Advertisement

ಸಿಲಿಕಾನ್‌ ಸಿಟಿ ಈಗ ಆರೋಗ್ಯ ಪ್ರವಾಸೋದ್ಯಮ ಹಬ್‌

06:10 PM Nov 29, 2019 | Suhan S |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವೈದ್ಯಕೀಯ ಪ್ರವಾಸೋದ್ಯಮ (ಹೆಲ್ತ್‌ ಟೂರಿಸಂ) ಜನಪ್ರಿಯಗೊಳ್ಳುತ್ತಿದೆ. ಕಳೆದ 3-4 ವರ್ಷಗಳಿಂದ ವಾರ್ಷಿಕ 40 ಸಾವಿರಕ್ಕೂ ಹೆಚ್ಚು ವಿದೇಶಿಗರು ಬಂದು ಚಿಕಿತ್ಸೆ ಪಡೆದು ಗುಣಮುಖವಾಗಿ ತಮ್ಮ ದೇಶಗಳಿಗೆ ಮರಳುತ್ತಿದ್ದಾರೆ.

Advertisement

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಮಾಹಿತಿ ಪ್ರಕಾರ ವಾರ್ಷಿಕ 40 ಸಾವಿರಕ್ಕೂ ಹೆಚ್ಚಿನ ವಿದೇಶಿಗರು ಚಿಕಿತ್ಸೆಗೆಂದು ಬೆಂಗಳೂರಿಗೆಆಗಮಿಸುತ್ತಿದ್ದಾರೆ. ಈ ಪ್ರಮಾಣ ವಾರ್ಷಿಕ ಶೇ.5ರಷ್ಟುಹೆಚ್ಚಳವಾಗುತ್ತಿದೆ. ಪ್ರವಾಸೋದ್ಯಮ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಭಾರತಕ್ಕೆ ವೈದ್ಯಕೀಯ ಕಾರಣಕ್ಕಾಗಿ ಬಂದ ವಿದೇಶಿಯರ ಸಂಖ್ಯೆ 2016ರಲ್ಲಿ 4.2 ಹಾಗೂ 2017ರಲ್ಲಿ 4.3 ಲಕ್ಷ. ಇದರಲ್ಲಿ ಶೇ.15 ರಷ್ಟು ಮಂದಿ ವಿದೇಶಿಗರು ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಆರೋಗ್ಯ ವಲಯದ ಪರಿಣಿತರ ಪ್ರಕಾರ ದೇಶದಲ್ಲಿ ದೆಹಲಿ ಹೊರತು ಪಡಿಸಿದರೆ ಇತ್ತೀಚೆಗೆ ಬೆಂಗಳೂರಿನ ಆಸ್ಪತ್ರೆಗಳತ್ತ ವಿದೇಶಿಗರು ಹೆಚ್ಚು ಒಲವು ತೋರುತ್ತಿದ್ದಾರೆ.

ವಾರ್ಷಿಕ ಮಣಿಪಾಲ ಆಸ್ಪತ್ರೆಗೆ 18 ಸಾವಿರ, ನಾರಾಯಣ ಹೃದಯಾಲಯಕ್ಕೆ 12 ಸಾವಿರ, ಫೋರ್ಟಿಸ್‌ಗೆ 2,500, ಅಪೋಲೋ ಒಟ್ಟಾರೆ ರೋಗಿಗಳಲ್ಲಿ ಶೇ.10ರಷ್ಟು, ರೈಬೋ ಆಸ್ಪತ್ರೆಗೆ 1,000, ರಾಮಯ್ಯ ಮೆಮೋರಿಯಲ್‌ ಆಸ್ಪತ್ರೆಗೆ 300, ನಿಮ್ಹಾನ್ಸ್‌ ಗೆ 400, ಜಯದೇವ ಹೃದ್ರೋಗ ಆಸ್ಪತ್ರೆಗೆ 200ಕ್ಕೂ ಹೆಚ್ಚು ವಿದೇಶಿಗರು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಿದೇಶಿಗರಿಗೆ ಸಕಲ ಸೌಕರ್ಯ: ಖಾಸಗಿ ಆಸ್ಪತ್ರೆಗಳು ಬರುವ ವಿದೇಶಿಗರಿಗೆ ಆಗಮನದಿಂದ ಹಿಡಿದು ಚಿಕಿತ್ಸೆ ಪಡೆದು ಗುಣಮುಖವಾಗಿ ತೆರಳುವವರೆಗೂ ಎಲ್ಲಾ ರೀತಿಯ ಸೌಲಭ್ಯ ನೀಡುತ್ತಿವೆ. ವಿದೇಶಿ ರೋಗಿ ಸಂಪರ್ಕಿಸಿದರೆ ಮೊದಲು ವೈದ್ಯರೊಂದಿಗೆ ಪ್ರಾಥಮಿಕ ಸಮಾಲೋಚನೆ ನಡೆಲಾಗುತ್ತದೆ. ಬಳಿಕ ವೀಸಾ, ವಿಮಾನ ಟಿಕೆಟ್‌ ಬುಕ್ಕಿಂಗ್‌, ಇಲ್ಲಿನ ಓಡಾಟಕ್ಕೆ ವಾಹನ ಸೌಕರ್ಯ, ರೋಗಿಗಳ ಕುಟುಂಬಸ್ಥರಿಗೆ ವಸತಿ ಸೌಕರ್ಯ, ವಿದೇಶಿ ಮಾದರಿ ಊಟ, ಸ್ಥಳೀಯ ಪ್ರವಾಸ, ಅನುಕೂಲಕರ ಸೌಲಭ್ಯ ಒದಗಿಸಲಾಗುತ್ತಿದೆ. ನಗರ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ವಿದೇಶಿಗರಿಗಾಗಿಯೇ ವಿಶೇಷ, ಪ್ರತ್ಯೇಕ ವಿಭಾಗ ಹೊಂದಿವೆ.

ಯಾವ ದೇಶಗಳಿಂದ ಬರುತ್ತಿದ್ದಾರೆ?: ಬಾಂಗ್ಲಾದೇಶ, ಇರಾಕ್‌, ಸೌದಿ ಅರೇಬಿಯಾ, ಸೂಡಾನ್‌, ಕೀನ್ಯಾ, ಮಾಲ್ಡೀವ್ಸ್‌, ನೈಜೀರಿಯಾ, ಓಮನ್‌, ಸುಡಾನ್‌, ಯುಎಸ್‌, ಯುಎಇ, ಉಗಾಂಡ, ಬೆಲ್ಜಿಯಂ, ಡೆನ್ಮಾರ್ಕ್‌, ಇಂಗ್ಲೆಂಡ್‌, ಫ್ರಾನ್ಸ್‌, ಯೆಮನ್‌, ಶ್ರೀಲಂಕಾ. ಈ ಪೈಕಿ ಗರಿಷ್ಠ ಮಂದಿ ನಮ್ಮ ಓಮನ್‌ ಹಾಗೂ ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಿಂದ ಬರುತ್ತಿದ್ದಾರೆ.

Advertisement

ಯಾವ ಚಿಕಿತ್ಸೆಗೆ ಬರುತ್ತಾರೆ?: ಹೃದ್ರೋಗ ಸಮಸ್ಯೆ, ಪ್ಲಾಸ್ಟಿಕ್‌ ಸರ್ಜರಿ, ಯುರಾಲಜಿ, ನೆಫ್ರಾಲಜಿ, ಜನರಲ್‌ ಮೆಡಿಸಿನ್‌, ಆಥೋಪೆಡಿಕ್ಸ್‌, ಗ್ಯಾಸ್ಟ್ರೋಎಂಟ್ರಾಲಜಿ, ದಂತ ಚಿಕಿತ್ಸೆ, ಇಎನ್‌ಟಿ, ಒಬಿಜಿ, ಆಂಕಾಲಜಿ, ಪೀಡಿಯಾಟ್ರಿಕ್‌ ಸರ್ಜರಿ ಮುಂತಾದ ವಿಭಾಗದಲ್ಲಿ ವಿದೇಶಿಯರಿಂದ ಚಿಕಿತ್ಸೆಗೆ ಬೇಡಿಕೆ ಇದೆ.

ಬೆಂಗಳೂರು ಆಯ್ಕೆ ಯಾಕೆ?: ಸಿಂಗಾಪುರ, ಮಲೇಷ್ಯಾ, ನೂಯಾರ್ಕ್‌, ಲಂಡನ್‌ಗೆ ಹೋಲಿಸಿದರೆ ಬೆಂಗಳೂರು ದುಬಾರಿಯಲ್ಲ. ಜತೆಗೆ ಉತ್ತಮ ತಂತ್ರಜ್ಞಾನ, ಸಾರ್ವಜನಿಕ ಸೌಲಭ್ಯ, ಬಹುಭಾಷಾ ಪ್ರದೇಶ, ಉದ್ಯಾನನಗರಿ ಬಿರುದು, ತಣ್ಣಗಿನ ಹವಾಮಾನ ಸೇರಿದಂತೆ ವಿವಿಧ ಅಂಶಗಳು ವಿದೇಶಿಗರನ್ನು ಚಿಕಿತ್ಸೆಗೆ ಬೆಂಗಳೂರಿಗೆ ಬರಮಾಡಿಕೊಳ್ಳುತ್ತಿವೆ. ವಿದೇಶಿ ಆಸ್ಪತ್ರೆಗಳಿಗೆ ಹೋಲಿಸಿದರೆ ಭಾರತದಲ್ಲಿ ವೈದ್ಯಕೀಯ ವೆಚ್ಚ ಕಡಿಮೆ. ಅದರಲ್ಲೂ ದೆಹಲಿ, ಮುಂಬೈ ಹೋಲಿಸಿದರೆ ಬೆಂಗಳೂರು ಅಗ್ಗ ಎಂಬ ಮಾತಿದೆ ಎನ್ನುತ್ತಾರೆ ಆರೋಗ್ಯ ವಲಯದ ಪರಿಣಿತರು. ನಾರಾಯಣದ ಶೇ.10ರಂದು ರೋಗಿಗಳು

ವಿದೇಶಿಗರು: ನಾರಾಯಣ ಹೆಲ್ತ್‌ ಸಿಟಿ ಸಿಒಒ ಜೋಸೆಫ್ ಪಸಂಘ ಪ್ರಕಾರ, ನಾರಾಯಣ ಹೆಲ್ತ್‌ ಸಿಟಿ ಒಟ್ಟಾರೆ ರೋಗಗಳಲ್ಲಿ ಶೇ.10ರಷ್ಟು ವಿದೇಶಿಗರೇ ಇದ್ದಾರೆ. ಸರಾಸರಿ 12 ಸಾವಿರಕ್ಕೂ ಅಧಿಕ ವಿದೇಶಿಗರು ಚಿಕಿತ್ಸೆಗೆಂದು ಬರುತ್ತಿದ್ದಾರೆ. ವಿದೇಶಿಗರಿಂದ ಅಂಗಾಂಗ ಕಸಿಗೂ ಬೇಡಿಕೆಯಿದೆ. ವಾರ್ಷಿಕ ವಿದೇಶಿ ರೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ.

ತಂತ್ರಜ್ಞಾನ ಆಧಾರಿತ ಸೇವೆ: ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ “ಗ್ಲೋಬಲ್‌ ಎಕ್ಸಿಬಿಷನ್‌ ಆನ್‌ ಸರ್ವೀಸಸ್‌(ಜಿಐಎಸ್‌)’ ಸಮಾವೇಶದಲ್ಲಿ ಆರೋಗ್ಯ ವಲಯದ ಸೇವೆಗಳೇ ಪ್ರಧಾನವಾಗಿ ಚರ್ಚೆಯಾದವು. ಬೆಂಗಳೂರಿನಲ್ಲಿ ಲಭ್ಯವಿರುವ ತಂತ್ರಜ್ಞಾನ ಆಧಾರಿತ ಉತ್ಕೃಷ್ಟ ಆರೋಗ್ಯ ಸೇವೆಗಳು ಹಾಗೂ ದೇಶಿ ವಿದೇಶದಿಂದ ನಗರಕ್ಕೆ ಚಿಕಿತ್ಸೆಗಾಗಿ ಸಾವಿರಾರು ಮಂದಿ ಆಗಮಿಸುವ ಮೂಲಕ ಹೆಲ್ತ್‌ ಟೂರಿಸಂ ಹಬ್‌ ಆಗುತ್ತಿರುವ ಕುರಿತು ನಾರಾಯಣ ಹೆಲ್ತ್‌ ಚೇರ್ಮನ್‌ ಡಾ.ದೇವಿ ಶೆಟ್ಟಿ, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಚೇರ್ಮನ್‌ ಡಾ.ನಂದಕುಮಾರ್‌ ಜೈರಾಮ್‌ ಸೇರಿದಂತೆ ಅನೇಕ ಆರೋಗ್ಯ ವಲಯದ ಪರಿಣಿತರು ಮಾತನಾಡಿದರು.

ಆಯುಷ್‌ ಚಿಕಿತ್ಸೆಗೂ ಬೇಡಿಕೆ : ನಗರದಲ್ಲಿ ಸರ್ಕಾರಿ 10 ಸೇರಿದಂತೆ 2,000ಕ್ಕೂ ಹೆಚ್ಚು ಖಾಸಗಿ ಆಯುಷ್‌ ಚಿಕಿತ್ಸಾಲಯಗಳಿದ್ದು, ವಿದೇಶಿಗರು ಬಂದು ಚಿಕಿತ್ಸೆ ಪಡೆಯುವ ಮೂಲಕ ತಮ್ಮ ದೀರ್ಘ‌ಕಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ವಿದೇಶಿಗರು ಭಾರತ ಪ್ರವಾಸಕ್ಕೆ ಬರುತ್ತಿರುವುದಕ್ಕೆ 4ನೇ ಪ್ರಮುಖ ಕಾರಣವು ಆಯುರ್ವೇದ ಚಿಕಿತ್ಸೆಯಾಗಿದೆ. ಇನ್ನು ಹೊರಭಾಗಗಳಿಂದ ಬಂದವರು ಹೆಚ್ಚಿನದಾಗಿ ಪಂಚಕರ್ಮ ಚಿಕಿತ್ಸೆ ಹಾಗೂ ಪ್ರಕೃತಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎನ್ನುತ್ತಾರೆ ಆಯುಷ್‌ ವೈದ್ಯರು.

 

-ಜಯಪ್ರಕಾಶ್‌ ಬಿರಾದಾರ್‌

 

Advertisement

Udayavani is now on Telegram. Click here to join our channel and stay updated with the latest news.

Next