Advertisement

ಬೆಳ್ಳಿ ಗೆಜ್ಜೆಯ ಗಜಲ್‌

06:00 AM Jul 04, 2018 | |

ಅವತ್ತು ಎಂದಿನಂತೆ ಶಾಲೆ ಬಿಟ್ಟವಳು ಕುಣಿಯುತ್ತ, ಹಾರುತ್ತಾ ಗೇಟು ತೆರೆದು ಒಳಗೆ ಬರುತ್ತಿದ್ದಾಗ ನನ್ನ ಒಂದು ಕಾಲಲ್ಲಿ ಗೆಜ್ಜೆ ಇರಲಿಲ್ಲ. ಯಾವಾಗ ನನ್ನ ಕಾಲಿನಿಂದ ಉದುರಿತ್ತೋ ಗೊತ್ತಾಗಲಿಲ್ಲ. ಹೆದರಿಕೆ, ಅಳು ಎಲ್ಲವೂ ಒಟ್ಟಿಗೆ ಬಂತು. ಗಟ್ಟಿಯಾಗಿ ಅಳಲೂ ಹೆದರಿಕೆ. ವಿಷಯ ಗೊತ್ತಾಗಿಬಿಟ್ಟರೆ ಅಂತ…

Advertisement

ಸಂಜೆ ಬಾಲ್ಕನಿಯಲ್ಲಿ ನಿಂತು ಹೊರಗೆ ನೋಡುತ್ತಿದ್ದೆ. ಎರಡು ವರ್ಷದ ಮಗುವೊಂದು ಓಡುತ್ತಿದ್ದರೆ, ಅದರ ಕಾಲಲ್ಲಿದ್ದ ಗೆಜ್ಜೆ “ಕಿಣಿ ಕಿಣಿ’ ಶಬ್ದ ಮಾಡುತ್ತಿತ್ತು. ಮಗು ನಮ್ಮ ಹಿಂದೆಯೇ ಓಡಿಬರುತ್ತಿತ್ತು. ಮಗುವಿನ ವೇಷಭೂಷಣ ನೋಡಿ,  ಮಗುವು ಗಂಡೋ, ಹೆಣ್ಣೋ ಎನ್ನುವ ಅನುಮಾನ ಬಂದರೂ, ಕಾಲಲ್ಲಿದ್ದ ಗೆಜ್ಜೆಯಿಂದಾಗಿ ಅದು ಹೆಣ್ಣುಮಗುವೇ ಎಂದು ಧೃಡವಾಯಿತು. ಆಗ ಸುಮ್ಮನೆ ಪ್ರಶ್ನೆಯೊಂದು ಮೂಡಿತು. ಹೆಣ್ಣು ಮಕ್ಕಳೇ ಏಕೆ ಗೆಜ್ಜೆ ಧರಿಸುತ್ತಾರೆ ಎಂದು! 

  ಹೆಣ್ಣು, ಯಾತಕ್ಕಾಗಿ ಗೆಜ್ಜೆ ಕಟ್ಟಿಕೊಂಡಿರಬಹುದು? ಕುತ್ತಿಗೆಯ ಸರ, ಕೈಯ ಬಳೆ, ಕಾಲಿನ ಗೆಜ್ಜೆ ಎಲ್ಲವೂ ಒಂದು ಕಾಲದಲ್ಲಿ ಗಂಡು- ಹೆಣ್ಣಿಗೆ ಹಾಕಿದ ಸಂಕೋಲೆಯಾಗಿದ್ದು, ಅದೇ ಕ್ರಮೇಣ ಅಲಂಕಾರಿಕ ವಸ್ತುವಾಗಿರಬಹುದೇ? ಅಥವಾ ಹೆಣ್ಣು ತನ್ನ ಅಸ್ತಿತ್ವವನ್ನು ಸಾರಲು ಘಲ ಘಲ ಶಬ್ದ ಬರುವಂಥ ಬಳೆಗಳನ್ನು, ಕಿಣಿ ಕಿಣಿ ಎನ್ನುವ ಗೆಜ್ಜೆಯನ್ನು ಹಾಕಿಕೊಂಡಳೇ? ಪ್ರಾಣಿ ಪ್ರಪಂಚದಲ್ಲಿ ಕೆಲವು ಗಂಡು ಪ್ರಾಣಿ- ಪಕ್ಷಿಗಳು ಹೆಣ್ಣನ್ನು ಆಕರ್ಷಿಸಲು ವಿಚಿತ್ರ ಶಬ್ದ ಮಾಡುತ್ತವಂತೆ. ಅದೇ ರೀತಿ ಹೆಣ್ಣು ಮಕ್ಕಳೂ ಪುರುಷರನ್ನು ಆಕರ್ಷಿಸಲು ಶಬ್ದ ಮಾಡುವ ಗೆಜ್ಜೆಯನ್ನು ಹಾಕುತ್ತಾರೆಂದು ಕೆಲವರ ಅಂಬೋಣ. ಅದೇನೇ ಇರಲಿ, ಹೆಣ್ಣು ಅಲಂಕಾರ ಪ್ರಿಯೆ. ಆಕೆಯ ಅಲಂಕಾರದ ವಸ್ತುಗಳಲ್ಲಿ ಗೆಜ್ಜೆಯೂ ಒಂದು. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನಮ್ಮ ಅಲೋಚನೆಗಳು ಏನೇ ಇರಲಿ, ವಾದಗಳು ಯಾವುದೇ ಸಿದ್ಧಾಂತವನ್ನು ಪ್ರತಿಪಾದಿಸಲಿ; ಗೆಜ್ಜೆ ಹೆಣ್ಣಿಗೆ ಪ್ರಿಯವಾಗಿದ್ದರೆ, ಗೆಜ್ಜೆ ಹಾಕಿದ ಹೆಣ್ಣು ಗಂಡಿಗೆ ಪ್ರಿಯ.

  ಗೆಜ್ಜೆಯ ಆವಿಷ್ಕಾರ ಯಾವ ಕಾಲದಲ್ಲಿ ಆಗಿರಬಹುದು? ಶಿಲಾಯುಗದಲ್ಲಿ ಮಾನವ, ಬಂಡೆಗಳ ಮೇಲೆ ಬಿಡಿಸಿದ ಚಿತ್ರಗಳಲ್ಲಿಯೂ ಗಂಡಿನ ಒಂದು ಕಾಲಲ್ಲಿ, ಹೆಣ್ಣಿನ ಎರಡು ಕಾಲಲ್ಲಿ ಶಬ್ದ ಬಾರದ “ಕಾಲ್ಕಡಗ’ದ ಕುರುಹುಗಳಿವೆ. ಆದರೆ, ಅವುಗಳನ್ನು ಗೆಜ್ಜೆ ಎನ್ನಲಾಗುವುದಿಲ್ಲ. ನಾನು ನೋಡಿದ ಗೆಜ್ಜೆಯ ಅತೀ ಹಳೆಯ ಚಿತ್ರವೆಂದರೆ ಅದು ನೃತ್ಯಗಾತಿಯರ ಕಾಲಲ್ಲಿ. ಅದೇ ಅಲ್ಲದಿದ್ದರೂ ಅಂಥದ್ದೇ ಸಣ್ಣರೀತಿಯ ಗೆಜ್ಜೆಗಳು ಹೆಣ್ಣುಮಕ್ಕಳ ಕಾಲಲ್ಲಿ ಕಂಡು ಬರತೊಡಗಿತು. 

  ಈಗ ಹೆಣ್ಣು- ಗಂಡಿನ ಅಡಿಯಾಳಲ್ಲ. ಆಕೆ ಗಂಡಿಗೆ ವಿಧೇಯಳಾಗಿರಬೇಕೆಂದಿಲ್ಲ ಎನ್ನುವ ಕಾಲ. ಬಿಂದಿ, ಬಳೆ, ಸರವನ್ನು ಬದಿಗೊತ್ತಿ, ಪ್ಯಾಂಟ್‌ ಶರ್ಟ್‌ ಹಾಕಿ ತಾನು ಗಂಡಿಗೆ ಸರಿಸಮಾನಳು ಎನ್ನುವ ಕಾಲ. ಸ್ತ್ರೀಯ ಸ್ವತ್ತಾಗಿದ್ದ ಗೆಜ್ಜೆಯೂ ಬದಿಗೆ ಬಿದ್ದಿದೆ. ಆದರೆ, ಸಂಪೂರ್ಣವಾಗಿ ಬದಿಗೆ ಹೋಯಿತು ಎನ್ನುವಂತಿಲ್ಲ. ಫ್ಯಾಷನ್‌ ಬದಲಾದಂತೆ ಒಂದು ಕಾಲಿಗೆ ಶಬ್ದವಿಲ್ಲದ ಆ್ಯಂಕ್ಲೆಟ್‌ ಬಂದರೆ, ಸೀರೆ, ಲಂಗ ಹಾಕಿದ ಹೆಣ್ಣು ಸದ್ದು ಮಾಡದ ಸಣ್ಣ ಗೆಜ್ಜೆ ಧರಿಸತೊಡಗಿದ್ದಾರೆ. ಆದರೂ, ಗೆಜ್ಜೆಗಳ ಶಬ್ದ ಸಂಪೂರ್ಣವಾಗಿ ನಿಂತಿಲ್ಲ. ಚಿಕ್ಕಮಕ್ಕಳ ಕಾಲಲ್ಲಿ ಘಲ್‌ಘಲ್‌ ನಾದ ಕೇಳಿಬರುತ್ತಲೇ ಇದೆ. ಗೆಜ್ಜೆ ಮನೆ ತುಂಬಾ ಸದ್ದು ಮಾಡುತ್ತಲೇ ಇವೆ. ಕೆಲ ಹೆಣ್ಣುಮಕ್ಕಳು ಖುಷಿಯಿಂದಲೇ ಕಿಣಿ ಕಿಣಿ ಗೆಜ್ಜೆ ಧರಿಸಿ ನಲಿಯುತ್ತಾರೆ. ಪ್ರಸಿದ್ಧ ಹಿಂದಿ ಸಂಗೀತಗಾರ ಬಪ್ಪಿ ಲಹರಿ, ಹೆಂಗಸರನ್ನೂ ಮೀರಿಸುವಂತೆ ಕುತ್ತಿಗೆಗೆ ಡಜನುಗಟ್ಟಲೆ ಸರ, ಕೈಗೆ ಬ್ರೇಸ್ಲೆಟ್‌ ಹಾಕಿಕೊಂಡರೂ ಗೆಜ್ಜೆ ಹಾಕುವ ಸಾಹಸ ಮಾಡಿದಂತಿಲ್ಲ! 

Advertisement

  ಗೆಜ್ಜೆ ಎನ್ನುವುದು ನನ್ನ ಬಾಲ್ಯದ ನೆನಪುಗಳೊಂದಿಗೆ ಬೆಸೆದುಕೊಂಡಿದೆ. ಗೆಜ್ಜೆಯ ಶಬ್ದ ಕಿವಿಗೆ ಬಿದ್ದರೆ ಬಾಲ್ಯವೆಂಬ ಸಿನಿಮಾದ ರೀಲು ಬಿಚ್ಚಿಕೊಳ್ಳುತ್ತದೆ. ಒಂದು ದಿನ ಸಂಜೆ ಶಾಲೆಯಿಂದ ಬರುತ್ತಿದ್ದಂತೆಯೇ ಚೀಲವನ್ನು ಒಂದು ಮೂಲೆಗೆ, ಚಪ್ಪಲಿಯನ್ನು ಮತ್ತೂಂದು ಮೂಲೆಗೆ ಎಸೆದು ಅಳುತ್ತ ಕೂತಿದ್ದ ನನ್ನನ್ನು ಅಮ್ಮ, “ಹೇಳೇ, ಎಂತ ಆಯಿತಾ?’ ಎಂದು ಕೇಳಿದರು. “ನಂಗ್‌ ಗೆಜ್ಜೆ ಬೇಕ್‌’ ಎಂದೆ ಅಳುತ್ತಾ. ಅಮ್ಮ ಕೈ ಹಿಡಿದು ಎಬ್ಬಿಸುತ್ತ, “ಅಲ್ಲ, ನೀನಿನ್ನೂ ಸಣ್ಣವಳು. ಅದು ಬಿದ್‌ ಹೋದ್ರೂ ನಿಂಗ್‌ ಗೊತ್ತ ಆತಿಲ್ಲ. ಮೂರನೇ ಕ್ಲಾಸಲ್ಲಿ ಫ‌ಸ್ಟ್ ಬಾ. ನಾಲ್ಕನೇ ಕ್ಲಾಸಿಗೆ ಹೋಪತ್ತಿಗೆ ಗೆಜ್ಜೆ ತೆಗ್ಸಿ ಕೊಡುವಾ’ ಎಂದಾಗ ನನ್ನ ಅಳು ತಾರಕಕ್ಕೇರಿತು. “ನಂಗ್‌ ಗೆಜ್ಜೆ ಬೇಕೇ ಬೇಕ್‌. ನನ್ನ ಫ್ರೆಂಡ್ಸ್ ಶೋಭಾ, ಪೂರ್ಣಿಮಾ ಎಲ್ಲರ ಹತ್ತಿರ ಗೆಜ್ಜೆ ಇತ್‌’ ಅಂದೆ. ನನ್ನ ಇಂಥ ಹಠಗಳಿಗೆಲ್ಲಾ ಅಮ್ಮ ಕ್ಯಾರೇ ಅನ್ನುತ್ತಿರಲಿಲ್ಲ. ಅರ್ಧ ಗಂಟೆಯಾದರೂ ನನ್ನ ಅಳು ನಿಲ್ಲುವ ಲಕ್ಷಣ ಕಾಣದಾದಾಗ, ಹೊಟ್ಟೆ ಚುರುಗುಟ್ಟಿರಬೇಕು. “ಅಪ್ಪಯ್ಯ ಬರಲಿ, ಹೇಳುವಾ. ನೀ ಈಗ ಕಾಪಿ ಕುಡಿ’ ಎನ್ನುತ್ತಾ ನನ್ನನ್ನೆಬ್ಬಿಸಿದಳು. ರಾತ್ರಿ ಅಪ್ಪ, ಅಮ್ಮ ನನ್ನ ಗೆಜ್ಜೆಯ ಕೋರಿಕೆಯ ಬಗ್ಗೆ ಮಾತಾಡಿಕೊಂಡಿರಬೇಕು.

  ಶನಿವಾರ ಸಂಜೆ ನಮ್ಮ ದಂಡು, ಊರಿನ ಪ್ರಸಿದ್ಧ ಬೆಳ್ಳಿ ಅಂಗಡಿಗೆ ಹೊರಟಿತು. ಅಂಗಡಿಯವರು ತಮ್ಮಲ್ಲಿದ್ದ ಸುಮಾರು ಇಪ್ಪತ್ತೈದು ಬಗೆಯ ಗೆಜ್ಜೆ ತೋರಿಸಿದರೂ ನನಗೆ ಸಮಾಧಾನವಿಲ್ಲ. ಎಲ್ಲದಕ್ಕೂ ಬೇಡ ಎನ್ನುವಂತೆ ತಲೆಯಲ್ಲಾಡಿಸುತ್ತಾ, “ಪೂರ್ಣಿಮಾಳ ಕಾಲಲ್ಲಿದ್ದ ಹಾಂಗಿದ್ದೇ ಬೇಕು’ ಎನ್ನುತ್ತಾ ಅಳು ಮೂತಿ ಮಾಡಿದೆ. ಕಡೆಗೆ ಪೂರ್ಣಿಮಾಳ ಕಾಲಲ್ಲಿದ್ದ ಗೆಜ್ಜೆ ಥರದ್ದನ್ನು ಹುಡುಕುತ್ತ ಕುಂದಾಪುರಕ್ಕೇ ಪ್ರದಕ್ಷಿಣೆ ಬಂದೆವು. ಅಂತೂ ಯಾವುದೋ ಅಂಗಡಿಯಲ್ಲಿ ನನ್ನ ಜೀವದ ಗೆಳತಿ ಪೂರ್ಣಿಮಾಳ ಕಾಲಲ್ಲಿದ್ದ ಥರದ್ದೇ ಗೆಜ್ಜೆ ಸಿಕ್ಕಿತು. ಬಹುಶಃ ಅದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಿರಬೇಕು ಅದು. ಆದರೆ, ನನ್ನ ಮೊದಲ ಗೆಜ್ಜೆಯ ಶಬ್ದ ಕೇಳುವಷ್ಟರಲ್ಲಿ ತಮ್ಮ ಬಿದ್ದು ಪೆಟ್ಟು ಮಾಡಿಕೊಂಡ. ಅಂಗಡಿ ಅಂಗಡಿ ಹತ್ತಿ ಇಳಿಯುವಷ್ಟರಲ್ಲಿ ಅಮ್ಮ ಕೊಡೆ ಕಳೆದುಕೊಂಡಿದ್ದಳು. ಕಾಲಿಗೆ ಗೆಜ್ಜೆ ಬಂದದ್ದು ಹೆಚ್ಚು ಸಂತೋಷವೋ, ಇಲ್ಲ ಶಾಲೆಯಲ್ಲಿ ಎಲ್ಲರಿಗೂ ಗೆಜ್ಜೆ ತೋರಿಸಿ ಎಲ್ಲರ ಗಮನ ನನ್ನತ್ತ ಸೆಳೆಯುವುದು ಹೆಚ್ಚು ಸಂತೋಷವೋ ಗೊತ್ತಿಲ್ಲ. ಮರುದಿನ, ಯುದ್ಧದಲ್ಲಿ ಗೆದ್ದು ಬಂದ ಸೇನಾನಿಯಂತೆ ನಾನು ಶಾಲೆಗೆ ಹೋಗಿ¨ªೆ. ಎಲ್ಲರಿಗೂ ಗೆಜ್ಜೆ ತೋರಿಸುವ ಗಲಾಟೆಯಲ್ಲಿ ಅಪ್ಪಿ ಟೀಚರಿಂದ ಎರಡು ಏಟೂ ಬಿತ್ತು. ಮನೆಯಲ್ಲೂ ಬಂದು ಹೋದವರಿಗೆಲ್ಲ ಗೆಜ್ಜೆ ತೋರಿಸುವ ಗೌಜು ನನ್ನದು. ಗೆಜ್ಜೆ ಶಬ್ದ ದೊಡ್ಡದಾಗಿ ಎಲ್ಲರಿಗೂ ಕೇಳಿಸಲಿ ಎಂಬ ಉದ್ದೇಶದಿಂದಲೇ ಸುಮ್ಮನೆ ಆ ಕಡೆಯಿಂದ ಈ ಕಡೆಗೆ ಓಡುತ್ತಿ¨ªೆ. ರಗಳೆ ತಡೆಯಲಾರದ ಮನೆಯವರು “ಗೀತು, ಸುಮ್ಮನೆ ಒಂದ್‌ ಬದಿಯಲ್ಲಿ ಕೂತ್ಕಾ ಕಾಂಬ’ ಎನ್ನುತ್ತಿದ್ದರು.

   ಅವತ್ತು ಎಂದಿನಂತೆ ಶಾಲೆ ಬಿಟ್ಟವಳು ಕುಣಿಯುತ್ತ, ಹಾರುತ್ತಾ ಗೇಟು ತೆರೆದು ಒಳಗೆ ಬರುತ್ತಿದ್ದಾಗ ನನ್ನ ಒಂದು ಕಾಲಲ್ಲಿ ಗೆಜ್ಜೆ ಇರಲಿಲ್ಲ. ಅದು, ಯಾವಾಗ ನನ್ನ ಕಾಲಿನಿಂದ ಉದುರಿತ್ತೋ ಗೊತ್ತಾಗಲಿಲ್ಲ. ಹೆದರಿಕೆ, ಅಳು ಎಲ್ಲವೂ ಒಟ್ಟಿಗೇ ಬಂತು. ಗಟ್ಟಿಯಾಗಿ ಅಳಲೂ ಹೆದರಿಕೆ. ವಿಷಯ ಗೊತ್ತಾಗಿಬಿಟ್ಟರೆ ಅಂತ. ನನ್ನ ಒಂದು ಕಾಲಲ್ಲಿ ಗೆಜ್ಜೆ ಇಲ್ಲದ್ದು ಮೊದಲು ನನ್ನ ತಮ್ಮನ ಕಣ್ಣಿಗೆ ಬಿತ್ತು. “ಅಮ್ಮ, ಅಮ್ಮ… ಅಕ್ಕನ ಒಂದ್‌ ಕಾಲಲ್ಲಿ ಗೆಜ್ಜೆ ಇಲ್ಲ’ ಎನ್ನುತ್ತಾ ಚಾಡಿ ಹೇಳಲು ತಡಮಾಡಲಿಲ್ಲ. ತಮ್ಮನ ಚಾಡಿ ಮಾತು, ಅಮ್ಮನ ತನಿಖೆಯಲ್ಲಿ ಮುಂದುವರಿದು, ಗೆಜ್ಜೆ ಕಳೆದುಹೋದದ್ದು ಖಂಡಿತವಾದಾಗ ಬೆನ್ನಿಗೆ ನಾಲ್ಕು ಗುದ್ದು ಬಿತ್ತು. “ಹೇಳಿದ್ದೆ ಮೊದಲೇ, ನಿಂಗೆ ಈಗ್ಲೆà ಬ್ಯಾಡ ಅನ್ನಕಂಡ್‌, ಶುದ್ಧ ಕಪಿಗಳು’ ಎನ್ನುತ್ತಾ ಇದ್ದ ಒಂದು ಗೆಜ್ಜೆಯನ್ನೂ ಬಿಚ್ಚಿಟ್ಟಳು. ಮತ್ತೆ ಯಾರ ಕಾಲಲ್ಲಿ ಗೆಜ್ಜೆ ಕಂಡರೂ ಕಾಣದಂತೆ ಇರುತ್ತಿದ್ದೆ. ನನ್ನ ಕಾಲಿಗೆ ಮತ್ತೆ ಗೆಜ್ಜೆ ಬಂದದ್ದು ಎಂಟನೆಯ ಕ್ಲಾಸಿನಲ್ಲಿ, ಲೆಕ್ಕದಲ್ಲಿ ನೂರಕ್ಕೆ ನೂರು ತೆಗೆದುಕೊಂಡಾಗ. ಗೆಜ್ಜೆ ಎಷ್ಟು ಚೆಂದವಿದ್ದರೂ ಬೆಳ್ಳಿಯ ಗೆಜ್ಜೆಗಳು ನಮ್ಮ ಕರಾವಳಿಯಲ್ಲಿ ಕಪ್ಪಾಗಲು ಹೆಚ್ಚು ದಿನ ಬೇಡ. ಮತ್ತೆ ಎರಡು- ಮೂರು ವರ್ಷಕ್ಕೊಮ್ಮೆ ಕಾಲಲ್ಲಿದ್ದ ಗೆಜ್ಜೆ ಬದಲಾಗುತ್ತಾ ಹೋಯಿತು. ಆ ಸಮಯದ ಫ್ಯಾಷನ್‌ಗೆ ತಕ್ಕಂತೆ ಗೆಜ್ಜೆಗಳು ಬಂದವು. ಮದುವೆಯ ಸಮಯಕ್ಕಂತೂ ಅತೀ ಚೆಂದದ ಗೆಜ್ಜೆಯನ್ನೇ ಖರೀದಿಸಿದ್ದೆ. ಆದರೆ, ಮೊದಲ ರಾತ್ರಿಯಲ್ಲಿಯೇ ಪತಿರಾಯರು, “ಮೊದಲು ಈ ಗೆಜ್ಜೆಯನ್ನು ಬಿಚ್ಚಿಡು ಮಾರಾಯತಿ’ ಎಂದರು. ಸುಮ್ಮನೆ ಹೇಳಿದ್ದನ್ನು ಕೇಳಿದೆ. ಈ ಇಪ್ಪತ್ತೈದು ವರ್ಷಗಳ ದಾಂಪತ್ಯದಲ್ಲಿ ಹಲವು ಬಾರಿ ಗೆಜ್ಜೆ ಹಾಕಿಕೊಂಡರೂ, ಗಂಡನಿಗೋ, ಮಕ್ಕಳಿಗೋ ರಗಳೆ ಎನಿಸಿ ಬಿಚ್ಚಿಡುತ್ತಿ¨ªೆ. ಆದರೂ, ಗೆಜ್ಜೆಯ ಶಬ್ದ ಹಳೆಯ ನೆನಪುಗಳನ್ನು, ಹಲವಾರು ಪ್ರಶ್ನೆಗಳನ್ನು ಮನದಲ್ಲಿ ಮೂಡಿಸುತ್ತದೆ. ಪುಟ್ಟ ಪುಟ್ಟ ಕತೆಗಳನ್ನು ಹರಳುಗಟ್ಟಿಸಿದೆ.

– ಗೀತಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next