Advertisement

ಹೂಳು ತುಂಬಿದ ಬಂದರು: ಮೀನು ಇಳಿಸಲು ಕಾರ್ಮಿಕರ ಹಿಂದೇಟು

10:07 AM Nov 24, 2022 | Team Udayavani |

ಮಲ್ಪೆ: ಏಷ್ಯಾದ ಅತೀ ದೊಡ್ಡ ಸರ್ವ ಋತು ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ತಂದ ಮೀನನ್ನು ಬೋಟ್‌ನಿಂದ ಇಳಿಸುವುದು ದೊಡ್ಡ ಸಾಹಸದ ಕೆಲಸವಾಗಿದೆ.

Advertisement

ಕಾರಣ ಕಳೆದ 7-8 ವರ್ಷಗಳಿಂದ ಡ್ರೆಜ್ಜಿಂಗ್‌ ಕೆಲಸ ನಡೆಯದಿರುವುದರಿಂದ ಕೆಲಸದ ವೇಳೆ ವ್ಯಕ್ತಿ ಕಾಲುಜಾರಿ ಬೋಟ್‌ನಿಂದ ನೀರಿಗೆ ಬಿದ್ದರೆ, ಬದುಕುವ ಸಾಧ್ಯತೆಯೇ ಇಲ್ಲ. ನೀರಿಗೆ ಬಿದ್ದ ವ್ಯಕ್ತಿ ಹೂಳಿನಡಿಯಲ್ಲಿ ಸಿಲುಕಿ ಮೃತದೇಹವನ್ನು ಪತ್ತೆಮಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇದೀಗ ಜೀವ ಕಳೆದುಕೊಂಡವರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯನ್ನು ನೀಡದೆ ಬಾಕಿ ಇರಿಸಿಕೊಂಡಿದೆ.

ಮೀನುಗಾರಿಕೆ ಮುಗಿಸಿ ಬಂದ ಬೋಟ್‌ಗಳಲ್ಲಿ ಮುಂಜಾನೆ 4 ಗಂಟೆಯಿಂದ ಕನ್ನಿ ಮೀನುಗಾರರಿಂದ ಮೀನು ಇಳಿಸುವ ಕಾಯಕ ನಡೆಯುತ್ತದೆ. ಕತ್ತಲೆಯಲ್ಲಿ ಕೆಲಸ ಮಾಡುವುದರಿಂದ ಇವರು ಒಂದು ವೇಳೆ ಕಾಲು ಜಾರಿ ನೀರಿಗೆ ಬಿದ್ದರೆ ಮೇಲೇಳಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಬಹುತೇಕ ಮಂದಿ ಭಯದಿಂದ ಇದೀಗ ಮೀನು ಇಳಿಸಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಇದು ಸಹಜವಾಗಿಯೇ ಈ ಭಾಗದ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ತಂಗುದಾಣ ಸದ್ಯ ಮೃತ್ಯುಕೂಪ

2 ಸಾವಿರಕ್ಕೂ ಅಧಿಕ ಬೋಟ್‌ಗಳು ಲಂಗರು ಹಾಕಬಹುದಾದ ಸುಂದರ ಮೀನುಗಾರಿಕಾ ಬಂದರು ಕಳೆದ 8 ವರ್ಷದಿಂದ ಹೂಳು ತುಂಬಿಕೊಂಡು ಅದೆಂಥ ಅಪಾಯಕಾರಿ ಸ್ಥಿತಿ ತಲುಪಿದೆ. ಪ್ರತೀ ವರ್ಷ ಕನಿಷ್ಠ 20 ಮಂದಿ ಮೀನುಗಾರಿಕಾ ಕಾರ್ಮಿಕರು ಇಲ್ಲಿ ಕಾಲು ಜಾರಿ ಬಿದ್ದು ಸಾಯುತ್ತಿದ್ದಾರೆ. ಅದ್ಯಾವುದೋ ರಾಜ್ಯದಿಂದ ಬಂದ ಈ ಕಾರ್ಮಿಕರ ಸಾವಿನ ಲೆಕ್ಕ ಇಟ್ಟವರಿಲ್ಲ. ಬಡಜನರ ಸಾವಿಗೆ ಬೆಲೆ ಇಲ್ಲ ಎನ್ನುವಂತಾಗಿದೆ. ಇದರಿಂದ ಕೇವಲ ಜೀವ ಅಪಾಯ ಮಾತ್ರವಲ್ಲ, ಬೋಟ್‌ಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಆದರೆ ಸರಕಾರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.

Advertisement

ಸಿಗದ ಸಂಕಷ್ಟ ಪರಿಹಾರ ನಿಧಿ

ಸಮುದ್ರ ಮೀನುಗಾರಿಕೆಯಲ್ಲಿ ದುರ್ಮರಣ ಹೊಂದಿದ ಮೀನುಗಾರರ ಕುಟುಂಬಕ್ಕೆ 6 ಲಕ್ಷ ರೂ. ಸಂಕಷ್ಟ ಪರಿಹಾರ ನಿಧಿಯನ್ನು ನೀಡುವ ಬಗ್ಗೆ ಸರಕಾರ ಘೋಷಿಸಿತ್ತು. ಆದರೆ ಮಲ್ಪೆಯಲ್ಲಿ ಕಳೆದ 5-6 ವರ್ಷಗಳಿಂದ ನೀರಿಗೆ ಬಿದ್ದು 100ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಸರಕಾರ ಮಾತ್ರ ಮೃತರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯನ್ನು ನೀಡದೆ ಬಾಕಿ ಇರಿಸಿದೆ. ಕಳೆದ 2 ವರ್ಷಗಳಿಂದ ಕರಾವಳಿಯಲ್ಲಿ 35 ಕ್ಕೂ ಅಧಿಕ ಅರ್ಜಿಗಳು ಸರಕಾರಕ್ಕೆ ಸಲ್ಲಿಕೆಯಾಗಿವೆ. ಸುಮಾರು 2 ಕೋ.ರೂ. ಬಾಕಿ ಇದೆ. ಎನ್ನುತ್ತಾರೆ ಡೀಪ್‌ಸಿ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್‌ ಸುವರ್ಣ. ಕಳೆದೊಂದು ವರ್ಷದಿಂದ ಮೀನುಗಾರರ ಮತ್ಸ್ಯಶ್ರಯ ಯೋಜನೆಯ ಹಣವೂ ಬಿಡುಗಡೆಯಾದರೆ ಕೈ ಸೇರಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.

ಪರಿಹಾರಕ್ಕೆ ಕ್ರಮ: ಬಂದರಿನ ಹೂಳು ತೆಗೆಯಲು ಈಗಾಗಲೇ ಟೆಂಡರ್‌ ಆಗಿದೆ. ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ನಡೆಯಲಿದೆ ಈ ಬಗ್ಗೆ ಎಲ್ಲ ಪ್ರಯತ್ನಗಳು ನಡೆದಿದೆ. ದುರ್ಮರಣ ಹೊಂದಿದವರಿಗೆ ಸಂಕಷ್ಟ ಪರಿಹಾರ ನಿಧಿ ಬಾಕಿ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಇದ್ದಲ್ಲಿ ತತ್‌ಕ್ಷಣ ಪರಿಹಾರ ನೀಡುವಲ್ಲಿ ಪ್ರಯತ್ನಿಸಲಾಗುವುದು. ಕೆ. ರಘುಪತಿ ಭಟ್‌, ಶಾಸಕರು

ಬಿದ್ದರೆ ಹೆಣವೂ ಸಿಗಲ್ಲ: ಮುಂಜಾನೆ ನಾಲ್ಕು ಗಂಟೆಗೆ ಬಂದರಿನಲ್ಲಿ ಕೆಲಸ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ರಾತ್ರಿ ಬೋಟ್‌ನಲ್ಲಿ ಬಂದ ಮೀನುಗಳನ್ನು ಖಾಲಿ ಮಾಡುವ ಕೆಲಸ ನಡೆಯುತ್ತಿರುತ್ತದೆ. ಈ ವೇಳೆ ಕಾರ್ಮಿಕರು ಅಚಾನಕ್ಕಾಗಿ ನೀರಿಗೆ ಬೀಳುವ ಪ್ರಮೇಯ ಹೆಚ್ಚು. ಬಿದ್ದವರ ಹೆಣವೂ ಇಲ್ಲಿ ಸಿಗುತ್ತಿಲ್ಲ. ಸರಕಾರ ಮೀನುಗಾರರ ಮೇಲೆ ಚೆಲ್ಲಾಟವಾಡದೆ ತತ್‌ಕ್ಷಣ ಸಮಸ್ಯೆ ಪರಿಹರಿಸಬೇಕು. ದಯಕರ ವಿ. ಸುವರ್ಣ, ಅಧ್ಯಕ್ಷರು ಕನ್ನಿ ಮೀನುಗಾರರ ಸಂಘ, ಮಲ್ಪೆ

ಟೆಂಡರ್‌ ಪ್ರಕಿಯೆ: ಡ್ರೆಜ್ಜಿಂಗ್‌ಗೆ ನಡೆಸಲು ಸರಕಾರದಿಂದ ಅನುಮೋದನೆ ಸಿಕ್ಕಿದೆ. ಟೆಂಡರ್‌ ಪ್ರಕಿಯೆ ನಡೆಯುತ್ತಿದೆ. ತಿಂಗಳೊಳಗೆ ಎಲ್ಲ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭವಾಗಲಿದೆ. ಚನಲ್‌ ಮತ್ತು ಬಂದರಿನ ಮೂರು ಹಂತದ ಜೆಟ್ಟಿಯ ಡ್ರೆಜ್ಜಿಂಗ್‌ ನಡೆಯಲಿದೆ. –ಉದಯ ಕುಮಾರ್‌, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಬಂದರು ಇಲಾಖೆ

-ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next