Advertisement

ಗೀತ ನಾದ ವೈಭವದಲ್ಲಿ ಮೆರಗು ಪಡೆದ ರಜತ ಸಂಭ್ರಮ ಸಮಾರೋಪ

08:03 PM Apr 18, 2019 | mahesh |

ಸಂಗೀತ ಪರಿಷತ್‌ ಮಂಗಳೂರು ಇವರ ರಜತ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಕಾರ್ಯಕ್ರಮಗಳು ಸಂಗೀತ ರಸಿಕರಿಗೆ ಮೃಷ್ಟಾನ್ನ ಭೋಜನವನ್ನು ಉಣಬಡಿಸಿದವು. ಬೆಳಗ್ಗೆ ಮೈಸೂರು ನಾಗರಾಜ್‌ ಅವರ ಪಿಟೀಲು ವಾದನ, ಮಧ್ಯಾಹ್ನ ಘಟಂವಾದಕ ವಾಳಪಳ್ಳಿ ಕೃಷ್ಣಕುಮಾರ್‌ ಅವರ ವಿಶಿಷ್ಟವಾದ ಮೋಹನ ಘಟ ನಾದಂ ಮತ್ತು ಸಂಜೆ ಸಂದೀಪ್‌ ನಾರಾಯಣ್‌ ಅವರ ಸಂಗೀತ ಕಛೇರಿಯನ್ನು ಆಲಿಸುವ ಅವಕಾಶ ಲಭ್ಯವಾಯಿತು.

Advertisement

ನಾಗರಾಜ್‌ ತಮ್ಮ ಪುತ್ರ ಮೈಸೂರು ಕಾರ್ತಿಕ್‌ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಪಿಟೀಲು ವಾದನದಿಂದ ಶ್ರೋತೃಗಳನ್ನು ರಂಜಿಸಿದರು. ಸಾವೇರಿ ವರ್ಣದೊಂದಿಗೆ ಆರಂಭಿಸಿ ತ್ಯಾಗರಾಜರ ಆಂದೋಳಿಕದ ರಾಗಸುಧಾ ರಸವನ್ನು ಅಪ್ಯಾಯಮಾನವಾಗಿ ನಿರೂಪಿಸಿದರು. ಆಲಾಪನೆಯೊಂದಿಗೆ ತ್ಯಾಗರಾಜರ ಪೂರ್ವಿಕಲ್ಯಾಣಿಯ ಪರಲೋಕ ಸಾಧನಮೆ ಮನಸಾ ಮತ್ತು ಸುಬ್ಬರಾಯ ಶಾಸ್ತ್ರಿಗಳ ಜನನೀ ನಿನುವಿನಾಗಳು ಮಾಧುರ್ಯಪೂರ್ಣವಾಗಿ ಮೂಡಿಬಂತು. ತ್ವರಿತಗತಿಯ ಕಾಪಿ ನಾರಾಯಣೀಯ ಸರಸ ಸಾಮಧಾನವನ್ನು ನಿರೂಪಿಸಿ ಶಾಮಾ ಶಾಸಿŒಗಳ ಶಂಕರಾಭರಣದ ಸರೋಜದಳ ನೇತ್ರೆಯಲ್ಲಿ ರಾಗ, ಸ್ವರಗಳ ಉತ್ತಮ ಆರೈಕೆ ನೀಡಿದರು. ಸಮರ್ಥ ರಾಗಾಲಾಪನೆ ಮಾಡಿ ಆದಿ ತಾಳದಲ್ಲಿ ಹಿಂದೋಳ ರಾಗದ ರಾಗಂ ತಾನಂ ಪಲ್ಲವಿಯಲ್ಲಿ ನಾಟಕುರುಂಜಿ, ಬಿಂದುಮಾಲಿನಿ ಮತ್ತು ರಂಜನಿಯ ರಾಗಮಾಲಿಕೆಗಳು ರಸಿಕರನ್ನು ರಂಜಿಸಿದುವು. ಮನವೇ ಮಂತ್ರಾಲಯ ಮತ್ತು ಭಾಗ್ಯಾದ ಲಕ್ಷ್ಮೀ ಬಾರಮ್ಮವನ್ನು ನುಡಿಸಿ ಮಂಗಳ ಹಾಡಿದರು. ಪೂಂಗುಳಂ ಸುಬ್ರಹ್ಮಣಿಯನ್‌ ಅವರ ಮೃದಂಗ ಮತ್ತು ವಾಳಪಳ್ಳಿ ಕೃಷ್ಣ ಕುಮಾರ್‌ ಅವರ ಘಟ ಲಯಪೂರ್ಣವಾಗಿ ಮೂಡಿಬಂತು.

ಅಪರಾಹ್ನ ರಸಿಕರಿಗೆ ಮೊದಲ ಬಾರಿಗೆ “ಘಟ’ ವಾದನದ ಲಯವಿನ್ಯಾಸ ನೋಡುವ, ಆಲಿಸುವ ಅವಕಾಶ ದೊರಕಿತು. ವಾಳಪಳ್ಳಿ ಕೃಷ್ಣಕುಮಾರ್‌ ತಮ್ಮ ಆರು ಮಂದಿ ಶಿಷ್ಯರ ತಂಡದೊಂದಿಗೆ ಮೋಹನ ಘಟ ನಾದದ ಮೂಲಕ ಅದ್ಭುತ ಲೋಕಕ್ಕೆ ಕರೆದೊಯ್ದರು. ಮೊದಲು ಲಯ ವಿನ್ಯಾಸ ನಿರೂಪಿಸಿ ಮೋಹನ ರಾಗದಲ್ಲಿ ಸ್ವಾಗತಮ್‌ ಕೃಷ್ಣ ನುಡಿಸಿದರು. ಕೇರಳದ ಖ್ಯಾತ ಪಂಚಾರಿ ಮೇಳದ 5ನೇ ಕಾಲದ ನುಡಿಸುವಿಕೆ ಉತ್ತಮವಾಗಿ ಮೂಡಿಬಂತು. ನಂತರ ರೇವತಿ ರಾಗವನ್ನು ಪ್ರಸ್ತುತಪಡಿಸಿ ಮೊಹ್ರ ಮತ್ತು ಕೊರವೈ ನುಡಿಸಿ ಕಾರ್ಯಕ್ರಮ ಮುಗಿಸಿದರು.

ಸಂಜೆಯ ಕಛೇರಿಗೆ ಮೆರುಗು ನೀಡಿದವರು ಸಂದೀಪ್‌ ನಾರಾಯಣ್‌. ಉತ್ತಮ ಪಾಠಾಂತರ, ಆಕರ್ಷಕ ಕಂಠಸಿರಿ, ಪ್ರಯೋಗಶೀಲ ಮನೋಧರ್ಮ ಹೊಂದಿದ್ದ ಈ ಕಛೇರಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಕಲ್ಯಾಣಿ ಅಟ್ಟತಾಳ ವರ್ಣ ಮತ್ತು ಗೌಳ ರಾಗದ ಮುತ್ತುಸ್ವಾಮಿ ದೀಕ್ಷಿತರ ಶ್ರೀಮಹಾಗಣಪತಿ ರವತುಮಗಳನ್ನು ಅಂದವಾಗಿ ಪ್ರಸ್ತುತಪಡಿಸಿ, ಪುರಂದರದಾಸರ ಮೋಹನರಾಗದ ಹರಿಯನ್ನು ಹರಿಯನ್ನು ಪ್ರಾಣಿಯನ್ನು ಸಮರ್ಥ ಆಲಾಪನೆ, ನೆರವಲ್‌ ಮೂಲಕ ನಿರೂಪಿಸಿದರು. ವಿಜಯಶ್ರೀಯ ವರ ನಾರದವನ್ನು ಚೊಕ್ಕವಾಗಿ ಹಾಡಿ, ತ್ಯಾಗರಾಜರ ಮಧ್ಯಮಾವತಿಯ ರಾಮಕಥಾ ಸುಧಾವನ್ನು ವಿದ್ವತೂ³ರ್ಣ ಆಲಾಪನೆ, ಪ್ರಯೋಗಶೀಲ ಸ್ವರಕಲ್ಪನೆಗಳಿಂದ ವೈವಿಧ್ಯವಾಗಿ ನಿರೂಪಿಸಿದರು. ಶಾಮಾ ಶಾಸ್ತ್ರಿಗಳ ಕಲ್ಕಡದ ಪಾರ್ವತಿ ನಿನು ನೆ ಯ ನಂತರ ರಾಗಂ ತಾನಂ ಪಲ್ಲವಿಗಾಗಿ ಆಯ್ದ ರಾಗ ಪ್ರಧಾನವಾಗಿ ಬಾಗೇಶ್ರೀ. ರಾಗವನ್ನು ಎಳೆಯಾಗಿ ಬಿಡಿಸಿದ ಕಲಾವಿದರು ತಾನಂ ನಂತರ ಪಲ್ಲವಿ ವಾದಿ ಮುಖ ಬ್ರಹ್ಮ ವಾಮ ಭಾಗೇಶ್ರೀ ಲಕ್ಷ್ಮೀ ಪಾಹಿ ಸದಾವನ್ನು ಆಕರ್ಷಕವಾಗಿ ನಿರೂಪಿಸಿದರು. ರಾಗಮಾಲಿಕೆಯಲ್ಲಿ ಶುಭ ಪಂತುವರಾಳಿ, ಪುನ್ನಾಗವರಾಳಿ, ವಾಸಂತಿ ರಾಗಗಳ ಸ್ವರ ಕಲ್ಪನೆಗಳು ಗಾಯಕನ ಸಾಮರ್ಥಯವನ್ನು ಒರೆಗೆ ಹಚ್ಚಿತು. ಗೋಪಾಲಕೃಷ್ಣ ಭಾರತಿಯವರ ಬೇಹಾಗ್‌ನ ಆಡುಂ ಚಿದಂಬರಮೊ, ಪುರಂದರದಾಸರ ಜಗದೋದ್ದಾರನಾ, ಸದಾಶಿವ ಬ್ರಹೆದ್ರರ ದುರ್ಗಾದ ಗಾಯತಿ ವನಮಾಲೀ ಗಳು ಭಾವ ಪೂರ್ಣವಾಗಿ ಮೂಡಿಬಂದುವು. ಪಿಟೀಲಿನಲ್ಲಿ ಅವನೀಶ್ವರಮ್‌ ಎಸ್‌. ಆರ್‌. ವಿನು ಕಲಾವಿದರನ್ನು ಅನುಸರಿಸುವಲ್ಲಿ ಸ್ವಲ್ಪ ಹಿಂದೆ ಬಿದ್ದರೇನೊ ಎಂದು ಎನಿಸಿದರೆ, ಬೆಳಗಿನ ಕಛೇರಿಗಿಂತ ಭಿನ್ನ ಕಲಾವಿದರೇನೊ ಎನಿಸುವಷ್ಟು ವೈಶಿಷ್ಟವಾಗಿ ಕಲಾವಿದರನ್ನು ಅನುಸರಿಸಿ ಲಯಗಾರಿಕೆ ಪ್ರಸ್ತುತಪಡಿಸಿದ ಪೂಂಗುಳಮ್‌ ಸುಬ್ರಹ್ಮಣಿಯನ್‌ ಮತ್ತು ವಾಳಪಳ್ಳಿ ಕೃಷ್ಣಕುಮಾರ್‌ ಪ್ರಶಂಸಾರ್ಹರು.

ಕೃತಿ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next