Advertisement

ಹೊಲ್ತಿ ಕೋಟಿ ಮಹಾತಾಯಿಗೆ ಬೆಳ್ಳಿಕಿರೀಟ

11:24 AM Jan 26, 2020 | Suhan S |

ಧಾರವಾಡ: ವೃದ್ಧ ತಂದೆ-ತಾಯಿಯನ್ನು ಕೊನೆಯವರೆಗೂ ಪೋಷಿಸುವ ಜವಾಬ್ದಾರಿಯನ್ನು ಮಕ್ಕಳು ಹೊತ್ತುಕೊಳ್ಳಬೇಕು. ಅಂದಾಗ ಮಾತ್ರ ತಾಯಿ ಋಣ ತೀರಿಸುವ ಪ್ರಯತ್ನ ಮಾಡಿದಂತಾಗುತ್ತದೆ ಎಂದು ದೇವರಹುಬ್ಬಳ್ಳಿ ಸಿದ್ಧಾಶ್ರಮದ ಶ್ರೀ ಸಿದ್ಧಶಿವಯೋಗಿಗಳು ಹೇಳಿದರು.

Advertisement

ಹೊಲ್ತಿಕೋಟಿ ಗ್ರಾಮದಲ್ಲಿ ಶನಿವಾರ ನಡೆದ ಮಲ್ಲಮ್ಮ ಕೋರಿ ಜನ್ಮಶತಮಾನೋತ್ಸವ ಮತ್ತುಬೆಳ್ಳಿ ಕಿರೀಟಧಾರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಜಗತ್ತಿನಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಎಂದೂ ಎಲ್ಲಿಯೂ ಹುಟ್ಟಲು ಸಾಧ್ಯವಿಲ್ಲ. ಕೊನೆಯವರೆಗೂ ತಾಯಿ ಮಕ್ಕಳ ಶ್ರೇಯಸ್ಸನ್ನೇ ಬಯಸಿದರೂ ಮಕ್ಕಳು ಮಾತ್ರ ಅದನ್ನು ಅರಿಯದೇ ಹೋಗುತ್ತಿದ್ದಾರೆ. ಇದು ಸಾಮಾಜಿಕದುರಂತವಾಗಿ ಪರಿಣಮಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಹಳ್ಳಿಗಳಲ್ಲೂ ತಂದೆ-ತಾಯಿ ನಿರ್ಲಕ್ಷ್ಯ ಹೆಚ್ಚುತ್ತಿದೆ.  ಇಂತಹ ದಿನಗಳಲ್ಲಿ ಮಹದೇವಪ್ಪ ಕೋರಿ ಅವರು ಸುತ್ತಲಿನ ಹಳ್ಳಿಯ ಜನರಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ ಎಂದರು.

ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ತಾಯಿಗಿಂತ ಬಂಧುವಿಲ್ಲ ಎನ್ನುವ ಮಾತು ಸತ್ಯ. ಇಂದಿನ ದಿನಗಳಲ್ಲಿ ಓದಿದವರೇ ಹೆಚ್ಚು ತಂದೆ-ತಾಯಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇಂತಹ ದಿನಗಳಲ್ಲಿ ತಾಯಿಗೆ ತುಲಾಭಾರ ಮಾಡಿ ಬೆಳ್ಳಿ ಕಿರೀಟ ತೊಡಿಸುವ ಮಕ್ಕಳಿರುವುದು ಹೆಮ್ಮೆಯ ವಿಚಾರ. ಇದು ಇತರರಿಗೂ ಮಾದರಿ ಎಂದು ನುಡಿದರು.

ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತಾಯಿಗೆ ಸಮನಾದದ್ದು ಜಗತ್ತಿನಲ್ಲಿ ಯಾವುದೂ ಇಲ್ಲ. ಜಗತ್ತಿನಲ್ಲಿ ಇಂದಿಗೂತಾಯಿ ಸರಿಯಾಗಿ ಇದ್ದಾಳೆ. ಮಕ್ಕಳು ಕೆಡುತ್ತಿದ್ದು, ಅವರೆಲ್ಲ ಸುಧಾರಣೆಗೆ ತಮ್ಮ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳುವ ಸತ್‌ ಸಂಪ್ರದಾಯ ಹೆಚ್ಚಬೇಕಿದೆ ಎಂದರು. ಇಂಗಳೇಶ್ವರದ ವಿರಕ್ತಮಠದ ಚೆನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮನಗುಂಡಿಯ ಚೆನ್ನಯ್ಯನಗಿರಿಯ ಬಸವಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ಹೊಲ್ತಿಕೋಟಿ, ನಿಗದಿ, ಬಾಡ, ದೇವರಹುಬ್ಬಳ್ಳಿ, ಮುರಕಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶತಾಯುಷಿ ಮಲ್ಲಮ್ಮ ಕೋರಿ ಅವರಿಗೆ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next