ಮಳವಳ್ಳಿ: ವೀಳ್ಯದೆಲೆ ಬೆಳೆಗಾರರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವೀಳ್ಯದೆಲೆ ಬೆಳೆಗಾರರ ಹೋರಾಟ ಸಮಿತಿ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಮೌನ ಹೋರಾಟ ನಡೆಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭರತ್ ರಾಜ್ ಮಾತನಾಡಿ, ತಾಲೂಕಿನ ಬಾಳೆಹೊನ್ನಿಗ, ಡಿ.ಕೆ.ಹಳ್ಳಿ, ನಿಟ್ಟೂರು, ಹುಸ್ಕೂರು, ಗೊಲ್ಲರಹಳ್ಳಿ, ದಾಸನ ದೊಡ್ಡಿ, ಪಟ್ಟಣ ಸೇರಿದಂತೆ ಹಲವೆಡೆ ವೀಳೈದೆಲೆ ಬೆಳೆದು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದ ಹಿಂದುಳಿದ ಗಂಗಾಮತಸ್ಥರ (ಬೆಸ್ತರು) ಜನಾಂಗದವರು ಈಗ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕೋವಿಡ್-19ದಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಬಳಿಕ ಬೆಳೆದ ವೀಳೈದೆಲೆಗೆ ಬೆಲೆ ಇಲ್ಲದೆ ಮಾರುಕಟ್ಟೆ ಸಮಸ್ಯೆಯಿಂದ ನಷ್ಟಕ್ಕೆ ಒಳಗಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಅಲ್ಲದೇ ಬಹುತೇಕ ಮಂದಿ ಗುತ್ತಿಗೆ ಆಧಾರದ ಮೇಲೆ ಬೇರೆಯವರ ಜಮೀನನ್ನು ಪಡೆದು ಬೆಳೆ ಬೆಳೆಯುತ್ತಿರುವ ಕಾರಣ ಅವ ರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜೀವನೋಪಾಯಕ್ಕಾಗಿ ಸರ್ಕಾರ ಕೊರೊನಾ ಪ್ಯಾಕೇಜಿನಡಿ ಸೂಕ್ತ ಪರಿಹಾರವನ್ನು ಎಲ್ಲಾ ಬೆಳೆಗಾರರಿಗೆ ನೀಡಬೇಕು. ಬೆಳೆ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಸಹಾಯಧನ ಹಾಗೂ ಬ್ಯಾಂಕ್ ಸಾಲ ನೀಡಬೇಕು. ವೀಳೈದೆಲೆ ಬೆಳೆಗೆ ಸಂಬಂಧಿಸಿದ ಪರಿಕರಗಳು ಮತ್ತು ಗೊಬ್ಬರ, ಔಷಧಿಗಳನ್ನು ಸಂಪರ್ಕವಾಗಿ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ತಹಶೀಲ್ದಾರ್ ಕೆ.ಚಂದ್ರಮೌಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಮಹೇಶ್‌ಕುಮಾರ್, ಶಂಕರ್ ಶಾಂತರಾಜ್, ಸ್ವಾಮಿ ನಾಗರಾಜ್, ವೆಂಕಟೇಶ್, ಕೃಷ್ಣ, ನಾಗರಾಜ್, ಸಿದ್ದರಾಜ್ ಭಾಗವಹಿಸಿದ್ದರು.