಯೋಥೆರಫಿ ಕಾಲೇಜು ಪ್ರಾಂಶುಪಾಲೆ ಪ್ರೊ| ಚರಿಷ್ಮಾ, ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಸಿ| ಜೆಸಿಂತಾ, ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಸಿ| ಧನ್ಯಾ ದೇವಸ್ಯ, ಫಾದರ್ ಮುಲ್ಲರ್ ಸ್ಪೀಚ್ ಆ್ಯಂಡ್ ಲ್ಯಾಂಗ್ವೇಜ್ ಪೆಥಾಲಜಿ ಕಾಲೇಜಿ ಪ್ರಾಂಶುಪಾಲೆ ಸಿ| ಸಿಂಥಿಯಾ ಸಾಂತುಮಾಯರ್ ಉಪಸ್ಥಿತರಿದ್ದರು.